Take a fresh look at your lifestyle.

ಟೊಯೋಟಾ ಆಡಳಿತ ವರ್ಗದ ಪ್ರತಿಕೃತಿ ದಹನ, ಬಿಡದಿ ಕೈಗಾರಿಕಾ ಪ್ರದೇಶ ಬಂದ್ ಗೆ ಜೆಸಿಟಿಯು ಚಿಂತನೆ

ಬಿಡದಿಯಲ್ಲಿರುವ ಅನೇಕ ಕಂಪನಿಗಳ ಕಾರ್ಮಿಕ ಸಂಘಗಳು, ಜೆಸಿಟಿಯು ಇಂದಿನ ಹೋರಾಟಕ್ಕೆ ಬೆಂಬಲ ನೀಡಿ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳನ್ನು ಬಂದ್ ಮಾಡುವ ಚಿಂತನೆಯನ್ನು ಮಾಡಿದೆ. ಹೋರಾಟದಲ್ಲಿ ಕಾರ್ಮಿಕರ ಕುಟುಂಬ ಸದಸ್ಯರು ಭಾಗವಹಿಸಿದ್ದರು, ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಟಿಕೆಎಂಇಯು ಎಚ್ಚರಿಸಿದೆ

0
post ad

ಬಿಡದಿ : ಟಿಕೆಎಂ ಆಡಳಿತ ಮಂಡಳಿಯ ಪ್ರತಿಕೃತಿಯನ್ನು ಕಾರ್ಮಿಕರು ದಹನ ಮಾಡಿದರು. ಕಾರ್ಮಿಕರ ಜೊತೆ ಅವರ ಕುಟುಂಬದ ಸದಸ್ಯರು ಇಂದಿನ ಹೋರಾಟದಲ್ಲಿ ಭಾಗವಹಿಸಿದ್ದರು.


ಟಿಕೆಎಂ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ವಿಧಾನ, ಸನ್ನಡತೆ ಪತ್ರಕ್ಕೆ ಸಹಿ ಷರತ್ತು ವಿಧಿಸಿ ಲಾಕ್ ಔಟ್ ತೆರವು ಗೊಳಿಸಿರುವುದು ಸೇರಿದಂತೆ ಕಾರ್ಮಿಕರ ಕೂಗಿನ ಕಡೆ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಟೊಯೋಟಾ ಕಾರ್ಮಿಕರು ನಡೆಸುತ್ತಿರುವ ಹೋರಾಟದಲ್ಲಿ ಬಿಡದಿ ಸುತ್ತಮುತ್ತಲಿನ ಕಂಪನಿಗಳ ಕಾರ್ಮಿಕರು ಮತ್ತು ಜೆಸಿಟಿಯು ಬೆಂಬಲ ಸೂಚಿಸಿತ್ತು.

