Take a fresh look at your lifestyle.

4,000 ಪೌರ ಕಾರ್ಮಿಕರು ಶೀಘ್ರದಲ್ಲಿ ಖಾಯಂ

ಬಿಬಿಎಂಪಿಯಲ್ಲಿ ಸದ್ಯ 1600 ಮಂದಿಯಷ್ಟೇ ಖಾಯಂ ಪೌರ ಕಾರ್ಮಿಕರಿದ್ದಾರೆ. ಉಳಿದ 18,500 ಮಂದಿ ಪೌರ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.

0
post ad

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 4,000 ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ.  ಈಗಾಗಲೇ ಅರ್ಜಿ ಸಲ್ಲಿಸಿರುವ ಪೌರ ಕಾರ್ಮಿಕರಲ್ಲಿ 4,000 ಜನರು ಖಾಯಂ ನೌಕರರಾಗಲಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆ ಹಾಗೂ ಇನ್ನಿತರೆ ಸ್ವಚ್ಛತಾ ಕಾರ್ಯಗಳಿಗಾಗಿ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಖಾಲಿ ಇರುವ ಗ್ರೂಪ್‌ ‘ಡಿ’ ವೃಂದಕ್ಕೆ ಸುಮಾರು ನಾಲ್ಕನೇ ಒಂದು ಭಾಗದಷ್ಟು ಪೌರ ಕಾರ್ಮಿಕರು ಇನ್ಮುಂದೆ ಖಾಯಂ ಆಗಲಿದ್ದಾರೆ. ಇದರಿಂದ ಒಂದು ದಶಕದ ಪೌರ ಕಾರ್ಮಿಕರ ಹೋರಾಟಕ್ಕೆ ಆರಂಭಿಕ ಮುನ್ನಡೆ ದೊರೆತಂತಾಗಿದೆ.
ರಾಜ್ಯ ಸರಕಾರವು 2010ರಲ್ಲಿ ಕೇವಲ 4 ಸಾವಿರ ಪೌರ ಕಾರ್ಮಿಕರ ಹುದ್ದೆಗಳ ಭರ್ತಿಗಷ್ಟೇ ಅನುಮೋದನೆ ನೀಡಿತ್ತು. 2018ರ ಫೆ.1ರಂದು ಹುದ್ದೆ ಭರ್ತಿಗೆ ಸರಕಾರ ಅಧಿಸೂಚನೆ ಹೊರಡಿಸಿತ್ತು. 2019ರ ಆ.17ರಂದು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿತ್ತು. ಎಲ್ಲ18,500 ಮಂದಿಯನ್ನು ಖಾಯಂಗೊಳಿಸಲು ಕಾರ್ಮಿಕ ಸಂಘಟನೆ ಪಟ್ಟು ಹಿಡಿದಿದ್ದರಿಂದ ನೇಮಕ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಇತ್ತೀಚೆಗೆ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾಸಂಘದ ಪದಾಧಿಕಾರಿಗಳೊಂದಿಗೆ ಬಿಬಿಎಂಪಿ ಆಯುಕ್ತರು ಸಭೆ ನಡೆಸಿ, ಹಂತ ಹಂತವಾಗಿ ಸರಕಾರದ ಅನುಮೋದನೆ ಪಡೆದು ಎಲ್ಲ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಭರವಸೆ ನೀಡಿದ್ದಾರೆ. ಹಾಗೆಯೇ, ನೇಮಕಾತಿಗೆ ವಿಧಿಸಿದ್ದ ಗರಿಷ್ಠ ವಯೋಮಿತಿಯನ್ನು 45 ವರ್ಷದಿಂದ 55 ವರ್ಷಕ್ಕೆ ಹೆಚ್ಚಿಸಲು ಸಮ್ಮತಿಸಲಾಗಿದೆ. ಹಾಗಾಗಿ, ಮೊದಲಿಗೆ 4 ಸಾವಿರ ಪೌರ ಕಾರ್ಮಿಕರ ಹುದ್ದೆಗಳ ಭರ್ತಿಗೆ ತಯಾರಿ ನಡೆಸಲಾಗಿದೆ.
ಬಿಬಿಎಂಪಿಯಲ್ಲಿ ಸದ್ಯ 1600 ಮಂದಿಯಷ್ಟೇ ಖಾಯಂ ಪೌರ ಕಾರ್ಮಿಕರಿದ್ದಾರೆ. ಉಳಿದ 18,500 ಮಂದಿ ಪೌರ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.
4 ಸಾವಿರ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿರುವವರನ್ನೇ ನೇಮಕ ಮಾಡಿಕೊಳ್ಳುವಂತೆ ಮಾಡಿಕೊಳ್ಳಲಾಗಿದೆ.