Take a fresh look at your lifestyle.

ಸಂಕಷ್ಟದಲ್ಲಿ ಕಾರ್ಮಿಕರನ್ನು ಸರ್ಕಾರ ಕಾಯಬೇಕಿದೆ : ವೆಂಕಟಸುಬ್ಬಯ್ಯ

ಇಂದಿನ ದಿನಮಾನಗಳಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಕಾರ್ಮಿಕರ ಸಾಲವನ್ನು ಮನ್ನಾ ಮಾಡಿಸಬೇಕಿದೆ

0
post ad

ಕುಣಿಗಲ್ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿಗಳ ಕಪಿಮುಷ್ಠಿಯಿಂದ ಹೊರಬಂದು ಸಾರ್ವಜನಿಕ ಉದ್ಯಮಗಳ ಬಾಗಿಲು ಮುಚ್ಚಿಸುವ ಹುನ್ನಾರ ಕೈಬಿಟ್ಟು, ಅವುಗಳಿಗೆ ಪ್ರೋತ್ಸಾಹ ಹಾಗೂ ಸ್ಥಳೀಯ ಕಾರ್ಮಿಕರಿಗೆ ಸಂಪೂರ್ಣ ಉದ್ಯೋಗ ನೀಡಬೇಕೆಂದು. ಸಂವಿಧಾನದ ಆಶಯದಂತೆ ಕಾರ್ಮಿಕರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸಬೇಕು ಎಂದು ಕರ್ನಾಟಕ ಕಾರ್ಮಿಕ ಸೇನೆ ಅಧ್ಯಕ್ಷ ಕೆ.ಎಸ್. ವೆಂಕಟಸುಬ್ಬಯ್ಯ ಆಗ್ರಹಿಸಿದರು. ಕುಣಿಗಲ್ ತಾಲ್ಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ಕಾರ್ಮಿಕ ಸೇನೆಯ 25ನೇ ವರ್ಷದ ಬೆಳ್ಳಿ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ವಾರೆಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಮಾಯಕ ಕಾರ್ಮಿಕರಿಗೆ 5, 10 ಸಾವಿರ ಮುಂಗಡ ಹಣ ನೀಡಿ ಜೀತ ಪದ್ದತಿಯನ್ನು ಜೀವಂತವಾಗಿ ಉಳಿಸಿಕೊಂಡು ಬರುತ್ತಿದ್ದಾರೆ. ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ಶಿಕ್ಷೆಗೊಳಪಡಿಸುವ ಮೂಲಕ ಜೀತಮುಕ್ತಿಗೊಳಿಸಬೇಕು. ಕೆಲವು ಕ್ವಾರಿ ಪ್ರದೇಶಗಳಲ್ಲಿ ಜೀವನೋಪಾಯಕ್ಕಾಗಿ ತೆಂಗಿನ ಸಿಪ್ಪೆಗಳಿಂದ ಬಂಡೆಗಳನ್ನು ಕಾಯಿಸಿ ಕಲ್ಲು, ಜಲ್ಲಿ, ಬೋಡ್ರಸ್ ಹೊರತೆಗೆದು ಜೀವಿಸುತ್ತಿರುವ ಶ್ರಮಿಕರು ಸರ್ಕಾರಿ ಜಮೀನುಗಳಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದು ಅವರ ಅಕ್ರಮ ಮನೆಗಳನ್ನು ಸಕ್ರಮಗೊಳಿಸಬೇಕು ಎಂದರು.
ಕೋವಿಡ್ ಮಹಾಮಾರಿಯಿಂದ ಶ್ರೀಸಾಮಾನ್ಯರು ಕೆಲಸವಿಲ್ಲದೆ ಜೀವನ ನಿರ್ವಹಣೆ ಮಾಡಲು ಪರಿತಪಿಸುತ್ತಿರುವ ಸನ್ನಿವೇಶದಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳಿಂದ ಹಾಗೂ ಮೈಕ್ರೋ ಫೈನಾನ್ಸ್ ಕಂಪೆನಿಗಳಿಂದ ಸಾಲ ಪಡೆದು ತೀರಿಸಲಾಗದೆ, ಮಾನಸಿಕ ಹಿಂಸೆಗೆ ಗುರಿಯಾಗಿ ಆತ್ಮಹತ್ಯೆಗೆ ಜಾರುತ್ತಿದ್ದಾರೆ. ಇಂದಿನ ದಿನಮಾನಗಳಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಅವರ ಸಾಲವನ್ನು ಮನ್ನಾ ಮಾಡಿಸಿ ಮೈಕ್ರೋ ಫೈನಾನ್ಸ್ ಕಂಪೆನಿಗಳನ್ನು ರದ್ದು ಮಾಡಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಕೊಡಿಸಬೇಕು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮಹಿಳೆ ಹಾಗೂ ಪುರುಷರಿಗೆ ನೂರು ಮಾನವ ದಿನಗಳ ಕಡ್ಡಾಯ ಕೆಲಸ ನೀಡಿ ಅವರ ಖಾತೆಗೆ ನೇರ ಹಣ ಜಮೆ ಮಾಡಬೇಕು ಎಂದರು. ಗ್ರಾಮ ಸಭೆಗಳಿಗೆ ಆ ವ್ಯಾಪ್ತಿಗೆ ಬರುವ ಕಾರ್ಮಿಕ ಸಂಘಟನೆಗಳನ್ನು ಆಹ್ವಾನಿಸಬೇಕು ಎಂದ ಅವರು, ತೈಲ ಮತ್ತು ಕಚ್ಛಾ ಸಾಮಗ್ರಿಗಳಾದ ಪೆಟ್ರೋಲ್, ಡೀಸೆಲ್, ಆಯಿಲ್, ಗ್ಯಾಸ್‌ನಂತಹ ಅಗತ್ಯ ವಸ್ತುಗಳ ಹಾಗೂ ವಿದ್ಯುತ್ ದರ ಹೆಚ್ಚಾಗುತ್ತಿದ್ದು, ಸರ್ಕಾರಗಳು ಇವುಗಳಿಗೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಇನ್ನು ಕಾರ್ಮಿಕ ಸೇನೆಯ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ ಕುರಿತಂತೆ ಕಾರ್ಮಿಕರಿಗೆ ಮಾಹಿತಿ ನೀಡಿ ಹಲವಾರು ಬೇಡಿಕೆಗಳನ್ನು ಶಿರಸ್ತೇದಾರ್ ಜಯಪ್ಪ ರವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ವಿನಯ್‌ಬಾಬು, ಬಿ.ಎಂ. ಹುಚ್ಚೇಗೌಡ, ಬಿ.ಡಿ. ಕುಮಾರ್, ಉಪಾಧ್ಯಕ್ಷ ಸತೀಶ್, ರಂಗನಾಥ್, ಕಾರ್ಯದರ್ಶಿಗಳಾದ ಪರಮಶಿವಯ್ಯ, ವಿಜಯ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಮೂಡಲಗಿರಯ್ಯ, ಜಿ.ಬಿ. ಶಿವರಾಜ್, ನಾಗರಾಜ್, ಖಜಾಂಚಿ ಶಿವರಾಮ ಭೋವಿ ಮತ್ತಿತರರು ಭಾಗವಹಿಸಿದ್ದರು