Take a fresh look at your lifestyle.

ಕಟ್ಟಡ ಕಾರ್ಮಿಕರ ಸೆಸ್ ಹಣದಲ್ಲಿ 900 ಕೋಟಿ ವೆಚ್ಚ, ಅಕ್ರಮದ ಆರೋಪ

0
post ad

ಬೆಂಗಳೂರು: ಕಾರ್ಮಿಕ ಇಲಾಖೆಯಿಂದ ಲಾಕ್‌ಡೌನ್‌ ಸಂದರ್ಭದಲ್ಲಿ ವಿತರಣೆಯಾದ ಅಗತ್ಯ ಆಹಾರ ಸಾಮಗ್ರಿ ಮತ್ತು ಕಟ್ಟಡ ಕಾರ್ಮಿಕರಿಗೆ ಪರಿಹಾರ ಧನ ವಿತರಣೆಯಲ್ಲಿ ಅಕ್ರಮ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ.
ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿದಲ್ಲಿರುವ ಸಾವಿರಾರು ಕೋಟಿ ಸೆಸ್ ಹಣದಲ್ಲಿ 900 ಕೋಟಿ ಬಳಸಲು ಸರ್ಕಾರ ಅನುಮೋದನೆ ನೀಡಿತ್ತು.

ಕಾರ್ಮಿಕ ಇಲಾಖೆ ಈ ಉದ್ದೇಶಗಳಿಗೆ ಮಾಡಿರುವ ವೆಚ್ಚ ಎನ್ನಲಾಗುತ್ತಿರುವ 900 ಕೋಟಿ ರೂ.ಗಳಿಗೆ ಅಧಿಕಾರಿ ವರ್ಗ ಸ್ಪಷ್ಟ ಮತ್ತು ಸಮಗ್ರ ಲೆಕ್ಕ ನೀಡದ ಕಾರಣ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅವ್ಯವಹಾರದ ಸಂಶಯ ವ್ಯಕ್ತಪಡಿಸಿತ್ತು.

ಇಲಾಖೆಯು ವಿಶೇಷ ಪ್ಯಾಕೇಜ್‌ನಡಿ ಘೋಷಣೆ ಮಾಡಲಾದ ತಲಾ 5 ಸಾವಿರ ರೂ.ನಂತೆ ಒಟ್ಟು 14,78,388 ಕಾರ್ಮಿಕರಿಗೆ 739.19 ಕೋಟಿ ರೂ. ಪಾವತಿಸಿದೆ. ಆದರೆ, ಈ ಪೈಕಿ 1,25,006 ಮಂದಿಗೆ ವಿತರಣೆ ಮಾಡಲಾಗಿರುವ 62 ಕೋಟಿ ರೂ. ಮೊತ್ತಕ್ಕೆ ಅಗತ್ಯ ದಾಖಲೆಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ನೀಡಿಲ್ಲ.

ಇನ್ನು, ಕಟ್ಟಡ ನಿರ್ಮಾಣ ಹಾಗೂ ವಲಸೆ ಕಾರ್ಮಿಕರಿಗೆ ಒಟ್ಟು 5.08 ಲಕ್ಷ ಆಹಾರ ಸಾಮಗ್ರಿಗಳ ಕಿಟ್‌ ವಿತರಿಸಲಾಗಿದೆ ಮತ್ತು 83.39 ಲಕ್ಷ ಸಿದ್ಧಪಡಿಸಿದ ಫುಡ್‌ ಪ್ಯಾಕೇಟ್‌ ವಿತರಿಸಲಾಗಿದೆ. ಈ ಉದ್ದೇಶಕ್ಕೆ 69.90 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕಾರ್ಮಿಕರ ಕಲ್ಯಾಣ ನಿಧಿಯಿಂದ 900 ಕೋಟಿ ರೂ. ವೆಚ್ಚ ಮಾಡಿದರೂ, ಈ ವೆಚ್ಚ ನಿರ್ವಹಣೆಯ ಲೆಕ್ಕ ಇಲಾಖೆ ಬಳಿ ಇಲ್ಲದಿರುವುದು ಸಂಶಯಕ್ಕೆ ಕಾರಣವಾಗಿದೆ.
ಪ್ರತಿ ಫುಡ್‌ ಪ್ಯಾಕೆಟ್‌ಗೆ 713 ರೂ. ವೆಚ್ಚ ಮಾಡಲಾಗಿದೆ ಎಂಬ ಅಂದಾಜುಗಳಿವೆ. ಹಲವು ಸಂಘಟನೆಗಳ ಮೂಲಗಳ ಪ್ರಕಾರ ಒಟ್ಟಾರೆ 900 ಕೋಟಿ ಹಣದಲ್ಲಿ ನೂರೈವತ್ತುಕ್ಕೂ ಹೆಚ್ಚು ಕೋಟಿ ಹಣ ದುರ್ಬಳಕೆಯಾಗಿದೆ ಎನ್ನಲಾಗುತ್ತಿದೆ.
ಕಿಟ್ ಗಳಲ್ಲಿ ಎಷ್ಟು ಆಹಾರ ಸಾಮಗ್ರಿದ್ದವು, ಬೆಲೆ ಎಷ್ಟಿತ್ತು ಎಂಬ ಸಾಮಾನ್ಯ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಉತ್ತರ ಇಲ್ಲ. ಇದರ ಬಗೆಗೆ ಫಲಾನುಭವಿಗಳನ್ನು ನೇರವಾಗಿ ಕೇಳಲು ಆಸ್ಪದವೂ ಇಲ್ಲ.
ಈ ಬಗೆಗೆ ಹಲವು ಕಾರ್ಮಿಕ ಸಂಘಟನೆಗಳು ಆರಂಭದಿಂದಲೂ ಸಂಶಯದ ಜೊತೆಗೆ ಆಕ್ರೋಶವನ್ನು ಹೊರಹಾಕಿದ್ದರೂ ಅಧಿಕಾರಿಗಳು ಪಾರದರ್ಶಕತೆಯನ್ನು ಮರೆಮಾಚಿದ್ದು ಮಾತ್ರ ಮತ್ತಷ್ಟು ಅನುಮಾನಗಳಿಗೆ ಇಂಬು ನೀಡಿದ್ದಂತಾಗಿದೆ.
ಸುಪ್ರೀಂ ಕೋರ್ಟ್ ನ ಪ್ರಧಾನ ನ್ಯಾಯಮೂರ್ತಿಗಳ ( ಸಿಜೆಐ) ರವರಿಗೆ ವಾರ್ಷಿಕ ವರದಿಯನ್ನು ಸಲ್ಲಿಸಬೇಕಾದ ನಿಗಮದಲ್ಲೇ ಇಂತಹ ಅಧಿಕಾರಿಗಳು ಗಂಭೀರವಾದ ಅಕ್ರಮವನ್ನು ನಡೆಸುತ್ತಾರೆ ಎಂದರೆ ಇನ್ನು ಅನ್ಯ ಇಲಾಖೆಗಳಲ್ಲಿ ಏನು ನಡೆಯಬಾರದು ಎಂದು ಯೂನಿಯನ್ ಮುಖಂಡರೇ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.