Take a fresh look at your lifestyle.

ಸೋಪ್ ಫ್ಯಾಕ್ಟರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

15 ಅಂಶಗಳನ್ನು ಪ್ರಸ್ತಾಪಿಸಿ ಕೆ.ಎಸ್‌.& ಡಿ.ಎಲ್‌ ಕಾರ್ಮಿಕ ಸಂಘ ಬರೆದಿರುವ ಪತ್ರದಲ್ಲಿ ಕಾರ್ಖಾನೆಯಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳು ಬಟಾ ಬಯಲಾಗಿವೆ

0
post ad

ಬೆಂಗಳೂರು: ಕೆ.ಎಸ್‌ & ಡಿ.ಎಲ್‌. ಕಾರ್ಖಾನೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರಗಳು, ಅನೇಕ ಅಕ್ರಮಗಳು ನಡೆಯುತ್ತಿದ್ದು ಅವುಗಳನ್ನು ಕಾರ್ಮಿಕ ಸಂಘ ಬಯಲಿಗೆಳೆದು ಜಗಜ್ಜಾಹಿರ ಮಾಡುವ ಪ್ರಯತ್ನಕ್ಕೆ ಕೈ ಹಾಕಿದೆ.
ಈ ಬಗೆಗೆ ಕೆ.ಎಸ್‌.& ಡಿ.ಎಲ್‌ ಕಾರ್ಮಿಕರ ಸಂಘ, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಬರೆದ ಉಲ್ಲೇಖ ಪತ್ರ ವಾಯ್ಸ್ ಆಫ್ ವರ್ಕರ್ಸ್’ ಲಭಿಸಿದೆ.  15 ಅಂಶಗಳನ್ನು  ಪ್ರಸ್ತಾಪಿಸಿ ಬರೆದಿರುವ ಈ ಪತ್ರದಲ್ಲಿ ಕಾರ್ಖಾನೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗೆಗೆ ಇಡಿ ಇಡಿಯಾಗಿ ವಿವರಿಸಲಾಗಿದೆ.
ಕರ್ನಾಟಕದ ಹಾಗೂ ಭಾರತ ದೇಶದಲ್ಲಿ ರಾಜ್ಯಮಟ್ಟದ ಸಾರ್ವಜನಿಕ ಉದ್ದಿಮೆಗಳಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಾರ್ಖಾನೆ ಆಶಾದಾಯಕ ಹಾಗೂ ಮುಂಚೂಣಿಯಲ್ಲಿದ್ದು, ವಾರ್ಷಿಕ 100 ಕೋಟಿಗೂ ಹೆಚ್ಚು ಲಾಭಗಳಿಸುತ್ತಿದೆ.
ಕೆ.ಎಸ್‌.&ಡಿ.ಎಲ್‌. ಕಾರ್ಖಾನೆಯಲ್ಲಿ ಆಡಳಿತ ವರ್ಗದ ವೈಖರಿ, ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಅರ್ಹತೆ, ವಿದ್ಯಾಬ್ಯಾಸವಿಲ್ಲದವರನ್ನು ಉನ್ನತ ಹುದ್ದೆಗಳಿಗೆ ಬಡ್ತಿ ನೀಡುವುದು ಸೇರಿದಂತೆ ಇತರೆ ಹಲವಾರು ಅಂಶಗಳನ್ನು ಉಲ್ಲೇಖಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಜಿ ಆರ್ ಶಿವಶಂಕರ್ ನಾಲ್ಕು ಪುಟಗಳ ಪತ್ರ ಬರೆದಿದ್ದು, ಅವುಗಳನ್ನು ತಕ್ಷಣ ಪರಿಶೀಲಿಸಿ ಸೂಕ್ತ ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ.

ಕಾರ್ಮಿಕ ಸಂಘದ ಅಧ್ಯಕ್ಷರು ಬರೆದಿರುವ 15 ಅಂಶಗಳನ್ನು ನೋಡುವುದಾದರೆ..
1) ಕೆ.ಎಸ್‌.& ಡಿ.ಎಲ್‌. ಕಾರ್ಖಾನೆಯಲ್ಲಿ ಹಿಂದೆ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದ ಅಧಿಕಾರಿಗಳಾದ ಜಿ.ಎಸ್‌.ಭಟ್‌, ಕೆ.ಆಂಜನಪ್ಪ ಹಾಗೂ ಪಿ.ಕೆ.ಶ್ಯಾನ್‌ಭಾಗ್‌ ಬಗ್ಗೆ ಲೋಕಾಯುಕ್ತ ನಾನು ಸಲ್ಲಿಸಿದ್ದ ಅರ್ಜಿಗಳ ಆಧಾರದ ಮೇಲೆ 22ನೇ ಸೆಪ್ಟೆಂಬರ್‌ 2005ರಲ್ಲಿ ತನಿಖೆ ನಡೆಸಿ ತನಿಖೆಯಲ್ಲಿ ಯಜುವಾತದ ಅಂಶಗಳ ಬಗ್ಗೆ ಸದರಿ ಅಧಿಕಾರಿಗಳನ್ನು
ಕೆಲಸದಿಂದ ವಜಾ ಮಾಡಲಾಗಿದೆ. ಲೋಕಾಯುಕ್ತರು ತನಿಖೆ ನಡೆಸಿದ ಅವಧಿಯಲ್ಲಿ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ಅಂಶ ಹಾಗೂ 11-06-2019ರಂದು ಇದೇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರವಿಕುಮಾರ್‌ ರವರು ವಿಧಾನ ಪರಿಷತ್‌ನ ವಿಧಾನ ಮಂಡಲಗಳ ಸಾರ್ವಜನಿಕ ಉದ್ದಿಮೆಗಳ ಸಮಿತಿಗೆ ಜಿ.ಎಸ್‌.ಭಟ್‌ ರವರ ಬಗ್ಗೆ ಬರೆದಿರುವ ಪತ್ರವನ್ನು
ಬರೆದಿದ್ದಾರೆ.
