ಎಎಲ್ ಸಿ ಸಂತೋಷ್ ಹಿಪ್ಪರಗಿ ನಿವಾಸದ ಮೇಲೆ ಎಸಿಬಿ ದಾಳಿ ಲಕ್ಷಾಂತರ ಹಣ, ಮಹತ್ವದ ದಾಖಲೆಗಳು ಜಪ್ತಿ
ಎಎಲ್ ಸಿ - 3 ಸಂತೋಷ್ ಹಿಪ್ಪರಗಿ ವಿರುದ್ಧ ಈ ಹಿಂದೆ ಹಲವು ಭ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದವು. ಇವರ ವಿರುದ್ಧ ಎಸಿಬಿಗೂ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ವಿಜಯನಗರ ಆರ್ಪಿಸಿ ಬಡಾವಣೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ


ಬೆಂಗಳೂರು : ಲೇಬರ್ ಲೈಸನ್ಸ್ ನೀಡಲು ಲಂಚ ಇಟ್ಟು ಹಣ ಸಮೇತ ಸಿಕ್ಕಿಬಿದ್ದ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತ ವಿಭಾಗ -3 ರ ಎಎಲ್ ಸಿ ಸಂತೋಷ್ ಹಿಪ್ಪರಗಿ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹತ್ತು ಲಕ್ಷದ ಐವತ್ತು ಸಾವಿರ ರೂಪಾಯಿ ನಗದು ಪತ್ತೆಯಾಗಿದೆ.
ವಿಜಯನಗರ ಆರ್ಪಿಸಿ ಲೇಔಟ್ ನಲ್ಲಿರುವ ಸಂತೋಷ್ ಹಿಪ್ಪರಗಿಯವರ ಮನೆ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿದೆ.
ಮಾಲೂರು ಬಳಿಯ ಕಂಪನಿಯೊಂದರಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಪರವಾನಗಿ ನೀಡುವಂತೆ ಕೋರಿ 2017 ರ ಜನವರಿಯಲ್ಲಿ ಮಾಲೂರು ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಎರಡು ಲಕ್ಷದ ಲಂಚದ ಬೇಡಿಕೆಯೂ 1.80 ಲಕ್ಷ ರೂಪಾಯಿಗೆ ಡೀಲ್ ಅಂತಿಮವಾಗಿ ಹಣ ನೀಡುತ್ತಿದ್ದ ಸಮಯದಲ್ಲಿ ನಿವೃತ್ತ ಕಾರ್ಮಿಕ ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತು ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಹಿಪ್ಪರಗಿ ಇಬ್ಬರು ಕಾರ್ಮಿಕ ಭವದದಲ್ಲಿ ಎಸಿಬಿ ಗೆ ಸಿಕ್ಕಿ ಬಿದ್ದಿದ್ದರು.
ಇಬ್ಬರ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿದ್ದರು.
ಇನ್ನು, ಸಂತೋಷ್ ಹಿಪ್ಪರಗಿ ವಿರುದ್ಧ ಈ ಹಿಂದೆ ಹಲವು ಭ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದವು. ಇವರ ವಿರುದ್ಧ ಎಸಿಬಿಗೂ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ವಿಜಯನಗರ ಆರ್ಪಿಸಿ ಬಡಾವಣೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಆರೋಪಿ ಸಂತೋಷ್ ಹಿಪ್ಪರಗಿಯನ್ನು ತೀವ್ರ ವಿಚಾರಣೆ ನಡೆಸಿದಾಗ ಅನುಮಾನಾಸ್ಪದ ಹೇಳಿಕೆ ನೀಡಿದ್ದ. ಅನುಮಾನಗೊಂಡ ಎಸಿಬಿ ಅಧಿಕಾರಿಗಳು ಆರ್ಪಿಸಿ ಲೇಔಟ್ನಲ್ಲಿನ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ 10.5 ಲಕ್ಷ ರು. ನಗದು ಪತ್ತೆಯಾಗಿದ್ದು, ಕೆಲವು ಮಹತ್ವದ ದಾಖಲೆಗಳು ಸಿಕ್ಕಿವೆ. ಹಣದ ಮೂಲದ ಬಗ್ಗೆ ಎಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ದಾಖಲೆಗಳ ಪರಿಶೀಲನೆ ಕಾರ್ಯ ಇನ್ನೂ ಮುಂದುವರೆದಿದೆ, ತನಿಖೆಯ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟು ಮೊತ್ತದ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಚಿನ್ನಾಭರಣ ಹಾಗೂ ಆಸ್ತಿ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಆದಾಯಕ್ಕಿಂತೂ ಮೀರಿ ಅಕ್ರಮ ಆಸ್ತಿ ಗಳಿಸಿರುವುದು ಕಂಡು ಬಂದಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರತ್ಯೇಕ ಪ್ರಕರಣ ದಾಖಲಿಸಲಿದ್ದಾರೆ. ಎಸಿಬಿ ಬೆಂಗಳೂರು ಘಟಕದ ಎಸ್ಪಿ ಕುಲದೀಪ್ ಕುಮಾರ್ ಜೈನ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.