Take a fresh look at your lifestyle.

ಬಿಇಎಂಎಲ್ ಖಾಸಗೀಕರಣವನ್ನು ವಿರೋಧಿಸಿ ಸರಣಿ ಧರಣಿ

ರಾಜ್ಯಸಭಾ ಸದಸ್ಯರಾದ ಎಲಮರಂ ಕರೀಂ ರವರಿಗೆ ಬೆಮೆಲ್ ಸಂಸ್ಥೆಯನ್ನು ಖಾಸಗೀಕರಣ ವಿಚಾರವನ್ನು ಮೇಲ್ಮನೆಯಲ್ಲಿ ಪ್ರಸ್ತಾಪಿಸುವಂತೆ ಮನವಿ ಪತ್ರವನ್ನು ನೀಡಲಾಯಿತು

0
post ad

ಪಾಲಕ್ಕಾಡ್ : ಲಾಭದಾಯಕ ಪಥದಲ್ಲಿ ಸಾಗುತ್ತಿರುವ ಬೆರಳೆಣಿಕೆಯಷ್ಟು ಸಾರ್ವಜನಿಕ ಉದ್ಯಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಬಿಇಎಂಎಲ್ ಕಂಪನಿಯ ಖಾಸಗೀಕರಣ ಕ್ರಮದ ವಿರುದ್ಧ ನೌಕರರು ಹೋರಾಟದ ಕಡೆಗೆ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.
ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಬಿಇಎಂಎಲ್ ಕಾರ್ಮಿಕರಿಗೆ ಭವಿಷ್ಯದ ಅಭದ್ರತೆ ಕಾಡುತ್ತಿದ್ದು ಪ್ರತಿಭಟನೆಯನ್ನು ತೀವ್ರತರಗೊಳಿಸಲು ಕೇರಳದ ಪಾಲಕ್ಕಾಡ್ ನ ಬಿಇಎಂಎಲ್ ಸಂಕೀರ್ಣದಲ್ಲಿ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಸರಣಿ ಧರಣಿಯನ್ನು ಆರಂಭಿಸಿದೆ.
ಬೆಂಗಳೂರು ಬಿಇಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷರಾದ ದೊಮ್ಮಲೂರು ಶ್ರೀನಿವಾಸರೆಡ್ಡಿ, ಪ್ರಧಾನ ಕಾರ್ಯದರ್ಶಿ ಆರ್ ನಾರಾಯಣ, ಕೆಜಿಎಫ್ ಕಾರ್ಮಿಕ ಸಂಘದ ಅಧ್ಯಕ್ಷರಾದ ಆಂಜನೇಯ ರೆಡ್ಡಿ, ಮೈಸೂರು ಕಾರ್ಮಿಕ ಸಂಘದ ಆಧ್ಯಕ್ಷರಾದ ಮುನಿರೆಡ್ಡಿ, ಕೇಂದ್ರ ಕಚೇರಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಮುನಿನಾಗಪ್ಪರವರನ್ನು ಒಳಗೊಂಡ ನಿಯೋಗ ಪಾಲಕ್ಕಾಡ್ ನ ಬೆಮೆಲ್ ಕಾಂಪ್ಲೆಕ್ಸ್ ನ ಸರಣಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ, ಕೇಂದ್ರ ಸರ್ಕಾರ ಸಂಸ್ಥೆಯ ಖಾಸಗೀಕರಣದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವವರೆಗೂ ಹೋರಾಟವನ್ನು ಮುಂದುವರೆಸಬೇಕೆಂದು ಎಲ್ಲಾ ಘಟಕಗಳ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಏಕಾಭಿಪ್ರಾಯವನ್ನು ವ್ಯಕ್ತಪಡಿಸಿ, ಪರಿಣಾಮಕಾರಿಯಾಗಿ ಹೋರಾಟವನ್ನು ಮುಂದುವರೆಸಲು ತೀರ್ಮಾನಿಸಿತು.
ಇನ್ಮುಂದೆ, ಪ್ರತಿ ಘಟಕದಲ್ಲೂ ಸರಣಿಯ ಮಾದರಿಯಲ್ಲಿ ಪರಿಣಾಮಕಾರಿ ಮತ್ತು ವಿಭಿನ್ನವಾದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವಂತೆ ಜಂಟಿ ಕ್ರಿಯಾ ಸಮಿತಿ ಕಾರ್ಮಿಕ ಸಂಘಗಳಿಗೆ ಕರೆ ನೀಡಿತು.
ಇನ್ನು, ಬೆಮೆಲ್ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಹಮ್ಮಿಕೊಂಡಿರುವ ಸರಣಿ ಧರಣಿಗೆ ರಾಜ್ಯ ಸಭಾ ಸದಸ್ಯರಾದ ಎಲಮರಂ ಕರೀಮ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯರು ಸಂಸತ್ತಿನಲ್ಲಿ ಬೆಮೆಲ್ ಸಂಸ್ಥೆಯ ಖಾಸಗೀಕರಣದ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತುವ ಭರವಸೆಯನ್ನು ನೀಡಿದರು.


ಬೆಮೆಲ್ ಜಂಟಿ ಕ್ರಿಯಾ ಸಮಿತಿಯ ಸಂಚಾಲಕರಾದ ದೊಮ್ಮಲೂರು ಶ್ರೀನಿವಾಸ ರೆಡ್ಡಿ ನೇತೃತ್ವದಲ್ಲಿ ಸಮನ್ವಯ ಸಮಿತಿಯ ಪದಾಧಿಕಾರಿಗಳು ರಾಜ್ಯಸಭಾ ಸದಸ್ಯರಿಗೆ ಬೆಮೆಲ್ ಸಂಸ್ಥೆಯ ಖಾಸಗೀಕರಣ ವಿಚಾರವನ್ನು ಮೇಲ್ಮನೆಯಲ್ಲಿ ಪ್ರಸ್ತಾಪಿಸುವಂತೆ ಮನವಿ ಪತ್ರವನ್ನು ನೀಡಲಾಯಿತು.

ಕೇಂದ್ರ ಸರ್ಕಾರವು ಬೃಹತ್ ರಕ್ಷಣಾ ವಲಯದ ಉದ್ಯಮವಾದ ಬೆಮೆಲ್ ನ ತನ್ನ ಶೇಕಡ 54.03 ಷೇರಿನಲ್ಲಿ ಶೇಕಡ 26 ರಷ್ಟು ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಬಿಡ್ ಅನ್ನು ಕರೆದಿದ್ದು ಈಗಾಗಲೇ ಖಾಸಗೀಕರಣದ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಸಂಸ್ಥೆಯ ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರುವುದರಿಂದ ಹಾಗೂ ಈ ದೇಶದ ಸಂಪತ್ತನ್ನು ಬಹಳ ಕಡಿಮೆ ಮೊತ್ತಕ್ಕೆ ಖಾಸಗಿಯವರ ಪಾಲಾಗುವುದನ್ನು ಸಂಸ್ಥೆಯ ಉದ್ಯೋಗಿಗಳು ಮತ್ತು ಕಾರ್ಮಿಕ ಸಂಘಟನೆಗಳು ವಿರೋಧಿಸಿ ಹೋರಾಟದ ಹಾದಿ ತುಳಿದಿದ್ದಾರೆ.