2. ತಮಗೆ ತಿಳಿದಿರುವ ರೀತಿ ಕಾರ್ಪಾನೆಯಲ್ಲಿ ಸಿ.ಎಂ.ಸುವರ್ಣ ಕುಮಾರ್‌, ಪ್ರಧಾನ ವ್ಯವಸ್ಥಾಪಕರು, ಮಾರುಕಟ್ಟೆ ಇವರು ಸಂಸ್ಥೆಗೆ ನೀಡಿರುವ ಅರ್ಹತೆ ಇಲ್ಲದ ಪದವಿ ಪತ್ರಗಳ ಹಿನ್ನೆಲೆಯಲ್ಲಿ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ
ಹಲವಾರು ಪತ್ರಗಳನ್ನು ನೀಡಿರುವುದಲ್ಲದೇ ಇವರ ಪದವಿ ಪತ್ರಗಳು ಇವರನ್ನು ಆ ಹುದ್ದೆಗೆ ಬಡ್ತಿ ನೀಡುವುದು ಸೂಕ್ತವಲ್ಲವೆಂದು ಸರ್ಕಾರದ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಅಧೀನ ಕಾರ್ಯದರ್ಶಿಯವರು 28-08-2020 ರಂದು ನಿಯಮಾನುಸಾರ ಕ್ರಮ ತೆಗೆದುಕೊಳ್ಳುವ ಬಗ್ಗೆ ತಿಳಿಸಿದ್ದರು ಸಹ ಕೆ.ಎಸ್‌.& ಡಿ.ಎಲ್‌. ವ್ಯವಸ್ಥಾಪಕ ನಿರ್ದೇಶಕರು ಇವರನ್ನು ಸದರಿ ಹುದ್ದೆಯಲ್ಲಿ ಮುಂದುವರೆಸಿದ್ದಾರೆ. ಶ್ರೀ ಸುವರ್ಣ ಕುಮಾರ್‌ ರವರ ಬಗ್ಗೆ ಈಗಾಗಲೇ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು 07-07-2016ರಂದು ಇವರ ಮೇಲೆ 24 ಆರೋಪಗಳನ್ನು ಮಾಡಿ ಶೋಕಾಸ್‌ ನೋಟೀಸ್‌ ನೀಡಿದ್ದಾರೆ. ಇದರ ಬಗ್ಗೆ ಇಲ್ಲಿಯವರೆಗೂ ಸಮರ್ಪಕವಾದ ತನಿಖೆ ನಡೆಸಿಲ್ಲ. ಇವರನ್ನು ಕಳೆದ 2 ವರ್ಷಗಳಿಂದ ಪಿ.ಎನ್‌.ಸಿ. ಅಧ್ಯಕ್ಷರಾಗಿ ಕಾರ್ಖಾನೆಗೆ ಆಯ್ಕೆಯಾದ ಮೇಲೆ ಖರೀದಿಸಿರುವ ಕಚ್ಛಾ ಸಾಮಗ್ರಿಗಳ ಗುಣಮಟ್ಟ ಹಾಗೂ ದರದ ವ್ಯತ್ಯಾಸದ ಬಗ್ಗೆ ಪರಿಶೀಲಿಸಿದರೆ ಇವರು ಕಾರ್ಖಾನೆಗೆ ಕೋಟಿಗಟ್ಟಲೆ ಹಣ ಕೆ.ಎಸ್‌.ಹ& ಡಿ.ಎಲ್‌.ಸಂಸ್ಥೆಗೆ ನಷ್ಟ ಮಾಡಿದ್ದಾರೆ. ಆದರೆ ಇವರನ್ನು ವ್ಯವಸ್ಥಾಪಕ ನಿರ್ದೇಶಕರು ಸುರಕ್ಷಿತವಾಗಿ ಕಾಪಾಡುತ್ತಿದ್ದಾರೆ. ತಮಗೆ ಇವರ ಸಂಕ್ಷಿಪ್ತ ಮಾಹಿತಿ ಬೇಕಾದಲ್ಲಿ ಇದರ ಬಗ್ಗೆ ಪ್ರತ್ಯೇಕ ತನಿಖೆ ನಡೆಸಿದರೆ ಸತ್ಯ ಸಂಗತಿ ಅರ್ಥವಾಗುತ್ತದೆ. ಈ ತನಿಖೆಯಲ್ಲಿ ನಮ್ಮಲ್ಲಿರುವ ದಾಖಲೆಗಳನ್ನು ಸಹ ಆ ತನಿಖಾಧಿಕಾರಿಗಳಿಗೆ ನೀಡಲು ನಮ್ಮ ಸಂಘ ಸಿದ್ಧವಿದೆ.
