Take a fresh look at your lifestyle.

ಗುತ್ತಿಗೆ, ದಿನಗೂಲಿ ಕಾರ್ಮಿಕರಿಗೂ ಗ್ರಾಚ್ಯುಟಿ

ತಾತ್ಕಾಲಿಕ, ದಿನಗೂಲಿ, ಗುತ್ತಿಗೆ ಕಾರ್ಮಿಕರಿಗೂ ವಿಸ್ತರಣೆ, ಅವಧಿಯಲ್ಲೂ ಪರಿಷ್ಕರಣೆ

0
post ad

ನವದೆಹಲಿ : ನೌಕರರ ಗ್ರಾಚ್ಯುಟಿ ಅವಧಿಯ ಪರಿಷ್ಕರಣೆಯ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಗ್ರಾಚ್ಯುಟಿ ನಿಯಮದಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರದ ಚಿಂತನೆ ಅಂತಿಮ ಹಂತಕ್ಕೆ ತಲುಪಿದೆ.
ಈಗಿರುವ ನಿಯಮದ ಪ್ರಕಾರ ಒಬ್ಬ ಸಿಬ್ಬಂದಿ ಒಂದು ಕಂಪನಿಯಲ್ಲಿ ಕನಿಷ್ಠ ಐದು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದರೆ ಮಾತ್ರ ಗ್ರಾಚ್ಯುಟಿ ಅನ್ವಯವಾಗುತ್ತಿತ್ತು. ಇದೀಗ ಉದ್ಯೋಗಿಗಳು 5 ವರ್ಷ ಕೆಲಸದಲ್ಲಿ ಇರದಿದ್ದರೂ ಗ್ರಾಚ್ಯುಟಿ ಅನ್ವಯವಾಗುವ ನಿಯಮ ಶೀಘ್ರದಲ್ಲಿ ಅನುಷ್ಟಾನಕ್ಕೆ ಬರಲಿದೆ.
ಕೆಲ ಸರ್ಕಾರಿ ಮೂಲಗಳ ಪ್ರಕಾರ ಈ ಅವಧಿಯು ಎರಡು ಅಥವಾ ಮೂರು ವರ್ಷಗಳಿಗೆ ನಿಗಧಿ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಗುತ್ತಿಗೆ ನೌಕರರು, ಗಿಗ್ ಕಾರ್ಮಿಕರು, ತಾತ್ಕಾಲಿಕ ನೌಕರರು ಮತ್ತು ಖಾಯಂ ನೌಕರರನ್ನು ಒಳಗೊಂಡಂತೆ ಕಾರ್ಮಿಕ ಸಚಿವಾಲಯವು ಗ್ರಾಚ್ಯುಟಿಯ ವ್ಯಾಪ್ತಿಯನ್ನು ವಿಸ್ತರಿಸುವ, ಕನಿಷ್ಠ ಐದು ವರ್ಷಗಳ ನಿರಂತರ ಕೆಲಸವನ್ನು ತಗ್ಗಿಸಿ ಗ್ರಾಚ್ಯುಟಿ ಯ ಅವಧಿಯನ್ನು ಪರಿಷ್ಕರಿಸುವ ಸಾಧ್ಯತೆ ಇದೆ.
ಪರಿಗಣಿಸಲಾಗುವ ವಿವಿಧ ಆಯ್ಕೆಗಳಲ್ಲಿ, ಪ್ರತಿ ತಾತ್ಕಾಲಿಕ ನೌಕರರಿಗೆ ಏಳು ದಿನಗಳ ವೇತನದ ದರದಲ್ಲಿ ಗ್ರಾಚ್ಯುಯಿಟಿ ಮತ್ತು ದಿನಗೂಲಿ ಅಥವಾ ಮಾಸಿಕ ವೇತನ ಪಡೆಯುವವರು ಮತ್ತು ಗುತ್ತಿಗೆ ಕಾರ್ಮಿಕರಿಗೆ ವರ್ಷದಲ್ಲಿ ಆರು ತಿಂಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ 15 ದಿನಗಳ ವೇತನವನ್ನು ಗ್ರಾಚ್ಯುಟಿಯಾಗಿ ಪರಿಗಣಿಸಿ ಸರ್ಕಾರ ಅಧಿಸೂಚನೆ ಯನ್ನು ಹೊರಡಿಸಬಹುದು.
ಇನ್ನೊಂದು ಆಯ್ಕೆಯೆಂದರೆ, ಎಲ್ಲಾ ವರ್ಗದ ಕಾರ್ಮಿಕರಿಗೆ ಗ್ರಾಚ್ಯುಟಿ ಅರ್ಹತೆ ಯನ್ನು ಪಡೆಯಲು ಕನಿಷ್ಠ ಕೆಲಸದ ಅಗತ್ಯವನ್ನು ಐದು ವರ್ಷದಿಂದ ಎರಡು-ಮೂರು ವರ್ಷಕ್ಕೆ ಇಳಿಸುವ ಪ್ರಸ್ತಾಪವಿದೆ ಎನ್ನಲಾಗುತ್ತಿದೆ.
ಪೇಮೆಂಟ್ ಆಫ್ ಗ್ರಾಚ್ಯುಟಿ ಕಾಯಿದೆ ಪ್ರಕಾರ, ಒಂದು ಸಂಸ್ಥೆಯಲ್ಲಿ ಉದ್ಯೋಗಿಯು ಕನಿಷ್ಠ ಐದು ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ ಉದ್ಯೋಗವನ್ನು ಕೊನೆಗೊಳಿಸಿದರೆ ಮಾತ್ರ ಗ್ರಾಚ್ಯುಟಿ ಪಡೆಯಲು ಅರ್ಹನಿರುತ್ತಾನೆ. ನೌಕರನ ವಾರ್ಷಿಕ 15 ದಿನಗಳ ಸಂಬಳವು ಗ್ರಾಚ್ಯುಟಿಗೆ ಸಮಾನವಾಗಿರುತ್ತದೆ.
ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಉದ್ಯೋಗಿಗಳು ಒಂದೇ ಕಂಪನಿಯಲ್ಲಿ ಬಹುಕಾಲ ಕಾರ್ಯ ನಿರ್ವಹಿಸುವುದಿಲ್ಲ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಈ ಬಗೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲಿ ಅಧಿಸೂಚನೆ ಹೊರಹಾಕಲಿದೆ.