ಗೂಗಲ್ ಕಂಪನಿಯಲ್ಲಿ ರಹಸ್ಯ ಕಾರ್ಮಿಕ ಸಂಘ ಅಸ್ಥಿತ್ವಕ್ಕೆ
ಕಾರ್ಮಿಕರ ವೇತನ, ಸೌಲಭ್ಯ, ಪರಿಹಾರ, ಲೈಂಗಿಕ ಕಿರುಕುಳ ಸೇರಿದಂತೆ ಮೂಲಭೂತ ಸವಲತ್ತುಗಳ ಬಗೆಗೆ ಯೂನಿಯನ್ ಹೋರಾಟ ನಡೆಸಲಿದೆ


ಓಕ್ ಲ್ಯಾಂಡ್ : ಗೂಗಲ್ ಕಂಪನಿಯಲ್ಲಿ ಕಾರ್ಮಿಕ ಸಂಘ ಅಸ್ತಿತ್ವಕ್ಕೆ ಬಂದಿದೆ. ಕಾರ್ಮಿಕರ ಹಕ್ಕುಗಳಿಗಾಗಿ ಈ ರಹಸ್ಯ ಸಂಘ ಕಾರ್ಯನಿರ್ವಹಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕಾರ್ಮಿಕ ಯೂನಿಯನ್ ನ ಹೆಸರು, ಅಲ್ಫಾಬೆಟಾ ವರ್ಕರ್ಸ್ ಯೂನಿಯನ್.
ಕಾರ್ಮಿಕರ ವೇತನ, ಸೌಲಭ್ಯ, ಪರಿಹಾರ, ಲೈಂಗಿಕ ಕಿರುಕುಳ ಸೇರಿದಂತೆ ಮೂಲಭೂತ ಸವಲತ್ತುಗಳ ಬಗೆಗೆ ಯೂನಿಯನ್ ಹೋರಾಟ ನಡೆಸಲಿದೆ. 225ಕ್ಕೂ ಹೆಚ್ಚಿನ ನೌಕರರು ಇದರಲ್ಲಿ ಸದಸ್ಯರಾಗಿದ್ದಾರೆ. ಅಮೆರಿಕಾ ಐಟಿ ಉದ್ಯಮದಲ್ಲಿ ಕಾರ್ಮಿಕ ಸಂಘ ಈವರೆಗೂ ಸ್ಥಾಪನೆಯಾಗಿಲ್ಲ. ಈ ವಲಯದಲ್ಲಿ ಕಾರ್ಮಿಕ ಸಂಘದ ರಚನೆಗೆ ಅವಕಾಶ ಇರಲಿಲ್ಲ ಎಂಬ ಮಾತಿದೆ.
ರಹಸ್ಯವಾಗಿ ಈ ಯೂನಿಯನ್ ಅಸ್ತಿತ್ವಕ್ಕೆ ಬಂದಿದ್ದು, ಡಿಸೆಂಬರ್ ನಲ್ಲಿ ಅದರ ನಾಯಕರ ಚುನಾವಣೆಯೂ ನಡೆದಿದೆಯಂತೆ.
ಗೂಗಲ್ ಸಂಸ್ಥೆಯಲ್ಲಿ ಕಾರ್ಮಿಕರ ಶೋಷಣೆ, ತಾರತಮ್ಯ, ವೇತನ, ಲೈಂಗಿಕ ಕಿರುಕುಳಗಳ ಮೇಲೆ ಧ್ವನಿ ಎತ್ತುವುದು ಅಲ್ಫಾಬೆಟಾ ವರ್ಕರ್ಸ್ ಯೂನಿಯನ್ ಉದ್ದೇಶವಾಗಿದೆಯೆಂದು ನ್ಯೂಸ್ ಏಜೆನ್ಸಿಯೊಂದು ಹೇಳಿಕೊಂಡಿದೆ.
ಗೂಗಲ್ ನೀತಿಗಳ ವಿರುದ್ಧ ಪ್ರದರ್ಶನ ನಡೆಸಿದ ಮತ್ತು ಯೂನಿಯನ್ ಮಾಡಲು ಪ್ರಯತ್ನಿಸಿದ್ದ ಕೆಲವು ಕಾರ್ಮಿಕರನ್ನು ಅಸಂವಿಧಾನಿಕ ವಿಧಾನದಲ್ಲಿ ಗೂಗಲ್ ವಿಚಾರಣೆ ನಡೆಸಿತ್ತು ಮತ್ತು ಅವರನ್ನು ನೌಕರಿಯಿಂದ ಕಿತ್ತು ಹಾಕಲಾಗಿತ್ತು ಎಂಬ ಆಪಾದನೆ ಇತ್ತೀಚೆಗೆ ಕಂಪನಿ ಮೇಲೆ ಬಂದಿತ್ತು.
ಈ ಆರೋಪಗಳಿಗೆ ಉತ್ತರಿಸಿದ್ದ ಗೂಗಲ್, ಕಂಪನಿ ಯಾವತ್ತಿಗೂ ನೌಕರರ ಹಿತಕ್ಕಾಗಿ ಕೆಲಸ ಮಾಡುತ್ತದೆ. ಅವರಿಗೆ ಪೂರಕ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ಯಾವಾಗಲೂ ನಡೆಯುತ್ತಿರುತ್ತದೆ. ಕಾರ್ಮಿಕರು ಕಾರ್ಮಿಕ ಕಾನೂನು ಅಡಿಯಲ್ಲಿ ಬರುತ್ತಾರೆ. ನಾವು ಮುಂದಿನ ದಿನಗಳಲ್ಲಿ ಕಾರ್ಮಿಕರೊಂದಿಗೆ ನೇರ ಸಂಪರ್ಕದಲ್ಲಿರುತ್ತೇವೆ ಎಂದು ಸ್ಪಷ್ಟೀಕರಣ ಕೊಟ್ಟಿತ್ತು.