ಬಿಕ್ಕಟ್ಟು ಶಮನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವ
ಮುಖ್ಯಮಂತ್ರಿಗಳು ಟಿಕೆಎಂ ಬಿಕ್ಕಟ್ಟಿನ ಶೀಘ್ರ ಉಪಶಮನಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದು, ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ದೇಶನ. ಮತ್ತೆ ಈ ಪ್ರಕರಣ ಕಾರ್ಮಿಕ ಇಲಾಖೆಯ ಅಂಗಳಕ್ಕೆ ಬಂದು ನಿಂತಿದೆ...


ಬೆಂಗಳೂರು : ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ಸರ್ಕಾರದ ಧೋರಣೆಯಿಂದ ಟಿಕೆಎಂ ಬಿಕ್ಕಟ್ಟು ಮತ್ತಷ್ಟು ಗಂಭೀರವಾಗುತ್ತಿದೆಯೇ ಹೊರತು, ತಾತ್ಕಾಲಿಕ ಉಪ ಶಮನವು ಹೊರಬೀಳುತ್ತಿಲ್ಲ. ಇತ್ತೀಚೆಗೆ ಆಡಳಿತ ಮಂಡಳಿಯು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರನ್ನು ಬೇಟಿಯಾಗಿತ್ತು. ಟಿಕೆಎಂ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿದ್ದರು. ಈ ಸಭೆಯಲ್ಲಿ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಡಿಸಿಎಂ ಅಶ್ವತ್ಥನಾರಾಯಣ ಪಾಲ್ಗೊಂಡಿದ್ದರು.
ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬಾರದ ಮುಖ್ಯಮಂತ್ರಿಗಳು ಬಿಕ್ಕಟ್ಟಿನ ಶೀಘ್ರ ಉಪಶಮನಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಿಜಯಬಾಸ್ಕರ್ ರವರಿಗೆ ಸೂಚಿಸಿದರು. ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದಾರೆ.
ಮತ್ತಷ್ಟು ಕಾರ್ಮಿಕರ ಅಮಾನತುನಿಂದ ಕಾರ್ಮಿಕರು ಪಟ್ಟು ಬಿಡದೇ ಪ್ರತಿಭಟನೆಯನ್ನು ಮುಂದುವರೆಸಿದ್ದು, ಹೋರಾಟವು 31 ನೇ ದಿನಕ್ಕೆ ಕಾಲಿಟ್ಟಿದೆ.
ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆಯಲು ಕಾರ್ಮಿಕ ಇಲಾಖೆಯೇ ಕಾರಣ ಎಂದು ಈ ಹಿಂದೆ ಹಲವು ಕಾರ್ಮಿಕ ಮುಖಂಡರು ಆಪಾದಿಸಿದ್ದರು. ಕಾರ್ಮಿಕರ ಪ್ರತಿಭಟನೆ ಮತ್ತು ಕಂಪೆನಿಯ ಲಾಕೌಟ್ ಗಳೆರಡನ್ನು ನಿಷೇಧಿಸಿ ಆದೇಶ ಹೊರಡಿಸಿ ಕಚೇರಿಗೆ ಸೀಮಿತಗೊಂಡಿದ್ದ ಅಧಿಕಾರಿಗಳು ಸಮಸ್ಯೆಗಳ ವಸ್ತುಸ್ಥಿತಿಯನ್ನು ತಿಳಿಯಲು ಕಾರ್ಖಾನೆಗೆ ಬೇಟಿ ನೀಡದಿರುವುದು ಬಿಕ್ಕಟ್ಟು ಮುಂದುವರೆಯುವುದಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕಾರ್ಮಿಕ ಒಕ್ಕೂಟಗಳಿಂದ ಕೇಳಿಬರುತ್ತಿವೆ.
ಈ ಬಗೆಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬಿಕ್ಕಟ್ಟು ಶಮನಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳುತ್ತಾರೋ ಕಾದುನೋಡಬೇಕಿದೆ.
ಒಟ್ಟಾರೆ, ಕಾರ್ಮಿಕ ಇಲಾಖೆಯು ಯಾವುದೇ ಕ್ರಮವನ್ನು ಕೈಗೊಂಡರು, ಯಾವುದೇ ನಿರ್ಧಾರವನ್ನು ಪ್ರಕಟಿಸಿದರು ಅದರ ಅನುಷ್ಠಾನಕ್ಕೆ ಕಾರ್ಖಾನೆಗೆ ಬೇಟಿ ನೀಡದ ಹೊರತು ಯಾವುದೇ ಆಶಾಜನಕ ಪ್ರಯೋಜನವಾಗುವುದಿಲ್ಲ ಎಂಬುದು ಟಿಕೆಎಂ ಆವರಣದಲ್ಲಿ ನಡೆಯುತ್ತಿರುವ ಒಂದು ತಿಂಗಳ ಬಿಕ್ಕಟ್ಟಿನಿಂದ ಹೊರಬಿದ್ದ ಸತ್ಯವಾಗಿದೆ.