Take a fresh look at your lifestyle.

ಟಿಕೆಎಂ ಲಾಕೌಟ್ ವಾಪಸ್ ಪಡೆಯದಿದ್ದರೆ ವಿಧಾನಸೌಧ ಚಲೋ : ಟಿಕೆಎಂಇಯು ಅಧ್ಯಕ್ಷ

ಸರ್ಕಾರದ ಸಹಕಾರದಿಂದ ಕಾರ್ಖಾನೆ ಸ್ಥಾಪನೆಗೊಂಡಿದ್ದು, ಸಂಸ್ಥೆ ಸರ್ಕಾರದ ಆದೇಶವನ್ನೇ ಉಲ್ಲಂಘಿಸಿ ಸರ್ವಾಧಿಕಾರತ್ವವನ್ನು ಪ್ರದರ್ಶಿಸುತ್ತಿದೆ ಎಂಬ ಆರೋಪ ವ್ಯಕ್ತವಾಗುತ್ತಿವೆ

0
post ad

ಬೆಂಗಳೂರು : ಬಿಡದಿಯ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಕಂಪೆನಿ ಎರಡನೇ ಬಾರಿಗೆ ಘೋಷಿಸಿರುವ ತಾತ್ಕಾಲಿಕ ಲಾಕ್‌ಔಟ್‌ಅನ್ನು ಹಿಂಪಡೆದು, ಅಮಾನತುಗೊಂಡಿರುವ ಕಾರ್ಮಿಕರನ್ನು ತಕ್ಷಣವೇ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ  ಒತ್ತಾಯಿಸಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿಂದು ಜೆಸಿಟಿಯು ಕಾರ್ಮಿಕ ಸಂಘಟನೆಗಳ ಮುಖಂಡರು ಟಿಕೆಎಂಇಯು ಅಧ್ಯಕ್ಷ ಪ್ರಸನ್ನ ಕುಮಾರ್‌ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದರು.


ಈ ವೇಳೆ ಮಾತನಾಡಿದ ಪ್ರಸನ್ನ ಕುಮಾರ್ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಆಗುತ್ತಿರುವ ಹಿಂಸೆ, ಅನ್ಯಾಯವನ್ನು ಪ್ರಶ್ನಿಸಿದಕ್ಕೆ 40 ಕಾರ್ಮಿಕ ಮುಖಂಡರನ್ನು ಅಮಾನತುಗೊಳಿಸಲಾಗಿದೆ.
ಕಾರ್ಖಾನೆಯಲ್ಲಿ ಕೆಲಸದ ಅವಧಿಗೆ ತೀರಾ ಕಟ್ಟುನಿಟ್ಟಿನ
ನಿಯಮಗಳನ್ನು ಅನುಸರಿಸಲಾಗುತ್ತಿದೆ.
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಪ್ರಶ್ನಿಸಿದ್ದಕ್ಕೆ ಅಮಾನತುಗೊಳಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೆವು. ಆ ವೇಳೆ ಏಕಾಏಕಿ ನ.9ರಂದು ಕಾರ್ಖಾನೆಯಲ್ಲಿ ಲಾಕ್‌ ಔಟ್‌ ಘೋಷಿಸಿದರು. ಅನಂತರ ಸರಕಾರಕ್ಕೆ ಮನವಿ ಮಾಡಿದ ಸಂದರ್ಭದಲ್ಲಿ, ಲಾಕ್‌ ಔಟ್‌ ಹಿಂಪಡೆಯುವುದಾಗಿ ಹೇಳಿದ್ದರು.
ಆದರೆ, ಕಾರ್ಖಾನೆಯ ಆಡಳಿತ ಮಂಡಳಿಯು ಕಾರ್ಮಿಕರನ್ನು ಒಳಗೆ ಬಿಟ್ಟುಕೊಳ್ಳದೇ ಎರಡನೇ ಬಾರಿಗೆ ಲಾಕ್‌ ಔಟ್‌ ಅನ್ನು ಘೋಷಿಸಿದೆ ಎಂದು ಆಪಾದಿಸಿದರು.
ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕಾರ್ಖಾನೆಯನ್ನು ಎರಡನೇ ಬಾರಿ ಲಾಕ್‌ ಔಟ್‌ ಘೋಷಿಸಿರುವುದು ಅಕ್ರಮವಾಗಿದೆ. ಹೀಗಾಗಿ, ಕಾರ್ಖಾನೆಯ ಆಡಳಿತ ಮಂಡಳಿಯು ಕೂಡಲೇ ಲಾಕ್‌ ಔಟ್‌ಅನ್ನು ಹಿಂಪಡೆದು, ಹೊರಗಿಟ್ಟಿರುವ ಎಲ್ಲ ಕಾರ್ಮಿಕರನ್ನು ವಾಪಸ್‌ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ವಾರ ಬಿಡದಿಯಿಂದ ವಿಧಾನಸೌಧ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಟೊಯೋಟಾ ಕಾರ್ಖಾನೆಯು ಕಾರ್ಮಿಕರನ್ನು
ಯಂತ್ರಗಳಂತೆ ಬಳಸಿಕೊಳ್ಳುತ್ತಿದೆ. ಮನುಷ್ಯತ್ವವಿಲ್ಲದೇ
ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಪ್ರಶ್ನಿಸುವವರನ್ನು ಏಕಾಏಕಿ ಹೊರಗೆ ಹಾಕುವ ಮೂಲಕ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಆರೋಪಿಸಿದರು.
ಸರ್ಕಾರದ ಸಹಕಾರದಿಂದ ಕಾರ್ಖಾನೆ ಸ್ಥಾಪನೆಗೊಂಡಿದ್ದು, ಸಂಸ್ಥೆ ಈಗ ಸರ್ಕಾರದ ಆದೇಶವನ್ನೇ ಉಲ್ಲಂಘಿಸಿ ಸರ್ವಾಧಿಕಾರತ್ವವನ್ನು ಪ್ರದರ್ಶಿಸುತ್ತಿದೆ. ಸರ್ಕಾರ ಕೇವಲ ಆದೇಶವನ್ನು ನೀಡಿ, ಮೌನಕ್ಕೆ ಶರಣಾಗಿದ್ದು, ಪರೋಕ್ಷವಾಗಿ ಟಿಕೆಎಂ ಆಡಳಿತ ಮಂಡಳಿಯ ಪರವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.