Take a fresh look at your lifestyle.

ಅರವಿಂದ್ ಗಾರ್ಮೆಂಟ್ಸ್ ಕಾರ್ಮಿಕರಿಂದ ಮೂರನೇ ದಿನದ ಪ್ರತಿಭಟನೆ

ಘಟಕದ ಲಾಕೌಟ್ ಗೆ ನಷ್ಟದ ಕಾರಣ ನೀಡುತ್ತಿರುವುದು ಕಾರ್ಮಿಕ ಕಾನೂನುಗಳ ಉಲ್ಲಂಘನೆಯೇ ಸರಿ...ಸಂಸ್ಥೆ ಲಾಭದಾಯಕವಾಗಿದ್ದಾಗ ಕಾರ್ಮಿಕರಿಗೆ ಕನಿಷ್ಠ ಪರಿಹಾರವನ್ನು ಕೊಡದೇ ಇರುವುದು ಅಮಾನವೀಯ..

0
post ad

ರಾಮನಗರ : ಅರವಿಂದ್ ಕಾರ್ಖಾನೆಯ ಕಾರ್ಮಿಕರು ಆಡಳಿತ ಮಂಡಳಿಯ ನಡೆ ಖಂಡಿಸಿ ಮೂರನೇ ದಿನವೂ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಅರವಿಂದ್ ಲೈಫ್‌ಸ್ಟೈಲ್‌ ಬ್ರಾಂಡ್‌ ಲಿಮಿಟೆಡ್ ಕಂಪನಿ ಶಾಶ್ವತ ಲಾಕ್ ಔಟ್ ಅನ್ನು ಘೋಷಿಸಿದ್ದರ ಪರಿಣಾಮ ಗಾರ್ಮೆಂಟ್ಸ್ ಕಾರ್ಮಿಕರು ಕಾರ್ಖಾನೆಯ ಮುಖ್ಯದ್ವಾರದಲ್ಲಿ ಕೂತು ತಮ್ಮ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.


ರಾಮನಗರದ ಅರವಿಂದ್ ಲೈಫ್‌ಸ್ಟೈಲ್‌ ಬ್ರಾಂಡ್‌ ಲಿಮಿಟೆಡ್ ಆಡಳಿತ ಮಂಡಳಿ ಯಾವುದೇ ಸೂಚನೆಯನ್ನು ನೀಡದೇ ಸುಮಾರು 66 ಕಾರ್ಮಿಕರು ಕೆಲಸ ಮಾಡುತ್ತಿದ್ದ ಘಟಕವನ್ನು ಮುಚ್ಚಿದ್ದಾರೆ. ದಶಕದಿಂದ ದುಡಿಯುತ್ತಿದ್ದ ಕಾರ್ಮಿಕರು ಬೇರೆ ಘಟಕದಲ್ಲಿ ಕೆಲಸ ನೀಡಬೇಕೆಂದು ಇಲ್ಲವೇ ವಾರ್ಷಿಕ ಅರ್ಧ ವೇತನದ ಪರಿಹಾರವನ್ನು ನೀಡುವಂತೆ ಆಗ್ರಹಿಸಿ ಪ್ರತಿಭಟನಾ ಹೋರಾಟವನ್ನು ಮುಂದುವರೆಸಿದ್ದಾರೆ.
ಕಾರ್ಮಿಕ ಇಲಾಖೆಯಲ್ಲಿ ರಾಜೀ ಸಂಧಾನ ಸಭೆ ನಡೆಯುತ್ತಿದ್ದು, ಯಥಾಸ್ಥಿತಿ ಕಾಪಾಡುವಂತೆ ಕಾರ್ಮಿಕ ಇಲಾಖೆ ಸೂಚನೆಯನ್ನು ನೀಡಿದ್ದರು, ಆಡಳಿತ ಮಂಡಳಿ ಅದನ್ನು ಪಾಲಿಸದೇ ಈ ಘಟಕದಲ್ಲಿರುವ ಸಾಮಗ್ರಿಗಳನ್ನು ಆಡಳಿತ ವರ್ಗ ಬೇರೆಡೆಗೆ ಸಾಗಿಸುತ್ತಿದೆ ಎನ್ನಲಾಗಿದೆ.
ಗಾರ್ಮೆಂಟ್ಸ್ ಅಂಡ್ ಟೆಕ್ಸ್ ಟೈಲ್ ವರ್ಕರ್ಸ್ ಯುನಿಯನ್ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, GATWU ಮೂರು ತಿಂಗಳ ಹಿಂದೆಯೇ ಕಾರ್ಮಿಕ ಇಲಾಖೆಯಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಅಲ್ಲದೇ, ಕಾರ್ಮಿಕ ಅಪರ ಕಾರ್ಯದರ್ಶಿಗಳಿಗೂ ಪತ್ರ ಬರೆದು ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸುವಂತೆ ಮನವಿಯನ್ನು ಮಾಡಿಕೊಂಡಿತ್ತು. ಆದರೆ, ಸರ್ಕಾರದ ಯಾವುದೇ ಸೂಚನೆಗಳನ್ನು ಪಾಲಿಸದ ಅರವಿಂದ್ ಲೈಫ್‌ಸ್ಟೈಲ್‌ ಬ್ರಾಂಡ್‌ ಲಿಮಿಟೆಡ್ ರಾಮನಗರದ ಘಟಕವನ್ನು ಮುಚ್ಚುವ ಎಲ್ಲಾ ಪ್ರಯತ್ನಗಳನ್ನು ಮುಂದುವರೆಸಿದೆ.
ಈ ವಿಚಾರವಾಗಿ, GATWU ಕಾರ್ಮಿಕ ಕಾನೂನು ಸಲಹೆಗಾರ ಕೆ.ಆರ್. ಜಯರಾಮ್ ರವರು ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ಕಾರ್ಮಿಕರಿಗೆ ಧೈರ್ಯ ತುಂಬಿದರು.

GATWU ಪದಾಧಿಕಾರಿ ಎ.ಎಚ್. ಜಯರಾಮ್ ಸೇರಿದಂತೆ ಕಾರ್ಮಿಕರು ಕಂಪನಿಯ ಏಕಪಕ್ಷೀಯ ನಡೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

ಕಾರ್ಮಿಕ ಇಲಾಖೆಯ ಅಪರ ಕಾರ್ಮಿಕ ಆಯುಕ್ತರ ಬಳಿ ಪ್ರಕರಣ ದಾಖಲಾಗಿದ್ದು, ರಾಜೀ ಸಂಧಾನ ಸಭೆ ನಡೆಯುತ್ತಿದೆ. ಜರೂರಾಗಿ ಪ್ರಕರಣವನ್ನು ಕಾರ್ಮಿಕ ಇಲಾಖೆ ಇತ್ಯರ್ಥಗೊಳಿಸಬೇಕಿದೆ.