Take a fresh look at your lifestyle.

ಎಸಿಬಿ ಬಲೆಯಲ್ಲಿ ಬಿದ್ದ ಎಎಲ್ ಸಿ ಸಂತೋಷ್ ಹಿಪ್ಪರಗಿ

ಪರವಾನಗಿ ನೀಡಲು ಮೂರು ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಲಾಗಿತ್ತು. ಲಂಚ ಕೊಡದ ಕಾರಣ ಇಷ್ಟು ವರ್ಷವಾದರೂ ಅರ್ಜಿ ಇತ್ಯರ್ಥ ಮಾಡಿರಲಿಲ್ಲ. ಸಹಾಯಕ ಕಾರ್ಮಿಕ ಆಯುಕ್ತರು ಲಂಚಕ್ಕೆ ಬೇಡಿಕೆ ಇಟ್ಟಿದ್ದು ನಿವೃತ್ತ ಕಾರ್ಮಿಕ ಇನ್‌ಸ್ಪೆಕ್ಟರ್ ಮೂಲಕ ಡೀಲ್ ಕುದುರಿತ್ತು.

0
post ad

ಬೆಂಗಳೂರು : ಮೂರು ವರ್ಷದ ಹಿಂದೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಗಿ ಪಡೆಯಲು ಸಲ್ಲಿಸಿದ್ದ ಅರ್ಜಿ ವಿಲೇವಾರಿಗೆ ಲಂಚ ಸ್ವೀಕರಿಸುವ ಪ್ರಕರಣದಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್‌ ಹಿಪ್ಪರಗಿ ಎಸಿಬಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇವರ ಜೊತೆಗೆ ನಿವೃತ್ತ ಲೇಬರ್ ಇನ್‌ಸ್ಪೆಕ್ಟರ್ ಸಹ ಎಸಿಬಿಗೆ ಸಿಕ್ಕಿಬಿದ್ದಿದ್ದಾನೆ.

ಮೂರು ವರ್ಷದಿಂದ ಪರವಾನಗಿ ನೀಡದೇ ಕಾಟ ನೀಡಿ, ಕೊನೆಗೆ ಲಂಚಕ್ಕೆ ಬೇಡಿಕೆ ಇಟ್ಟು, ಲಂಚ ಪಡೆಯುತ್ತಿದ್ದಾಗ ಹಣದ ಸಮೇತ ಎಸಿಬಿಗೆ ಸಿಕ್ಕಿದ್ದಾರೆ.

ಮಾಲೂರಿನ ನಿವಾಸಿಯೊಬ್ಬರು ಖಾಸಗಿ ಕಂಪನಿಯೊಂದಕ್ಕೆ ತಾತ್ಕಾಲಿಕ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಗಿಗಾಗಿ 2017ರಲ್ಲಿ ಅರ್ಜಿ ಸಲ್ಲಿಸಿದ್ದರು.
ಬನ್ನೇರುಘಟ್ಟ ರಸ್ತೆಯಲ್ಲಿರುವ ಉಪ ಕಾರ್ಮಿಕ ಆಯುಕ್ತರು ಪ್ರಾದೇಶಿಕ -2, ರವರ ಅಡಿ ಬರುವ ಸಹಾಯಕ ಕಾರ್ಮಿಕ ಆಯುಕ್ತರು ಪರವಾನಗಿ ನೀಡಬೇಕಿತ್ತು.
ಪುಣೆಯ ಖಾಸಗಿ ಸಂಸ್ಥೆಗೆ ಪರವಾನಗಿ ನೀಡುವಂತೆ ಎಎಲ್ ಸಿ ಬಳಿ ಕೇಳಿದಾಗ ಅವರು ಎರಡು ಲಕ್ಷ ರೂಪಾಯಿ ಲಂಚ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟು, ಅಂತಿಮವಾಗಿ ಒಂದು ಲಕ್ಷ ಎಂಬತ್ತು ಸಾವಿರಕ್ಕೆ ಡೀಲ್ ಕುದುರಿಸಿದ್ದರು.
ಸಹಾಯಕ ಕಾರ್ಮಿಕ ಆಯುಕ್ತರು ನೇರವಾಗಿ ಹಣ ಪಡೆಯದೆ ಲಂಚದ ವ್ಯವಹಾರವನ್ನು ನಿವೃತ್ತ ಕಾರ್ಮಿಕ ಇನ್‌ಸ್ಪೆಕ್ಟರ್ ಮೂಲಕ ನಡೆಸಲು ಸೂಚಿಸಿದ್ದಾರೆ.

1.80 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್‌ ಹಿಪ್ಪರಗಿ ಮತ್ತು ನಿವೃತ್ತ ಕಾರ್ಮಿಕ ಇನ್‌ಸ್ಪೆಕ್ಟರ್ ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ. ಲಂಚದ ಒಟ್ಟು ಮೊತ್ತವನ್ನು ವಶಕ್ಕೆ ಪಡೆದಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿದ್ದಾರೆ. ಇಬ್ಬರು ಅಧಿಕಾರಿಗಳನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಹಾಯಕ ಕಾರ್ಮಿಕ ಆಯುಕ್ತರು ವಿಭಾಗ-3 ಇವರು ನೇರವಾಗಿ ಹಣ ಪಡೆಯದೆ ನಿವೃತ್ತ ಅಧಿಕಾರಿಗಳನ್ನು ಏಜೆಂಟ್ ಗಳಾಗಿ ಬಳಸಿಕೊಳ್ಳುತ್ತಿದ್ದರು ಎಂಬ ಆರೋಪ ಕಾರ್ಮಿಕ ಭವನದಲ್ಲಿ ಕೇಳಿ ಬರುತ್ತಲೇ ಇತ್ತು. ಇನ್ನು ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ನಿವೃತ್ತ ಕಾರ್ಮಿಕ ಇನ್‌ಸ್ಪೆಕ್ಟರ್ ರವರ ವಿರುದ್ಧವೂ ಈ ಹಿಂದೆ ಹಲವು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು. ನಿವೃತ್ತಿಯಾದರೂ ಕಚೇರಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಕುರಿತು ಮತ್ತಷ್ಟು ಅಕ್ರಮಗಳು ಎಸಿಬಿಗೆ ಲಭ್ಯವಾಗಿದ್ದು, ಅವರ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣ, ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.