3. ಕೆ.ಎಸ್‌ & ಡಿ.ಎಲ್‌. ಕಾರ್ಖಾನೆಯಲ್ಲಿ ಅಧಿಕಾರಿಗಳಾದ ಶ್ರೀ ಲಕ್ಷ್ಮಣ್‌ ಎಲ್‌.ಡಿ, ಶ್ರೀಮತಿ ಸುಷ್ಮಾ, ಶ್ರೀ ನವರಾಜ್‌, ಹೆಚ್‌.ಹೆಚ್‌. ಶ್ರೀ ಪ್ರಕಾಶ್‌ ಇವರುಗಳ ಪದವಿಗಳ ವಿಷಯದಲ್ಲಿ 2014-15ನೇ ಸಾಲಿನಲ್ಲಿ 2016-17ನೇ ಸಾಲಿನಲ್ಲಿ ಹಾಗೂ 2017-18ನೇ ಸಾಲಿನಲ್ಲಿ ತನಿಖೆ ನಡೆಸಲಾಗಿದೆ. ಆ ತನಿಖೆಯ ಆಧಾರದ ಮೇಲೆ ಇಲ್ಲಿ ಬಂದ ವ್ಯವಸ್ಥಾಪಕ ನಿರ್ದೇಶಕರುಗಳು ಯಾವ ಯಾವ ಕ್ರಮವಹಿಸಿದ್ದಾರೆ ಎಂಬುದರ ಬಗ್ಗೆ ತಾವು ಸಂಕ್ಷಿಪ್ತವಾಗಿ ಪರಿಶೀಲಿಸಿದರೆ ಸತ್ಯ ಹೊರಬರುತ್ತದೆ. ಬಂದಂತ  ಯಾವ ವ್ಯವಸ್ಥಾಪಕ ನಿರ್ದೇಶಕರುಗಳು ಸಹ ಈ ಬಗೆಗೆ ಯಾವುದೇ ಕ್ರಮವಹಿಸದೇ ಡೋಲಾಯಮಾನ ಸ್ಥಿತಿಯಲ್ಲಿಟ್ಟಿರುವುದು ಪ್ರಶ್ನಾತೀತವಾಗಿದೆ. ಇದರ ಬಗ್ಗೆ ತಮಗೆ ನಿಜವಾಗಲು ಆಸಕ್ತಿಯಿದ್ದಲ್ಲಿ ಪರಿಶೀಲಿಸಿ ಸೂಕ್ತಕ್ರಮವಹಿಸಬೇಕು.
4. ಕೆಎಸ್‌.&ಡಿ.ಎಲ್‌, ಬೆಂಗಳೂರು ಕಾರ್ಖಾನೆಯ ಆವರಣದಲ್ಲಿ ಕೆ.ಎಸ್‌.& ಡಿ.ಎಲ್‌. ಮತ್ತು ಕೆ.ಎಂ.ಎಫ್‌. ಜೊತೆಗೆ 1450 ಸ್ಕ್ವೇರ್‌ ಫೀಟ್‌ ಲೀಸ್‌ ಒಪ್ಪಂದವಾಗಿದ್ದು ಅದರಲ್ಲಿ ಕೆ.ಎಂ.ಎಫ್‌. ಉತ್ಪನ್ನಗಳನ್ನು ಮಾರಾಟ ಮಾಡಲು 18 ವರ್ಷಗಳ
ಒಪ್ಪಂದವಾಗಿರುತ್ತದೆ. ಈ ಒಪ್ಪಂದದಲ್ಲಿ ಕೆ.ಎಸ್‌.ಹಿಡಿ.ಎಲ್‌. ವತಿಯಿಂದ 1450 ಸ್ಕ್ವೇರ್‌ ಫೀಟ್‌ ಮಾತ್ರ ಒಪ್ಪಂದವಾಗಿದೆ.
ಆದರೆ ಸದರಿ ಸ್ಥಳದಲ್ಲಿ 3000 ಸ್ಕ್ವೇರ್‌ ಫೀಟ್‌ ಕೆ.ಎಂ.ಎಫ್‌.ಗೆ ನೀಡಿ ಆ ಸ್ಥಳದಲ್ಲಿ ಅಕ್ರಮ ಹೋಟೆಲ್‌ ನಡೆಯುತ್ತಿದೆ. ಇದಕ್ಕೆ ತಮ್ಮ ಆಡಳಿತ ವರ್ಗದ ಅಧಿಕಾರಿಗಳು ಶಾಮೀಲಾಗಿ ಖಾಸಗೀಯವರ ಮುಖಾಂತರ ವ್ಯವಹರಿಸಲು ಅವಕಾಶ ಮಾಡಿರುವುದು ಇಲ್ಲಿ ಸ್ಪಷ್ಟವಾಗಿದೆ. ಇದರ ಬಗ್ಗೆ ತನಿಖೆ ನಡೆಸಿದರೆ ಯಾವ ಯಾವ ಅಧಿಕಾರಿಗಳು ಶಾಮೀಲಾಗಿ ಖಾಸಗಿಯವರಿಂದ ಪ್ರತಿ ತಿಂಗಳು ಲಂಚ ಪಡೆಯುತ್ತಿರುವುದು ತಿಳಿದು ಬರುತ್ತದೆ.