ಟಿಕೆಎಪಿ ಕಂಪನಿಯ ಕಾರ್ಮಿಕ ಸಂಘದ ಅಧ್ಯಕ್ಷರಾದ ಧನಂಜಯರವರು, ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳು.
ಟಿಜಿಕೆಎಲ್ ಕಂಪನಿಯ ಕಾರ್ಮಿಕ ಸಂಘದ ಅಧ್ಯಕ್ಷರಾದ ರವಿಕುಮಾರ್ ರವರು, ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳು.
ಟಿಒಕೆಎಐ ರಬ್ಬರ್ ಕಂಪನಿಯ ಕಾರ್ಮಿಕ ಸಂಘದ ಉಪಾಧ್ಯಕ್ಷರಾದ ಕೃಷ್ಣಕಾಂತ್ ರವರು, ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳು.
ಬ್ರಿಟಾನಿಯಾ ಕಂಪನಿಯ ಕಾರ್ಮಿಕ ಸಂಘದ ಅಧ್ಯಕ್ಷರಾದ ಅಭಿಶೇಕ್ ರವರು ಮತ್ತು ಪದಾಧಿಕಾರಿಗಳು.
ಎಸ್ ಟಿಟಿಐ ಕಂಪನಿಯ ಕಾರ್ಮಿಕ ಸಂಘದ ಅಧ್ಯಕ್ಷರಾದ ಮಂಜುನಾಥರವರು ಮತ್ತು ಪದಾಧಿಕಾರಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಾರ್ಮಿಕ ಸಂಘದ ಅಧ್ಯಕ್ಷರಾದ ಪ್ರಸನ್ನಕುಮಾರ್ ಚಕ್ಕರೆ ಮಾತನಾಡಿ ಆಡಳಿತ ಮಂಡಳಿ ಕಾರ್ಮಿಕರ ವಿರುದ್ಧ ನಿರಂತರ ಶೋಷಣೆ ಮಾಡುತ್ತಿದ್ದು, ದೇಶಗಳನ್ನು ಗಾಳಿಗೆ ತೂರಿ ಕಾರ್ಮಿಕರನ್ನು ಗುಲಾಮರಂತೆ ನೋಡಲು ಮುಂದಾಗಿದೆ ಇದಕ್ಕೆ ಕಾರ್ಮಿಕ ಸಂಘ ಅವಕಾಶ ಕಲ್ಪಿಸುವುದಿಲ್ಲ ಎಂದರು. ಕೇಂದ್ರ ಸರ್ಕಾರ ಜಪಾನ್ ನಲ್ಲಿ ಭಾರತೀಯರಿಗೆ ಕೆಲಸ ನೀಡುವ ಯೋಜನೆ ಕೈಗೊಂಡಿದೆ, ಅಲ್ಲಿ ನಮ್ಮವರನ್ನು ಯಂತ್ರಗಳಂತೆ ಬಳಸಿಕೊಂಡು, ರಕ್ತ ಹೀರಿದರೆ ಭಾರತೀಯರು ಸುಮ್ಮನಿರುವುದಿಲ್ಲ. ನಮ್ಮ ಹೋರಾಟ ಮುಂದಿನ ಕಾರ್ಮಿಕ ಹೋರಾಟಗಳಿಗೆ ಮಾದರಿಯಾಗಿ ನಿಲ್ಲುತ್ತದೆ ಎಂದರು.
ಕಾನೂನು ಸಲಹೆಗಾರ ಮುರಳೀಧರ್ ಮಾತನಾಡುತ್ತ, ಆಡಳಿತ ವರ್ಗ ದುರಂಕಾರದಿಂದ ಏಕಪಕ್ಷೀಯವಾಗಿ ಪ್ರೊಡೆಕ್ಷನ್ ಟಾರ್ಗೆಟ್ ನೀಡಿದ್ದನ್ನು ಕಾರ್ಮಿಕರು ಪ್ರಶ್ನಿಸಿದ್ದು ತಪ್ಪಾ ಎಂದು ಪ್ರಶ್ನಿಸಿದರು. ಸರ್ಕಾರದ ಮಾತಿಗೂ ಬೆಲೆ ಕೊಡದೇ ಅಧಿಕ ಪ್ರಸಂಗಿಗಳಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು. ಕಾರ್ಮಿಕ ಸಂಘದ ಜೊತೆ ಸಮಾಲೋಚನೆ ಮಾಡದೆ ಅವರಿಗೆ ಇಷ್ಟ ಬಂದ ರೀತಿಯಲ್ಲಿ ವರ್ತಿಸಿವುದು ತಪ್ಪೆಂದ ಅವರು ಅಂಡರ್ ಟೇಕಿಂಗ್ ನೀಡುವುದು ಗುಲಾಮಗಿರಿ ಮಾಡಿದಂತೆ, ಕಾರ್ಮಿಕ ಸಂಘ ಅದನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು. ಯಾವುದೇ ಕಾರಣಕ್ಕೂ ಅಂಡರ್ ಟೇಕಿಂಗ್ ನೀಡಬಾರದೆಂದ ಅವರು ಕಂಪನಿಗೆ ಈಗ ಉತ್ಪಾದನೆ ಅವಶ್ಯಕತೆ ಇದೆ ಅದಕ್ಕೆ ಈ ನಾಟಕ ವಾಡುತ್ತಿದೆ ಎಂದು ಆಕ್ತೋಶ ವ್ಯಕ್ತಪಡಿಸಿದರು.
ಜೆಸಿಟಿಯು ವತಿಯಿಂದ ಹಲವು ಕಾರ್ಮಿಕ ಒಕ್ಕೂಟಗಳ ಮುಖಂಡರು ಕಾರ್ಮಿಕ ಹೋರಾಟಗಳಿಗೆ ಬೆಂಬಲ ಘೋಷಿಸಿದರು.
ಎಐಯುಟಿಸಿ ರಾಜ್ಯಾಧ್ಯಕ್ಷ ಸೋಮಶೇಖರ್ ಮಾತನಾಡಿ, ಇಷ್ಟು ದೀರ್ಘದ ಹೋರಾಟ ಇತರೇ ಕಾರ್ಮಿಕರಿಗೆ ಆದರ್ಶವಾಗಿದೆ. ಕಾರ್ಮಿಕರ ರಕ್ತ ಹೀರುವ ಮಾಲೀಕರಿಗೆ ಲಾಭವೇ ಮುಖ್ಯ, ಅವರೆಲ್ಲಾ ಸೇರಿ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ. ಕಂಪನಿಗಳು ಕಾರ್ಮಿಕರನ್ನು ಯಂತ್ರಗಳಂತೆ ದುಡಿಸಿಕೊಳ್ಳುತ್ತಿದ್ದಾರೆ, ಮಾನವೀಯ ಮೌಲ್ಯಗಳನ್ನು ಸಾಯಿಸುತ್ತಿದ್ದಾರೆ ಖಾಯಂ ನೌಕರರನ್ನು ಮನೆಗೆ ಕಳುಹಿಸಿ, ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ದುರಂತವೇ ಸರಿ ಎಂದರು.
ಮೈಕಲ್ ಫರ್ನಾಂಡೀಸ್ ಮಾತನಾಡಿ, ದೇಶದಲ್ಲಿರುವುದು ಎರಡೇ ಜಾತಿ ಅವು ಕಾರ್ಮಿಕ ಜಾತಿ ಮತ್ತು ಮಾಲೀಕ ಜಾತಿ. ಕಾರ್ಮಿಕರು, ರೈತರು ಸಂಪೂರ್ಣವಾಗಿ ಶೋಷಣೆಗೆ ಒಳಗಾಗಿದ್ದಾರೆ ಎಂದರು. ಜಪಾನ್ ಮತ್ತು ಭಾರತಕ್ಕೆ ಕೆಲಸದ ವಿಧಾನದಲ್ಲಿ ವ್ಯತ್ಯಾಸವಿದೆ, ಇಲ್ಲಿ ಮನುಷ್ಯರನ್ನು ಯಂತ್ರಗಳಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂದರು. ಅಲ್ಲಿನ ಕೆಲಸಕ್ಕೆ ಸರಿಯಾಗಿ ಇಲ್ಲಿ ದುಡಿಸಿಕೊಳ್ಳುವುದು ಅವೈಜ್ಞಾನಿಕ ಎಂದರು.


