ಮುಖ್ಯಮಂತ್ರಿ ನೇತೃತ್ವದಲ್ಲಿ ಇಂದು ಟಿಕೆಎಂ ಬಿಕ್ಕಟ್ಟು ಸಭೆ
ಶಮನವಾಗುತ್ತಾ ಕಳೆದ ಒಂದು ತಿಂಗಳ ಟಿಕೆಎಂಇಯು ಹಮ್ಮಿಕೊಂಡಿರುವ ಧರಣಿ ಹೋರಾಟ.. ಇಲ್ಲ, ಆಡಳಿತ ವರ್ಗ ಪ್ರತಿಷ್ಟೆಗೆ ಜೋತು ಬಿದ್ದು ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸುತ್ತಾ ...ಇಂದು ನಿರ್ಧಾರ


ಬೆಂಗಳೂರು/ ರಾಮನಗರ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆದಿರುವ ಸಭೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂಎಲ್) ಆಡಳಿತ ಮಂಡಳಿ ಭಾಗವಹಿಸಲಿದೆ. ಬಿಡದಿಯಲ್ಲಿ 29 ದಿನಗಳಿಂದ ನಡೆಯುತ್ತಿರುವ ಕಾರ್ಮಿಕರ ಧರಣಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಈ ಭೇಟಿ ನಡೆಯಲಿದೆ.
ಟಿಕೆಎಂ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ಈ ಮಾತುಕತೆಯ ನೇತೃತ್ವ ವಹಿಸುವ ಸಾಧ್ಯತೆ ಇದ್ದು, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು ಈ ಸಭೆಯಲ್ಲಿ ಭಾಗಿ ಆಗಲಿದ್ದಾರೆ.
ಮುಖ್ಯಮಂತ್ರಿಗಳೇ ಮಧ್ಯಪ್ರವೇಶ ಮಾಡಿರುವುದರಿಂದ ಶೀಘ್ರದಲ್ಲಿ ಬಿಕ್ಕಟ್ಟು ಶಮನಗೊಳ್ಳಲಿದೆ ಎಂದು ಸ್ವತಃ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಇತ್ತೀಚೆಗೆ ಹೇಳಿದ್ದರು.
ಸರ್ಕಾರದ ಈ ಹಿಂದಿನ ಆದೇಶ ಲಾಕೌಟ್ ಮತ್ತು ಕಾರ್ಮಿಕ ಪ್ರತಿಭಟನೆಯ ನಿಷೇಧದ ವಿಫಲತೆ, ಮತ್ತೆ
ಕಾರ್ಮಿಕರ ಧರಣಿ ಬಗೆಗೆ, ಕಾರ್ಖಾನೆಯಲ್ಲಿ ಸಹಜ ಸ್ಥಿತಿಗೆ ತರಲು ತೆಗೆದುಕೊಳ್ಳಲಿರುವ ಕಾನೂನು ಕ್ರಮಗಳ ಬಗ್ಗೆ, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಆಡಳಿತ ವರ್ಗ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಅವಕಾಶಗಳಿವೆ.
ಇತ್ತ, ಆಡಳಿತ ಮಂಡಳಿ, ಕಾರ್ಮಿಕರ ಒಕ್ಕೂಟಕ್ಕೆ ಡಿಸೆಂಬರ್ 7ನೇ ತಾರೀಕು ಗಡುವು ನೀಡಿ, ಪ್ರತಿಭಟನೆ ಮುಂದುವರಿದಲ್ಲಿ ಕಾರ್ಮಿಕ ಒಕ್ಕೂಟದ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.
ಆಡಳಿತ ಮಂಡಳಿಗೆ ಲಾಕ್ ಔಟ್, ಉತ್ಪಾದನಾ ಚಟುವಟಿಕೆಗಳಿಗೆ ತಡೆ ಒಡ್ಡುವಂತಿಲ್ಲ ಎಂದು ಕಾರ್ಮಿಕರಿಗೆ ಸರ್ಕಾರ ಆದೇಶ ನೀಡಿತ್ತು. ಆದರೆ ಆ ಆದೇಶ ಜಾರಿಗೆ ಬರಲೇ ಇಲ್ಲ.
ಇನ್ನು ಟಿಕೆಎಂ ಆಡಳಿತ ವರ್ಗ ಕಾರ್ಮಿಕರ ವಿರುದ್ಧ ಎಚ್ಚರಿಕೆಗಳ ಮೇಲೆ ಎಚ್ಚರಿಕೆಗಳನ್ನು ನೀಡುತ್ತ, ಮತ್ತೆ ಇಪ್ಪತ್ತು ಕಾರ್ಮಿಕರನ್ನು ವಜಾಗೊಳಿಸಿತ್ತು.
ಅಧಿಕ ಕೆಲಸದೊತ್ತಡ, ಆಡಳಿತ ಮಂಡಳಿಯ ಅಮಾನವೀಯ ಕೆಲಸ ಧೋರಣೆಗಳನ್ನು ವಿರೋಧಿಸುತ್ತಾ ಟಿಕೆಎಂಇಯು ಕಾರ್ಮಿಕ ಒಕ್ಕೂಟ ಹಮ್ಮಿಕೊಂಡಿರುವ ಪ್ರತಿಭಟನೆಯು 29 ದಿನಕ್ಕೆ ಕಾಲಿಟ್ಟಿದೆ.