5) ರುಚಿ ಶೋಯಾ ಇಂಡಸ್ಟ್ರೀಸ್‌ ಸಂಸ್ಥೆಯ ಪ್ರಕರಣವನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಅದರ ಬಗ್ಗೆ ತನಿಖೆ ನಡೆಸಿದ ಹಿನ್ನೆಲೆಯಲ್ಲಿ ಹಣಕಾಸು ನಿರ್ದೇಶಕರಾದ ಶ್ರೀ ವೆಂಕಟೇಶಯ್ಯರವರನ್ನು ಕೆಲಸದಿಂದ ವಜಾ ಮಾಡಿರುವ ಬಗ್ಗೆ ತಾವು ಪರಿಶೀಲಿಸಬಹುದು. ಇದೇ ಪ್ರಕರಣದಲ್ಲಿ ಶಾಮೀಲಾದ ಇನ್ನೂ ಕೆಲವು ಅಧಿಕಾರಿಗಳ ಮೇಲೆ ಯಾವುದೇ ಕ್ರಮವಹಿಸಿಲ್ಲ. ಇಲ್ಲಿನ ಕೆಲವು ಭ್ರಷ್ಟ ಅಧಿಕಾರಿಗಳು ಘನ ನ್ಯಾಯಾಲಯದ ಡಿಕ್ರಿ ಆದೇಶದ ಮೂಲ ಪ್ರತಿಯನ್ನು ತಿದ್ದಿ ಹೆಚ್ಚುವರಿಯಾಗಿ 27,96,710/- ರೂ.ಗಳನ್ನು ಸೇರಿಸಿ ಒಟ್ಟು ಮೊತ್ತ ರೂ.1,62,35,353/- ರೂ.ಗಳನ್ನು ಪಾವತಿ ಮಾಡಿ ಕಂಪನಿಗೆ 27.96,710/- ರೂ.ಗಳ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಇದನ್ನು ತಾವು ಸಂಬಂಧಪಟ್ಟ ದಾಖಲೆಗಳನ್ನು ಆಡಳಿತ ವರ್ಗದಲ್ಲಿ ಪರಿಶೀಲಿಸಿದರೆ ಕಾರ್ಖಾನೆಗೆ ಮಾಡಿರುವ ನಷ್ಟದ ಬಗ್ಗೆ ತಮಗೂ ಸಹ ತಿಳಿದಂತಾಗುತ್ತದೆ.

6) ಕೆ.ಎಸ್‌. & ಡಿ.ಎಲ್‌ ಕಾರ್ಖಾನೆಗೆ ಐ.ಎಫ್‌.ಎಸ್‌. ಅಧಿಕಾರಿಯಾಗಿದ್ದ ಶ್ರೀ ಕೇಶವ ಮೂರ್ತಿಯವರ ಕಾಲದಲ್ಲಿ ಕಾರ್ಖಾನೆಗೆ ಕಚ್ಛಾ ಸಾಮಗ್ರಿ ಸರಬರಾಜು ಮಾಡದ ಬಾಲಾಜಿ ಫಡ್‌ ಫ್ರಾಡಕ್ಟ್‌ ಗೆ 4.64 ಕೋಟಿ ಹಣ ನೀಡಿ ನಷ್ಟ ಉಂಟು ಮಾಡಿರುವ ಬಗ್ಗೆ ಈಗಾಗಲೇ ರಾಜ್ಯ ಉಚ್ಛ ನ್ಯಾಯಾಲಯದಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಶ್ರೀನಿವಾಸರೆಡ್ಡಿಯವರ ವರದಿಯಲ್ಲಿ ಸಾಕ್ಷಿಯಾಗಿದೆ. ಈ ವರದಿಯಲ್ಲಿ ಸೂಚನೆ ನೀಡಿದರು ಸಹ ಇಲ್ಲಿಯವರೆಗೂ ಆಡಳಿತ ವರ್ಗ ಯಾವುದೇ ಸೂಕ್ತಕ್ರಮವಹಿಸಿಲ್ಲ. ಇದು ಕೆ.ಎಸ್‌.& ಡಿ.ಎಲ್‌. ದಾಖಲೆಗಳಲ್ಲಿ ಲಭ್ಯವಿರುತ್ತದೆ.

7) ಕೆ.ಎಸ್‌. & ಡಿ.ಎಲ್‌ ಕಾರ್ಖಾನೆಯಲ್ಲಿ ಕೇವಲ 213 ಜನ ಮಾತ್ರ ಬೆಂಗಳೂರು, ಮೈಸೂರು, ಶಿವಮೊಗ್ಗದಲ್ಲಿ ಖಾಯಂ ನೌಕರರಿದ್ದಾರೆ. ಆದರೆ 1201 ಕ್ಯೂ ಹೆಚ್ಚು ಗುತ್ತಿಗೆ ಕಾರ್ಮಿಕರು  ಕೆಲಸ ಮಾಡುತ್ತಿದ್ದಾರೆ.