ಇನ್ನು, ವಿಜಯಭಾಸ್ಕರ್ ಕಾರ್ಮಿಕರನ್ನುದ್ದೇಶಿಸಿ ಮಾತನಾಡುತ್ತಾ, ಬಿಡದಿ, ಹಾರೋಹಳ್ಳಿ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ನಿರ್ವಹಿಸುತ್ತಿರುವ ಹೋರಾಟಕ್ಕೆ ಜಯ ಸಿಗಲಿದೆ. ಸರ್ಕಾರ ಕಾರ್ಮಿಕರ ಪರ ನಿಲ್ಲದಿದ್ದರೆ ತಲೆ ತಗ್ಗಿಸಬೇಕಾಗುತ್ತದೆ, ಟೊಯೋಟಾ ಕಾರ್ಮಿಕರ ಹೋರಾಟಕ್ಕೆ ಜಯ ಸಿಗಬೇಕಿದೆ ಇಲ್ಲದಿದ್ದರೆ ಇದು ದೇಶದ ಎಲ್ಲ ಕಡೆ ವ್ಯಾಪಿಸಲಿದೆ. ಟಿಪಿಎಸ್ ಎನ್ನುವುದೇ ಗುಲಾಮಗಿರಿಯ ಪದ್ದತಿ ಎಂದರು.
ಕಾಳಪ್ಪ ಮಾತನಾಡಿ ಈ ಹೋರಾಟವೊಂದು ಐತಿಹಾಸಿಕ ಎಂದು ಬಣ್ಣಿಸಿದರು. ಜನ ವಿರೋಧಿ ಸರ್ಕಾರಗಳು ಅನೇಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಬಹು ಕಂಪನಿಗಳ ಪರವಾಗಿವೆ ಇದು ದೊಡ್ಡ ದುರಂತ. ಈ ಹೋರಾಟವನ್ನು ಪ್ರಬಲ ಶಕ್ತಿಯಾಗಿ ಮುಂದುವರೆಸಬೇಕಿದೆ ಎಂದರು.

 ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 66 ಕಾರ್ಮಿಕರ ಅಮಾನತ್ತು, 74 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.

ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.