Take a fresh look at your lifestyle.

ಟೊಯೋಟಾ ಆಡಳಿತಕ್ಕೆ ಅಂತಿಮ ಗಡುವು ನೀಡಿದ ಮಾಜಿ ಶಾಸಕ ಬಾಲಕೃಷ್ಣ

ಟಿಕೆಎಂ ಕಾರ್ಮಿಕರ ಬಿಕ್ಕಟ್ಟು ಶೀಘ್ರವೇ ಬಗೆಹರಿಯದಿದ್ದರೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಯವರಲ್ಲೂ ಹೋರಾಟದಲ್ಲಿ ಭಾಗವಹಿಸಲು ಮನವಿ ಮಾಡುವುದಾಗಿ ಬಾಲಕೃಷ್ಣ ಹೇಳಿದರು.

0
post ad

ಬಿಡದಿ : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕರ 75 ನೇ ದಿನದ ಗೌರವಯುತ ಹೋರಾಟದಲ್ಲಿ ಇಂದು ಮಾಗಡಿ ಮಾಜಿ ಶಾಸಕ ಹೆಚ್ ಸಿ. ಬಾಲಕೃಷ್ಣ ಭಾಗವಹಿಸಿ ಕಾರ್ಮಿಕರಿಗೆ ಬೆಂಬಲ ಸೂಚಿಸಿದರು.

ಈ ವೇಳೆ ಮಾತನಾಡಿದ ಅವರು ಕಳೆದ 75 ದಿನದಿಂದ ನಾವು ತಾಳ್ಮೆಯಿಂದ ಆಡಳಿತ ಮಂಡಳಿಯ ವೈಖರಿ ಮತ್ತು ಕಾರ್ಮಿಕರ ಬಿಕ್ಕಟ್ಟನ್ನು ಗಮನಿಸುತ್ತಾ ಇದ್ದೇವೆ, ಎರಡು ಮೂರು ಬಾರಿ ಸ್ಥಳೀಯ ಸಂಸದರ ಡಿ.ಕೆ ಸುರೇಶ್ ನೇತೃತ್ವದಲ್ಲಿ ಸಭೆ ಮಾಡಿ ಮನವಿ ಮಾಡಿದರೂ ಆಡಳಿತ ಮಂಡಳಿ ನಮಗೆ ಮನವಿಗಳಿಗೆ ಮನ್ನಣೆ ನೀಡಿಲ್ಲ. ಜವಾಬ್ದಾರಿಯುತ ಸರ್ಕಾರ ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ಸಂಘದ ಜೊತೆ ಸಭೆ ಮಾಡಲು ಆಡಳಿತ ವರ್ಗ ಹಿಂದೇಟು ಹಾಕುತ್ತಿರುವ ದುರದ್ದೇಶವಾದರೂ ಏನು ಎಂದು ಪ್ರಶ್ನಿಸಿದ ಅವರು ನಮ್ಮ ನೆಲ ,ಜಲ,ವಿದ್ಯುತ್ ನೀಡಿರುವುದು ನಮ್ಮ ರೈತರ ಮಕ್ಕಳಿಗೆ ಉದ್ಯೋಗ ದೊರಕಲಿ ಎಂದು, ಯಾರೋ ಇಲ್ಲಿ ಬಂದು ಮಜಾ ಮಾಡಲು ಅಲ್ಲ.
ಈ ಮುಂದಿನ ಬುಧವಾರ, 27 ಜನವರಿಯೊಳಗೆ ಸಮಸ್ಯೆಯನ್ನು ಬಗೆಹರಿಸದೇ ಇದ್ದರೆ ಸಂಸದರಾದ ಡಿ.ಕೆ.ಸುರೇಶ್ ಅವರ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರು, ಕಾರ್ಮಿಕರ ಕುಟುಂಬಗಳ ಸಮೇತ, ರೈತ ಪರ, ಕನ್ನಡ ಪರ, ದಲಿತ ಪರ ಹಾಗೂ ವಿವಿಧ ಸಂಘಟನೆಗಳು ಸೇರಿ ಮುಂದಿನ ಗುರುವಾರದಂದು ಬಿಡದಿಯ ಬಿ.ಜಿ.ಎಸ್ ವೃತ್ತದಿಂದ ಬೃಹತ್ ಪಾದಯಾತ್ರೆ ಮೂಲಕ ಟೊಯೋಟಾ ಕಂಪನಿ ಮುಂಭಾಗ ತೆರಳಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು, ಟಿಕೆಎಂ ಕಾರ್ಮಿಕರ ಬಿಕ್ಕಟ್ಟು ಶೀಘ್ರವೇ ಬಗೆಹರಿಯದಿದ್ದರೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಯವರಲ್ಲೂ ಹೋರಾಟದಲ್ಲಿ ಭಾಗವಹಿಸಲು ಮನವಿ ಮಾಡುವುದಾಗಿ ಬಾಲಕೃಷ್ಣ ಹೇಳಿದರು.

ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 66 ಕಾರ್ಮಿಕರ ಅಮಾನತ್ತು, 75 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.