ಈ ಕಾರ್ಮಿಕರಿಗೆ ಕಾನೂನಿನ ಪ್ರಕಾರ ನೀಡಬೇಕಿರುವ ಸವಲತ್ತುಗಳನ್ನು ನೀಡದಿರುವ ಬಗ್ಗೆ ಈಗಾಗಲೇ ಕಾರ್ಮಿಕ ಇಲಾಖೆ ಹಾಗೂ ಚೀಪ್‌ ಇನ್ಸ್‌ಪೆಕ್ಟರ್‌ ಆಫ್‌ ಫ್ಯಾಕ್ಟರೀಸ್‌ ವಿಭಾಗದವರು ಕಾರ್ಪಾನೆಗೆ ನೋಟೀಸ್‌ ಅನ್ನು ಜಾರಿ ಮಾಡಿರುವುದು ತಮಗೆ ತಿಳಿದ ವಿಷಯವೋ, ಇಲ್ಲವೋ ಗೊತ್ತಿಲ್ಲ. ಈಗಾಗಲೇ ಕಾರ್ಖಾನೆಯಲ್ಲಿ 450ಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಮೈಸೂರಿನ ಶಾರ್ಪ್‌ ಗುತ್ತಿಗೆದಾರರು ಕಾನೂನುಗಳನ್ನು ಉಲ್ಲಂಘನೆ ಮಾಡಿ ಗುತ್ತಿಗೆ ಲೈಸೆನ್ಸ್‌ ಪಡೆದಿಲ್ಲ. ಇದರ ಬಗ್ಗೆ ತಮ್ಮ ಆಡಳಿತ ವರ್ಗ ಏನೂ ಕ್ರಮವಹಿಸದೇ ತಮ್ಮ ಅಧಿಕಾರಿಗಳು ಗುತ್ತಿಗೆದಾರರಲ್ಲಿ ಶಾಮೀಲಾಗಿ ಕಾರ್ಮಿಕರಿಗೆ ಮೋಸ ಮಾಡುತ್ತಿರುವುದನ್ನು ತಾವು ಆಸಸಕ್ತಿಯಿದ್ದಲ್ಲಿ ಪರಿಶೀಲಿಸಿದರೆ ತಮಗೆ ಸತ್ಯ ಸಂಗತಿ ತಿಳಿಯುತ್ತದೆ.

8) ಕೆ.ಎಸ್‌. & ಡಿ.ಎಲ್‌ ಕಾರ್ಖಾನೆಯಲ್ಲಿ ಇತ್ತೀಚೆಗೆ ಆಡಳಿತ ಮಂಡಳಿಯಲ್ಲಿ ತೀರ್ಮಾನವಾದ ಪ್ರಕಾರ ಹಾಗೂ ಕೆ.ಎಸ್‌ & ಡಿ.ಎಲ್‌. ಅಧ್ಯಕ್ಷರಾದ ತಾವು ಸೂಚನೆ ತಿಳಿಸಿರುವ ಪ್ರಕಾರ ಶೇ.10ರಷ್ಟು ವೇತನ ಹೆಚ್ಚಳವನ್ನು ಕೆ.ಎಸ್‌.&ಡಿ.ಎಲ್‌. ಮಾರುಕಟ್ಟೆ ವಿಭಾಗದ ಶ್ರೀ ಸಿ.ಎಂ.ಸುವರ್ಣ ಕುಮಾರ್‌ ಮಾರುಕಟ್ಟೆ ವಿಭಾಗದ ನೌಕರರಿಗೆ ನೀಡಲು ವಿರೋಧಿಸಿದ್ದಾರೆ. ಆದರೆ ಇದೇ ಸುವರ್ಣ ಕುಮಾರ್‌ ದೇಶದ ಇತರೆ ಭಾಗಗಳಲ್ಲಿ ಕಾರ್ಮಿಕರಿಗೆ ಇಷ್ಟ ಬಂದಂತೆ ಸವಲತ್ತುಗಳನ್ನು ನೀಡಿದ್ದಾರೆ. ಬೆಂಗಳೂರಿನ ಮಾರುಕಟ್ಟೆ ವಿಭಾಗದ ನೌಕರರಿಗೆ ನೀಡದೇ ಅವರ ಮೇಲೆ ದ್ವೇಷ ಕಾರುತ್ತಿದ್ದಾರೆ. ಇದು ಸುವರ್ಣಕುಮಾರ್‌ ರವರ ಆಡಳಿತ ವರ್ಗದ ವೈಖರಿಯಾಗಿದೆ. ಈ ಅಧಿಕಾರಿ ಕೆ.ಎಸ್‌.& ಡಿ.ಎಲ್‌. ಕಾರ್ಖಾನೆ ತನ್ನ ಸ್ವಂತ ಆಸ್ತಿಯೆಂದು ಭಾವಿಸಿರುವುದು ಕಾರಣ ಹಾಗೂ ಇಲ್ಲಿಗೆ ಬಂದಂತ ಎಲ್ಲಾ ವ್ಯವಸ್ಥಾಪಕ ನಿರ್ದೇಶಕರು
ಅವರ ನಾಟಕೀಯ ಪ್ರದರ್ಶನ, ಕುತಂತ್ರ ಹಾಗೂ ಮೋಸಕ್ಕೆ ಮನಸೋತಿರುವುದು ಕಾರಣವಾಗಿದೆ.
9) ಇತ್ತೀಚೆಗೆ ಕೆ.ಎಸ್‌.& ಡಿ.ಎಲ್‌. ಕಾರ್ಖಾನೆಯಲ್ಲಿ ನಡೆದಿರುವ ಭಾರೀ ಪ್ರಮಾಣದ ಭ್ರಷ್ಠಾಚಾರಗಳ ಹಾಗೂ ಹಗಲು ದರೋಡೆಯ ಬಗ್ಗೆ ಗೌರವಾನ್ದಿತ ಲೋಕಾಯುಕ್ತಕ್ಕೆ 28-10-2020, 15-12-2020, 05-11-2020, 13-11-2020 ರಂದು ನಾನು ಅರ್ಜಿಗಳನ್ನು ಸಲ್ಲಿಸಲಾಗಿದೆ. ಲೋಕಾಯುಕ್ತದ ತನಿಖೆ ನಂತರ ಸತ್ಯಾಸತ್ಯತೆಗಳು ಬೆಳಕಿಗೆ ಬರುತ್ತದೆ. ಇಲ್ಲಿನ ಅಧಿಕಾರಿಗಳ ಭ್ರಷ್ಟಾಚಾರದಿಂದ ಕಾರ್ಖಾನೆಗೆ ಬರುವ ಲಾಭದಲ್ಲಿ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ.
