ಮನೆಗೆಲಸದವರನ್ನು ಅಸಂಘಟಿತ ಕಾರ್ಮಿಕರ ಕಾಯ್ದೆಯಡಿ ಪರಿಗಣಿಸಲು ಕೋರಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಮನೆಗೆಲಸದವರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ತಾರತಮ್ಯ, ಶೋಷಣೆ ಮತ್ತು ಒತ್ತಾಯಪೂರ್ವಕವಾಗಿ ಮನೆ ಕೆಲಸ ಮಾಡಿಸುವುದರಿಂದ ರಕ್ಷಣೆ ನೀಡಬೇಕು. ಕಾಯ್ದೆ ಕುರಿತು ವ್ಯಾಪಕ ಪ್ರಚಾರ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.


ಬೆಂಗಳೂರು: ರಾಜ್ಯದಲ್ಲಿ ಮನೆ ಕೆಲಸ ಮಾಡುವವರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ-2008ರ ಅಡಿ ನೋಂದಾಯಿಸಿ, ಅಗತ್ಯ ಸೌಲಭ್ಯ ಕಲ್ಪಿಸಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮನೆ ಕೆಲಸಗಾರರ ಹಕ್ಕುಗಳ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೊಜಾರಿಯೋ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿತು.
2020ರ ಮಾರ್ಚ್ 23ರಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಕಟಿಸಿರುವ ವರದಿ ಪ್ರಕಾರ, ದೇಶದಲ್ಲಿ 39 ಲಕ್ಷ ಮನೆ ಕೆಲಸಗಾರರಿದ್ದಾರೆ. ರಾಜ್ಯದಲ್ಲಿಯೂ ಲಕ್ಷಾಂತರ ಮನೆಗೆಲಸಗಾರರಿದ್ದಾರೆ. ಅಂದಾಜು ಮಾಹಿತಿಯಂತೆ ಬೆಂಗಳೂರು ನಗರದಲ್ಲಿ 4 ಲಕ್ಷ ಮನೆ ಕೆಲಸದವರಿದ್ದು, ಇವರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯಡಿ ನೋಂದಣಿ ಮಾಡಿಲ್ಲ. ಇದರಿಂದಾಗಿ ಮನೆಗೆಲಸದವರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಜತೆಗೆ ಶೋಷಣೆ, ಲೈಂಗಿಕ ದೌರ್ಜನ್ಯ ಮತ್ತು ತಾರತಮ್ಯದಿಂದ ರಕ್ಷಣೆ ಇಲ್ಲದಂತಾಗಿದ್ದಾರೆ.
ಆದ್ದರಿಂದ ರಾಜ್ಯದಲ್ಲಿರುವ ಮನೆಗೆಲಸದವರನ್ನು ಗುರುತಿಸಿ ಅವರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯಡಿ ಕಡ್ಡಾಯವಾಗಿ ನೋಂದಾಸಿಕೊಳ್ಳಬೇಕು. ಕಾಯ್ದೆ ನಿಯಮಗಳ ಪ್ರಕಾರ ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಮನೆಗೆಲಸದವರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ತಾರತಮ್ಯ, ಶೋಷಣೆ ಮತ್ತು ಒತ್ತಾಯಪೂರ್ವಕವಾಗಿ ಮನೆ ಕೆಲಸ ಮಾಡಿಸುವುದರಿಂದ ರಕ್ಷಣೆ ನೀಡಬೇಕು. ಕಾಯ್ದೆ ಕುರಿತು ವ್ಯಾಪಕ ಪ್ರಚಾರ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.