Take a fresh look at your lifestyle.

ಅರ್ಹ ಮಹಿಳೆಗೆ ಸಿಗದ ಅಂಗನವಾಡಿ ಕಾರ್ಯಕರ್ತೆ ಹುದ್ದೆ

8 ವರ್ಷಗಳಿಂದ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಾ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಬರೆದು ಉತೀರ್ಣರಾಗಿದ್ದ ದಿವ್ಯಾಂಗಿ ಈಗ ಸ್ಥಾನ ವಂಚಿತರಾಗಿದ್ದಾರೆ

0
post ad

ಮಡಿಕೇರಿ : ತಕ್ಕ ಅರ್ಹತೆಗಳು ಇದ್ದರೂ, ಎಂಟು ವರ್ಷಗಳಿಂದ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರೂ, ದಿವ್ಯಾಂಗದ ದೃಷ್ಟಿಯಲ್ಲಿ ಪ್ರಾಶಸ್ಥ್ಯ ಪಡೆದುಕೊಳ್ಳಬಹುದಾಗಿದ್ದರು ಅಂಗನವಾಡಿ ಕಾರ್ಯಕರ್ತೆ ಹುದ್ದೆ ಗಳಿಸಲು ವಂಚಿತರಾಗಿರುವ ಪ್ರಕರಣ ಮಡಿಕೇರಿಯಲ್ಲಿ ಬಯಲಾಗಿದೆ. ಮೇಲ್ನೋಟಕ್ಕೆ ಭ್ರಷ್ಟಾಚಾರದ ವಾಸನೆ ಹರಡಿರುವ ಈ ಪ್ರಕರಣದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ತಾಳಕ್ಕೆ ಕುಣಿದು ಅಧಿಕಾರಿಗಳು ಅರ್ಹ ಮಹಿಳೆಗೆ ಅನ್ಯಾಯ ಎಸಗಿದ್ದಾರೆ.
ಈ ಸಾಲಿನ ಅಂಗನವಾಡಿ ಕಾರ್ಯಕರ್ತೆಯ ಆಯ್ಕೆ ಪ್ರಕ್ರಿಯೆಯಲ್ಲಿ ಲಂಚದ ಶತಾವತಾರಗಳೇ ಪಾರಮ್ಯ ಮೆರದು ಇಲಾಖೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಅಚ್ಚು  ಬಿದ್ದಾಗಿದೆ, ಈ ಬಗೆಗೆ ಹಲವು ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಅಂಗನವಾಡಿ ಮಹಾಮಂಡಳಿ ಸೇರಿದಂತೆ ಕಾರ್ಮಿಕ ಸಂಘಟನೆಗಳು ಧ್ವನಿ ಎತ್ತುವ ಜೊತೆಗೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ.
ಇನ್ನೂ ಮಡಿಕೇರಿಯ ಪ್ರಕರಣಕ್ಕೆ ಬರುವುದಾದರೆ,
ಸಿ.ಎಲ್‌.ರವಿಕಲಾ ಎಂಬಾಕೆ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕಾರ್ಯಕರ್ತೆಯ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹುದ್ದೆಗೆ ಬೇಕಿರುವ ಅರ್ಹತೆಯ ಜೊತೆಗೆ ಈಕೆ ದಿವ್ಯಾಂಗಿ ಎಂಬುದು ವಿಶೇಷ. ಅರ್ಹತೆ ಮತ್ತು ಪ್ರಾಶಸ್ತ್ಯದನ್ವಯ ರವಿಕಲಾರವರಿಗೆ ದೊರೆಯಬೇಕಿದ್ದ ಹುದ್ದೆಯನ್ನು ಸ್ಥಳೀಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಕೊಡಗು ಜಿಲ್ಲಾ ಉಪ ನಿರ್ದೇಶಕರು ಇವರಿಗೆ ನೀಡದೇ ಸ್ಥಳೀಯ ರಾಜಕೀಯ ಮುಂಖಡರ ಒತ್ತಡ ಹಾಗೂ ಹಣ
ಆಮಿಷಗಳಿಗೆ ಒಳಗಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಸಿ.ಎಲ್‌.ರವಿಕಲಾ ಆಗಸ್ಟ್ 25 ರಂದು ಉಪ ನಿರ್ದೇಶಕರಿಗೆ, ಜಿಲ್ಲಾಧಿಕಾರಿಗೆ, ಬಾಲ ವಿಕಾಸ
ಯೋಜನಾಧಿಕಾರಿಗಳಿಗೆ ತಮ್ಮ ಎಲ್ಲಾ ಮೂಲ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ಆ ಮೂಲ ದಾಖಲಾತಿಗಳನ್ನು ನೀಡಿದ್ದರು ಇವರಿಗೆ ಸದರಿ ಹುದ್ದೆಯನ್ನು ನೀಡುತ್ತಿಲ್ಲ.   ಸಹಾಯಕಿಯಾಗಿ ಕೆಲಸ ಮಾಡುತ್ತಿರುವುದರಿಂದ ಸದರಿ ಹುದ್ದೆಯು ಸಿ.ಎಲ್‌.ಕವಿಕಲಾರವರಿಗೆ ನ್ಯಾಯಯುತವಾಗಿ ಲಭಿಸಬೇಕಿತ್ತು.

ಹಿನ್ನಲೆ :
ಶ್ರೀಮತಿ ಸಿ.ಎಲ್‌.ರವಿಕಲಾ  ಇವರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕುಂಡಾಲಪಡಿ ಪೆರಾಜೆ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಇಂದಿರಾ ಆವಾಜ್‌ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇದ್ದು ಆ ಹುದ್ದೆಗೆ ಇವರು ಅರ್ಜಿ ಸಲ್ಲಿಸಿದ್ದರು. ಈಗಾಗಲೇ 8 ವರ್ಷಗಳಿಂದ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿರುವ ರವಿಕಲಾರವರು ಸೇವೆ ಸಲ್ಲಿಸುತ್ತಾ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಬರೆದು ಉತೀರ್ಣರಾಗಿದ್ದರು. ಸರ್ಕಾರ ಅಂಗನವಾಡಿ ಸಹಾಯಕಿ ಎಸ್‌.ಎಸ್‌.ಎಲ್‌.ಸಿ. ಉತೀರ್ಣರಾಗಿ ಅರ್ಹತೆ ಇದ್ದರೆ ಅವರಿಗೆ ಈ ಹುದ್ದೆ ನೀಡಲು ಸ್ಪಷ್ಟ ಆದೇಶವಿದೆ.

ಈ ಪ್ರಕರಣದ ಬಗೆಗೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಧ್ವನಿ ಎತ್ತಿದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಪತ್ರವನ್ನು ಬರೆದಿದೆ. ಈ ಪ್ರತಿ ವಾಯ್ಸ್ ಆಫ್ ವರ್ಕರ್ಸ್ ಗೆ ದೊರೆತಿದೆ.
ಒಟ್ಟಾರೆ ಅರ್ಹಗಳ ಜೊತೆಗೆ ದಿವ್ಯಾಂಗ ದೃಷ್ಟಿಯಿಂದ ರವಿಕಲಾರವರಿಗೆ ನ್ಯಾಯಸಮ್ಮತ ಸ್ಥಾನ ಸಿಗಬೇಕೆಂಬುದೇ ಎಲ್ಲರ ಆಶಯ. ಈ ಬಗೆಗೆ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.