10) ಕೆ.ಎಸ್‌ & ಡಿ.ಎಲ್‌ ಕಾರ್ಖಾನೆಗೆ ಈಗಾಗಲೇ ತನಿಖೆಯಿಂದ ರುಜುವಾತಾಗಿರುವ ಪ್ರಕಾರ ಶ್ರೀ ಜಿ.ಎಸ್‌.ಭಟ್‌, ಆಂಜನಪ್ಪ ಹಾಗೂ ಇತರೆ ಅಧಿಕಾರಿಗಳು ಕೋಟಿಗಟ್ಟಲೆ ಹಣ ಕಟ್ಟಬೇಕಾಗಿದೆ. ಆದರೆ ಕೆ.ಎಸ್‌ & ಡಿ.ಎಲ್‌ಗೆ ಬಂದ ಕೆಲವು
ವ್ಯವಸ್ಥಾಪಕ ನಿರ್ದೇಶಕರುಗಳು ಈ ಭಷ್ಟ ಅಧಿಕಾರಿಗಳು ಕಟ್ಟಬೇಕಿರುವ ಹಣದ ಬಗ್ಗೆ ಯಾವುದೇ ಸೂಕ್ತ ಕ್ರಮವಹಿಸಿಲ್ಲ.
ಈಗಾಗಲೇ ಕಾರ್ಖಾನೆಗೆ ಸಾಬೂನು ನ್ಯೂಡಲ್ಸ್‌ ಖರೀದಿಯಲ್ಲಿ 29 ಕೋಟಿ 50 ಲಕ್ಷ, ಸುಗಂಧ ದ್ರವ್ಯಗಳ ಖರೀದಿಯಲ್ಲಿ 4 ಕೋಟಿ 80 ಲಕ್ಷ, ಸ್ಯಾಂಡಲ್‌ ಬೂಸ್ಟರ್‌ ಖರೀದಿಯಲ್ಲಿ 10 ಕೋಟಿ 50 ಲಕ್ಷ, ಆಲ್‌ಫೇರ್‌ ವಿಷಯದಲ್ಲಿ ಆದ ನಷ್ಟಕ್ಕೆ 1 ಕೋಟಿ 80 ಲಕ್ಷ, ಕಲ್ಲಿದ್ದಲು ಸಾಗಾಣಿಕೆಯಲ್ಲಿ ಮಾಡಿರುವ ನಷ್ಟಕ್ಕೆ 9.48 ಲಕ್ಷ, ಬಾಲಾಜಿ ಘುಡ್‌ ಪ್ರಾಡಕ್ಟ್‌ನ ಸಾಮಗ್ರಿಗಳನ್ನು ತರಿಸದೇ ಸಂದಾಯ ಮಾಡಿರುವ ಹಣ 4 ಕೋಟಿ 64 ಲಕ್ಷ. ಇದರ ಬಗ್ಗೆ ವ್ಯವಸ್ಥಿತವಾಗಿ ಸಿ.ಬಿ.ಐ. ಹಾಗೂ ಈ.ಡಿ. ಮುಖಾಂತರ ತನಿಖೆ ನಡೆಸಿದರೆ ಇಲ್ಲಿ ಸರಬರಾಜು ಮಾಡಿರುವ ಹವಾಲ ಸ್ಥಿತಿ ತಮಗೆ ತಿಳಿಯುತ್ತದೆ.

11) ಕೆ.ಎಸ್‌ & ಡಿ.ಎಲ್‌ನ 104 ವರ್ಷದ ಇತಿಹಾಸದಲ್ಲಿ ಕಾರ್ಖಾನೆ ವಿರುದ್ಧ ಕಚ್ಛಾ ಸಾಮಗ್ರಿಗಳನ್ನು ಸರಬರಾಜು ಮಾಡುವ ಕರ್ನಾಟಕ ಆರೋಮ ಸಂಸ್ಥೆ, ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತಂದಿದೆ. ರಾಜ್ಯ ಉಚ್ಛ
ನ್ಯಾಯಾಲಯದ ತಡೆಯಾಜ್ಞೆಯ WP NO.10106/2020 (GM-Ten) ರಲ್ಲಿ ಪರಿಶೀಲಿಸಬಹುದು. ಈ ಗುತ್ತಿಗೆದಾರರು
ಒಂದೇ ಕಟ್ಟಡದಲ್ಲಿ ಅಣ್ಣ ತಮ್ಮಂದಿರುವ 3 ಸಂಸ್ಥೆಗಳನ್ನು ಹೊಂದಿದ್ದು ಕರ್ನಾಟಕ ಆರೋಮ, ಕರ್ನಾಟಕ ಕೆಮಿಕಲ್ಸ್‌ ಹೆಸರಿನಲ್ಲಿ ಕೋಟಿಗಟ್ಟಲೆ ಬೆಲೆವುಳ್ಳ ಕಚ್ಛಾ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದಾರೆ.

