ಖಾಸಗೀಕರಣ ವಿರೋಧಿಸಿ ಬೆಮೆಲ್ ನೌಕರರ ಪ್ರತಿಭಟನೆ
ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರುವುದರಿಂದ ಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ


ಬೆಂಗಳೂರು : ಸಾರ್ವಜನಿಕ ಉದ್ಯಮ ಬಿಇಎಂಎಲ್ ಸಂಸ್ಥೆಯ ಶೇಕಡ 26ರಷ್ಟು ಷೇರುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಟ್ಟ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಸಂಸ್ಥೆಯ ಸಿಬ್ಬಂದಿ ಆಕ್ರೋಶ ಹೊರಹಾಕುತ್ತಿದ್ದು, ಎರಡು ದಿನಗಳಿಂದ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಪ್ರತಿಭಟನೆಯನ್ನು ನಡೆಸುತ್ತಿದೆ.
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್(BEML) ಸಂಸ್ಥೆಯು ಕರ್ನಾಟಕ ಮತ್ತು ಕೇರಳಗಳಲ್ಲಿ ಒಂಬತ್ತು ಘಟಕಗಳನ್ನು ಹೊಂದಿದೆ.
ಬೆಂಗಳೂರು, ಕೆಜಿಎಫ್, ಪಾಲಕ್ಕಾಡ್ ಘಟಕಗಳಲ್ಲೂ ಕಾರ್ಮಿಕರು ಧರಣಿ ಆರಂಭಿಸಿದ್ದಾರೆ.
ಕೇಂದ್ರ ಸರ್ಕಾರವು ಬೃಹತ್ ರಕ್ಷಣಾ ವಲಯದ ಉದ್ಯಮವಾದ ಬೆಮೆಲ್ ನ ತನ್ನ ಶೇಕಡ 54.03 ಷೇರಿನಲ್ಲಿ ಶೇಕಡ 26 ರಷ್ಟು ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಬಿಡ್ ಕರೆದಿದೆ. ಇದರಿಂದ ಸಂಸ್ಥೆಯ ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರುವುದರಿಂದ ಹಾಗೂ ಈ ದೇಶದ ಸಂಪತ್ತನ್ನು ಬಹಳ ಕಡಿಮೆ ಮೊತ್ತಕ್ಕೆ ಖಾಸಗಿಯವರ ಪಾಲಾಗುವುದನ್ನು ಸಂಸ್ಥೆಯ ಉದ್ಯೋಗಿಗಳು ಮತ್ತು ಕಾರ್ಮಿಕ ಸಂಘಟನೆಗಳು ವಿರೋಧಿಸಿ ಹೋರಾಟದ ಹಾದಿ ತುಳಿದಿದ್ದಾರೆ.
ಕರ್ನಾಟಕದಲ್ಲಿರುವ ಪ್ರಮುಖ ಸಾರ್ವಜನಿಕ ಉದ್ಯಮ ಬಿಇಎಂಎಲ್ ಆಗಿದ್ದು ಲಾಭದಾಯಕ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದು, ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿದೆ.
ಬೆಂಗಳೂರು, ಕೆಜಿಎಫ್, ಮೈಸೂರು ಹಾಗೂ ಪಾಲಕ್ಕಾಡ್ ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು ಸುಮಾರು 4 ಪ್ರಾದೇಶಿಕ ಕಛೇರಿ ಮತ್ತು ಸುಮಾರು 20 ಸೇವಾ ಕಛೇರಿಗಳನ್ನು ಹೊಂದಿರುವಂತಹ ಬೃಹತ್ ಸಂಸ್ಥೆಯಾಗಿದೆ. ಇಲ್ಲಿ ರೈಲು ಮತ್ತು ಮೆಟ್ರೋ ಬೋಗಿಗಳನ್ನು ತಯಾರು ಮಾಡುತ್ತಿದ್ದು. ದೇಶದಲ್ಲಿರುವ ಏಕೈಕ ಮೆಟ್ರೋ ರೈಲು ಉತ್ಪಾದನೆ ಮಾಡುವ ಕಾರ್ಖಾನೆಯಾಗಿರುತ್ತದೆ.
ರಕ್ಷಣಾ ಇಲಾಖೆಗೆ ಬೇಕಾಗಿರುವ ಸಲಕರಣೆಗಳಾದ ಟೆಟ್ರಾ ಟ್ರಕ್ಕುಗಳು, ಸರ್ವೋತ್ತರ ಬ್ರಿಡ್ಜ್, ಮಿಸ್ಕೆಲ್ ಲಾಂಚರ್ ಗಳು, ಬುಲ್ಡೋಜರ್ ಗಳು ಮತ್ತು ಯುದ್ಧಕ್ಕೆ ಬೇಕಾದ ಗ್ರೌಂಡ್ ಸಪೋರ್ಟ್ ವಾಹನಗಳನ್ನು ಮಾಡಿ ರಕ್ಷಣಾ ಇಲಾಖೆಗೆ ಸರಬರಾಜು ಮಾಡುತ್ತಿರುವ ಏಕೈಕ ದೇಶೀಯ ಸಂಸ್ಥೆಯಾಗಿದೆ. ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಕ್ಕೆ ಬೇಕಾಗಿರುವ ಅತ್ಯಾಧುನಿಕ ವಿವಿಧ ಮಾದರಿಯ ಡಂಪ್ ಟ್ರಕ್ಗಳು, ಎಸ್ಕವೇಟರ್ ಗಳು, ಲೋಡರ್ ಗಳು, ರೋಪ್ ಶಾವಲ್ಸ್ಗಳು ಹಾಗೂ ಮೋಟಾರ್ ಗ್ರೇಡರ್ ಗಳನ್ನು ತಯಾರು ಮಾಡಲಾಗುತ್ತಿದೆ.
ಡ್ರೆಡ್ಚಿಂಗ್ ಯಂತ್ರೋಪಕರಣಗಳನ್ನು ಹಾಗೂ ಈ ವಾಹನಗಳಲ್ಲಿ ಬಳಸುವ ಇಂಜಿನ್ಗಳಲ್ಲಿ ಬಳಸುವ ಇಂಜಿನ್ ಗಳ ಉತ್ಪಾದನೆ ಮತ್ತು ಬಾಹ್ಯಾಕಾಶ ಯಂತ್ರಗಳಿಗೆ ಸಂಬಂಧಪಟ್ಟ ಉಪಕರಣಗಳನ್ನು ಕೂಡ ಉತ್ಪಾದಿಸುತ್ತಿರುವ ಬೃಹತ್ ಉದ್ದಿಮೆಯಾಗಿದೆ.
ಇನ್ನು, ಕೆ.ಜಿ.ಎಫ್ ಸಂಕೀರ್ಣದಲ್ಲಿ ಟ್ರಾನ್ಸ್ ಮಿಷನ್ಸ್ ಹಾಗೂ ಹೈಡ್ರಾಲಿಕ್ ಪಂಪ್ ಗಳನ್ನು ತಯಾರು ಮಾಡುವ ಘಟಕಗಳನ್ನು ಹೊಂದಿದೆ.