Take a fresh look at your lifestyle.

ಟಿಕೆಎಂ ಬಿಕ್ಕಟ್ಟನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳಲು ಕೈಗಾರಿಕಾ ಸಚಿವರ ಸಲಹೆ

ತನಿಖೆಯ ಉದ್ದೇಶದಿಂದ ಅಮಾನತು ಮತ್ತು ವಜಾ ಮಾಡಿರುವ ಕಾರ್ಮಿಕರನ್ನು ಕೆಲಸಕ್ಕೆ ಹಿಂತೆಗೆದುಕೊಳ್ಳಬೇಕು, ನಿಗದಿತ ಕಾಲಮಿತಿಯಲ್ಲಿ ತನಿಖೆ ಮುಗಿಸುವ ಭರವಸೆಯನ್ನು ನೀಡಬೇಕು ಎಂದು ಕಾರ್ಮಿಕ ಸಂಘದ ಪದಾಧಿಕಾರಿಗಳು ಪಟ್ಟು

0
post ad

ಬೆಂಗಳೂರು:  ಟೊಯೊಟಾ ಕಾರ್ಮಿಕರ ಮತ್ತು ಆಡಳಿತ ಮಂಡಳಿಯ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಸಲಹೆ ನೀಡಿದ್ದಾರೆ.
ಖನಿಜ ಭವನದಲ್ಲಿ  ಕರೆಯಲಾಗಿದ್ದ ಸಭೆಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟರ್  ಕಂಪನಿಯ ಅಧಿಕಾರಿಗಳು, ಕಾರ್ಮಿಕ ಮುಖಂಡರುಗಳು ಭಾಗವಹಿಸಿದ್ದರು. ಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಜೊತೆಗೆ ಕಾರ್ಮಿಕ ಸಚಿವ ಶಿವರಾಮ‌ ಹೆಬ್ಬಾರ್‌, ಸಂಸದ ಡಿ.ಕೆ. ಸುರೇಶ್‌, ಮಾಗಡಿ ಶಾಸಕ ಎ. ಮಂಜು, ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.
ತನಿಖೆಯ ಉದ್ದೇಶದಿಂದ ಅಮಾನತು ಮತ್ತು ವಜಾ ಮಾಡಿರುವ ಕಾರ್ಮಿಕರನ್ನು ಕೆಲಸಕ್ಕೆ ಹಿಂತೆಗೆದುಕೊಳ್ಳಬೇಕು, ನಿಗದಿತ ಕಾಲಮಿತಿಯಲ್ಲಿ ತನಿಖೆ ಮುಗಿಸುವ ಭರವಸೆಯನ್ನು ನೀಡಬೇಕು ಎಂದು ಕಾರ್ಮಿಕ ಸಂಘದ ಪದಾಧಿಕಾರಿಗಳು  ಪಟ್ಟು ಹಿಡಿದರು.  ಟೊಯೋಟಾ ಕಂಪೆನಿಯ ಪರ ಆಗಮಿಸಿದ್ದ ಅಧಿಕಾರಿಗಳು ಆಡಳಿತ ಮಂಡಳಿಯ ಸಮಸ್ಯೆಗಳನ್ನು ಸಭೆಗೆ ತಿಳಿಸಿದರು.


ಈ ವೇಳೆ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಮಾತನಾಡಿ, ಕಾರ್ಮಿಕರು ಹಾಗೂ ಕಂಪನಿಯ ಆಡಳಿತ ಮಂಡಳಿಯ ನಡುವೆ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಸೂಕ್ತ. ಕರ್ನಾಟಕ ಕೈಗಾರಿಕಾ ಸ್ನೇಹಿ ರಾಜ್ಯವಾಗಿದ್ದು, ರಾಜ್ಯದಲ್ಲಿ ಕೈಗಾರಿಕೆಗಳಿಗೆ ಇರುವ ವಾತಾವರಣದ ಬಗ್ಗೆ ಸಕಾರಾತ್ಮಕ ಸಂದೇಶ ನೀಡುವುದು ಹಾಗೂ ಅದರ ಜೊತೆಗೆ ಕಾರ್ಮಿಕರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಶೀಘ್ರವೇ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಯಾವುದೇ ಸಮಸ್ಯೆಯನ್ನು ಹೆಚ್ಚು ದಿನಗಳ ಕಾಲ ಮುಂದುವರೆಸಿದಲ್ಲಿ ಸಮಸ್ಯೆಗಳು ಬಗೆಹರಿಯುವುದು ಸುಲಭವಾಗಿರುವುದಿಲ್ಲ. ಪ್ರಾಥಮಿಕ ಹಂತದಲ್ಲಿಯೇ ಇದನ್ನು ಬಗೆಹರಿಸಿಕೊಂಡಲ್ಲಿ ಈ ಮಟ್ಟದಲ್ಲಿ ದೊಡ್ಡದಾಗುತ್ತಿರಲಿಲ್ಲ. ಕಾಲಮಿತಿಯೊಳಗೆ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಕಂಪನಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 66 ಕಾರ್ಮಿಕರ ಅಮಾನತ್ತು, 8 ಕಾರ್ಮಿಕ ವಜಾ,  92 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿದ್ದು, ಈ ವಿಷಯ ಸದನದಲ್ಲೂ ಪ್ರತಿಧ್ವನಿಸಿತ್ತು.