12) ಕೆ.ಎಸ್‌.&ಡಿ.ಎಲ್‌. ಕಾರ್ಖಾನೆಯಲ್ಲಿ ಕಾರ್ಖಾನೆ ವಿರುದ್ಧವೇ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು, ಕರ್ನಾಟಕ ಆರೋಮದಿಂದ 13 ಸಾವಿರ ಮೆಟ್ರಿಕ್‌ ಟನ್‌ ನ್ಯೂಡಲ್ಸ್‌ ಅನ್ನು ಖರೀದಿಸಲಾಗಿದೆ. ಈ 2 ಸಂಸ್ಥೆಗಳು ಕಳೆದ
ಐದಾರು ವರ್ಷಗಳಿಂದ ಸರಬರಾಜು ಮಾಡಿರುವ ಕಚ್ಛಾ ಸಾಮಗ್ರಿಗಳ ಬಗ್ಗೆ ತಾವು ಕಾರ್ಖಾನೆ ಹಾಗೂ ಕಾರ್ಮಿಕರ ಹಿತದೃಷ್ಠಿಯಿಂದ ಸಿ.ಬಿ.ಐ. ಹಾಗೂ ಈ.ಡಿ.ಯ ಮುಖಾಂತರ ತನಿಖೆ ಮಾಡಲು ಕಳಕಳಿಯಿಂದ ಮನವಿ ಮಾಡಲಾಗಿದೆ.
13) ಈಗಾಗಲೇ ಹಿಂದೆ ಅದಾನಿ ಸಂಸ್ಥೆ ವತಿಯಿಂದ 21 ಸಾವಿರ ಮೆಟ್ರಿಕ್‌ ಟನ್‌ ನ್ಯೂಡಲ್ಸ್‌ ಅನ್ನು ಖರೀದಿಸಲಾಗಿತ್ತು. ಅದರ ಬೆಲೆ ತದನಂತರ ಹಾಲಿ ವ್ಯವಸ್ಥಾಪಕ ನಿರ್ದೇಶಕರು ಬಂದ ಮೇಲೆ ಅದಾನಿ ಸಂಸ್ಥೆ ಬಿಟ್ಟು ಏಜೆಂಟ್‌ ಮೂಲಕ ಅಂದರೆ ಕರ್ನಾಟಕ ಆರೋಮ ಮೂಲಕ 6 ಸಾವಿರ ಮೆಟ್ರಿಕ್‌ ಟನ್‌ ಹಾಗೂ ಸಾವಿರ ಮೆಟ್ರಿಕ್‌ ಟನ್‌ ಕೊಂಡುಕೊಳ್ಳಲಾಗಿದೆ. ತಾವು ಸೂಕ್ಷ್ಮವಾಗಿ ಪರಿಶೀಲಿಸಬೇಕಾದಲ್ಲಿಅದಾನಿಯವರಿಂದ ಕರ್ನಾಟಕ ಆರೋಮಗೆ ನೀಡಿರುವ ಬಿಲ್‌ ಅನ್ನು ಅದೇ ಸಾಮಗ್ರಿಗೆ ಕರ್ನಾಟಕ ಆರೋಮ ಕೆ.ಎಸ್‌& ಡಿ.ಎಲ್‌.ಗೆ ನೀಡಿರುವ ಬಿಲ್‌ ಅನ್ನು ಪರಿಶೀಲಿಸದರೆ ಯಾವ ರೀತಿ ಅನ್ಯಾಯವಾಗಿದೆ ಎಂಬುದು ತಿಳಿದು ಕೆ.ಎಸ್‌ & ಡಿ.ಎಲ್‌.ಗೆ ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ, ಏಕೆ ಏಜೆಂಟ್‌ ಮೂಲಕ ಕೊಂಡುಕೊಳ್ಳುತ್ತಾರೆ, ಅದರಿಂದ ಸಿಗುವ ಕಮಿಷನ್‌ ಏನು ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ.
14) ಕೆ.ಎಸ್‌ & ಡಿ.ಎಲ್‌. ಕಾರ್ಖಾನೆಗೆ ಕಳೆದ 25 ವರ್ಷಗಳಿಂದ ಒಂದೇ ಕುಟುಂಬದ ಅಪ್ಪ, ಮಗ, ಅಣ್ಣ ತಮ್ಮಂದಿರುವ ಒಂದೇ ಸ್ಥಳದಲ್ಲಿ ಏಜೆನ್ಸಿಗಳನ್ನು ಮಾಡಿಕೊಂಡು ನಿರಂತರವಾಗಿ ಬೇರೆಯವರು ಟೆಂಡರ್‌ನಲ್ಲಿ ಭಾಗವಹಿಸಿದರು ಅವಕಾಶ ನೀಡದೇ ಈ ಕೆಲವೇ ಕುಟುಂಬದ ವ್ಯಕ್ತಿಗಳು ಆಡಳಿತ ವರ್ಗದವರಿಗೆ ಲಂಚ ನೀಡಿ ಕಳಪೆ ಮಟ್ಟದ ಕಚ್ಛಾ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದಾರೆ. ಈಗಾಗಲೇ ಈ ಕಚ್ಛಾ ಸಾಮಗ್ರಿಗಳ ಗುಣಮಟ್ಟ ಸರಿಯಿಲ್ಲದಿರುವ ಬಗ್ಗೆ ತನಿಖೆಯೂ ಸಹ ನಡೆಸಲಾಗಿದೆ.
