Take a fresh look at your lifestyle.

ಸರ್ಕಾರದ ಆದೇಶವನ್ನು ಕಂಪನಿ ಪಾಲಿಸುತ್ತಿಲ್ಲ : ಟೊಯೋಟಾ ಕಾರ್ಮಿಕರು

ಟೊಯೋಟಾ ಕಿರ್ಲೋಸ್ಕರ್ ಲಾಕ್ ಔಟ್ ಬಿಕ್ಕಟ್ಟು ಶಮನಗೊಂಡಿಲ್ಲ, ಕಾರ್ಮಿಕರನ್ನು ಗೇಟ್ ನಲ್ಲಿಯೇ ತಡೆಯಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಟೊಯೋಟಾ ಕಿರ್ಲೋಸ್ಕರ್​ ಮೋಟಾರ್​ ಕಂಪನಿಯ ಕಾರ್ಮಿಕರ ಸಂಘದ ಖಜಾಂಚಿ ಮತ್ತು ನಲವತ್ತು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು

0
post ad

ಬೆಂಗಳೂರು/ರಾಮನಗರ : ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ಸಂಪೂರ್ಣವಾಗಿ ಶಮನವಾದಂತೆ ಕಾಣುತ್ತಿಲ್ಲ. ಕಾರ್ಮಿಕ ಇಲಾಖೆ ಮೊನ್ನೆ ಕಂಪೆನಿಯ ತಾತ್ಕಾಲಿಕ ಲಾಕ್ ಔಟ್ ಮತ್ತು ಕಾರ್ಮಿಕರ ಪ್ರತಿಭಟನೆಗಳೆರೆಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಸರ್ಕಾರದ ಆದೇಶದ ನಂತರ ಯಥಾಪ್ರಕಾರ ಕಂಪೆನಿ ಕಾರ್ಯನಿರ್ವಹಿಸಬೇಕಿತ್ತು. ಆದರೆ ಕಂಪೆನಿಯು ಕೆಲ ಕಾರ್ಮಿಕರನ್ನು ಒಳಗೆ ಹೋಗುವುದನ್ನು ತಡೆಯುತ್ತಿದೆ. ಸರ್ಕಾರದ ಲಾಕ್ ಔಟ್ ನಿಷೇಧದ ನಂತರ ಕಂಪನಿ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದೆ.
ಲಾಕ್‌ಡೌನ್‌’ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಕಾರ್ಮಿಕರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳದೆ ರಾಜ್ಯ ಸರಕಾರದ ಆದೇಶವನ್ನು ಉಲ್ಲಂಘಿಸುತ್ತಿದೆ.
ಜೊತೆಗೆ ಕಾರ್ಮಿಕರು ಕಂಪೆನಿಯ ಆವರಣದಲ್ಲಿ ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪನಿಯ ಕಾರ್ಮಿಕ ಸಂಘದ ಅಧ್ಯಕ್ಷ (ಟಿಕೆಎಂಇಯು) ಪ್ರಸನ್ನ ಕುಮಾರ್‌ ಸಿ.ಎಸ್‌.ಚಕ್ಕೆರೆ ಆರೋಪಿಸಿದ್ದಾರೆ.

ಆಡಳಿತ ಮಂಡಳಿಯ ಉದ್ದತನದ ವಿರುದ್ಧ ಕಿಡಿಕಾರಿದ ಪ್ರಸನ್ನಕುಮಾರ್, ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಸಚಿವರು, ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದರು.
ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಯಲ್ಲಿ ಆಡಳಿತ ಮಂಡಳಿಯ ತಾತ್ಕಾಲಿಕ ಲಾಕೌಟ್ ಮತ್ತು ಕಾರ್ಮಿಕರ ಪ್ರತಿಭಟನೆಯ ಬಿಕ್ಕಟ್ಟು ಕಳೆದ ಹನ್ನೆರಡು ದಿನಗಳು ಕಾಲ ಬಗೆಹರೆದಿರಲಿಲ್ಲ.
ಉಪಮುಖ್ಯಮಂತ್ರಿ ಮತ್ತು ಕಾರ್ಮಿಕ ಸಚಿವರನ್ನೊಳಗೊಂಡ ಸಂಧಾನ ಸಭೆ ವಿಫಲವಾದ ನಂತರ, ಕಾರ್ಮಿಕ ಇಲಾಖೆ ಕೊನೆಗೆ ಇತ್ತ ಲಾಕ್ ಔಟ್ ಮತ್ತು ಪ್ರತಿಭಟನೆಗಳೆರಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಟೊಯೋಟಾ ಕಿರ್ಲೋಸ್ಕರ್​ ಮೋಟಾರ್​ ಕಂಪನಿಯ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಸುಮಾರು 3500 ಕಾರ್ಮಿಕರು ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ತಾತ್ಕಾಲಿಕ ಉಪಶಮನ ಎಂಬಂತೆ ಲಾಕ್ ಔಟ್ ಮತ್ತು ಪ್ರತಭಟನೆಗಳನ್ನು ಮಾತ್ರ ಸರ್ಕಾರ ನಿಷೇಧಿಸಿದ್ದು, ಕಾರ್ಮಿಕರ ಮತ್ತು ಆಡಳಿತ ವರ್ಗಕ್ಕೆ ಸ್ಪಷ್ಟ ನಿರ್ದೇಶನಗಳನ್ನು ಜಾರಿಗೊಳಿಸಲು ಕಾರ್ಮಿಕ ಇಲಾಖೆ ವಿಫಲವಾಗಿರುವುದೇ ಮತ್ತೆ ಈ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿದೆ.