18 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ: ಟಿಕೆಎಂಇಯು
ಟಿಕೆಎಂ ಆಡಳಿತ ಮಂಡಳಿಯ ನಿಲುವಿಗೆ ಕಾರ್ಮಿಕ ಸಂಪೂರ್ಣ ಬೆಂಬಲ ನೀಡಿ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂದು ಟಿಕೆಎಂಇಯು ಆರೋಪಿಸಿದೆ


ರಾಮನಗರ : ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಆಡಳಿತ ಮಂಡಳಿ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಕ್ರಮವನ್ನು ವಿರೋಧಿಸುತ್ತಾ ಟಿಕೆಎಂ ನೌಕರರು ಸ್ವಾಭಿಮಾನಿ ಹೋರಾಟವನ್ನು ಮುಂದುವರೆಸಿದ್ದಾರೆ.
ಕಾರ್ಮಿಕರ ಪ್ರತಿಭಟನೆಗೆ ಜಾಗವನ್ನು ಇಲ್ಲದಂತೆ ಮಾಡಿದ್ದ ಆಡಳಿತ ಮಂಡಳಿಯ ಪಿತೂರಿಗೆ ದಿಟ್ಟತನದಿಂದ ಕಾರ್ಮಿಕರು ರಸ್ತೆಯಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದು, ಪ್ರತಿಭಟನಾ ಹೋರಾಟವು 38ನೇ ದಿನಕ್ಕೆ ಕಾಲಿಟ್ಟಿದೆ.
ಈ ನಡುವೆ ಸಂಸ್ಥೆಯ ಕಾರ್ಯಾಚರಣೆಯ ಲಾಕ್ ಔಟ್ ತೆರವಿನ ನಂತರದ ಕಾರ್ಖಾನೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಕೆಲ ನೌಕರರು ಪುನಃ ಕಾರ್ಮಿಕ ಸಂಘದ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಕಾರ್ಮಿಕ ಇಲಾಖೆಯ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾನಿರತ ಕಾರ್ಮಿಕರು ಅಸಹಾಯತೆ ಜೊತೆ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ.
ಸಮಸ್ಯೆಗಳನ್ನು ಬಗೆಹರಿಸಲು ಕಾರ್ಮಿಕ ಇಲಾಖೆಯು ಮುಂದಾಗದೆ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾ ನಿರತ ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.
ಇನ್ನು, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶದಿಂದಲೇ ಶುಕ್ರವಾರದಂದು ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಆಡಳಿತ ಮಂಡಳಿ ಶಿಸ್ತು ಪಾಲನೆಯ ಕಾರಣ ನೀಡಿ ಒಬ್ಬ ನೌಕರನನ್ನು ಅಮಾನತು ಮಾಡಿತ್ತು ನಂತರ 39 ಕಾರ್ಮಿಕರನ್ನು, ಮುಂದಿನ ದಿನಗಳಲ್ಲಿ 60 ನೌಕರರನ್ನು ಅಮಾನತು ಮಾಡಿತ್ತು.