ಈ ತನಿಖೆಯನ್ನು ಕೇಂದ್ರ ಸರ್ಕಾರದ ಎಫ್‌.ಎಫ್‌.ಡಿ.ಸಿ. ಸಂಸ್ಥೆ ವತಿಯಿಂದ ತನಿಖೆ ನಡೆಸಲಾಗಿದೆ. ತನಿಖೆಯಲ್ಲಿ ಗುಣಮಟ್ಟ ಸರಿಯಿಲ್ಲದಿದ್ದರು ಸಹ ಆಡಳಿತ ವರ್ಗ ಈ ಕುಟುಂಬದ ಸದಸ್ಯರುಗಳಿಗೆ ಹಾಗೂ ಕೆಲವು ಭ್ರಷ್ಟ ವ್ಯವಸ್ಥೆಯ ಬಗ್ಗೆ ಸರಬರಾಜು ಮಾಡುತ್ತಿದ್ದಾರೆ.
15) ಕೆ.ಎಸ್‌.&ಡಿ.ಎಲ್‌.ನಲ್ಲಿ ಈಗಾಗಲೇ ಭಾರೀ ಪ್ರಮಾಣದ ಭ್ರಷ್ಟಾಚಾರ ಮಾಡಿದ ಹಾಗೂ ಕೆ.ಎಸ್‌.ಡಿ.ಎಲ್‌.ನಲ್ಲಿ ಕೆಲಸದಿಂದ ವಜಾ ಮಾಡಿದ ಜಿ.ಎಸ್‌.ಭಟ್‌ ಇಂದಿಗೂ ಸಹ ಕೆ.ಎಸ್‌.ಡಿ.ಎಲ್‌.ಗೆ ಬರುವ ವ್ಯವಸ್ಥಾಪಕ ನಿರ್ದೇಶಕರುಗಳ
ಮೂಲಕ ಎಲ್ಲಾ ಕಚ್ಛಾ ಸಾಮಗ್ರಿಗಳನ್ನು ಸರಬರಾಜು ಮಾಡುವ ಮೂಲಕ ವ್ಯವಹರಿಸುತ್ತಿದ್ದಾರೆ. ಹಾಲಿ ವ್ಯವಸ್ಥಾಪಕ ನಿರ್ದೇಶಕರು ಸಹ ಜಿ.ಎಸ್‌.ಭಟ್‌. ಕಛೇರಿಯಲ್ಲಿ ವೆಂಡರ್ಸ್‌ಗಳ ಸಭೆ ನಡೆಸಿರುವ ಬಗ್ಗೆ ಉದಾಹರಣೆಗಳಿವೆ.
ಈ ಮೇಲ್ಕಂಡ ಅಂಶಗಳಲ್ಲದೇ ಇನ್ನೂ ಹಲವಾರು ದಾಖಲೆಗಳಿವೆ. ಕೆ.ಎಸ್‌ & ಡಿ.ಎಲ್‌.ಗೆ ಸರಬರಾಜು ಆಗುವ ಬಹುತೇಕ ಕಚ್ಛಾ ಸಾಮಗ್ರಿಗಳು ಅಂತರಾಜ್ಯದಿಂದ ಸರಬರಾಜು ಆಗುತ್ತಿರುವುದರಿಂದ ಸರಬರಾಜು ಮಾಡುತ್ತಿರುವ ಕೆಲವು ವ್ಯಕ್ತಿಗಳು ಹವಾಲದ ದಂಧೆ ನಡೆಸುತ್ತಿರುವುದರಿಂದ ತಾವು ಸದರಿ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಸಿ.ಬಿ.ಐ. ಹಾಗೂ ಈಡಿ ಗೆ ನೀಡಲು ಕಳಕಳಿಯ ಮನವಿ ಎಂದು ಪತ್ರ ಬರೆದಿದ್ದಾರೆ.

ನಾಡಿನ ಪ್ರತಿಷ್ಠಿತ ಸಂಸ್ಥೆಯಾದ ಮೈಸೂರು ಸೋಪ್ ಪ್ಯಾಕ್ಟರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗೆಗೆ ಮುಂದೆ ವಾಯ್ಸ್ ಆಫ್ ವರ್ಕರ್ಸ್’ ಧ್ವನಿ ಗೂಡಿಸಲಿದ್ದು. ಸಂಸ್ಥೆಯನ್ನು ಅಕ್ರಮರಹಿತವಾಗಿ, ಪಾರಾದರ್ಶಕವಾಗಿ ನೋಡುವುದು ನಾಡಿನ ಪ್ರತಿಯೊಬ್ಬ ನಾಗರೀಕನ ಆಶಯವಾಗಿದೆ. ಆದ್ದರಿಂದ, ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗೆಗೆ ವಾಯ್ಸ್ ಆಫ್ ವರ್ಕರ್ಸ್’ ಆಂದೋಲನವನ್ನು ಆರಂಭಿಸಲಿದ್ದು, ಸಂಸ್ಥೆಯನ್ನು ಮತ್ತಷ್ಟು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಮುಂದಿನ ದಿನಗಳಲ್ಲಿ ಮತ್ತಷ್ಟು ಅಕ್ರಮಗಳನ್ನು ಬಯಲಿಗೆಳೆಯಲಿದೆ.