Take a fresh look at your lifestyle.

ಕೆಲಸದ ವೇಳೆ ಅಂಗಾಂಗ ವಿಫಲ, ನೆರವಿಗೆ ಬಾರದ ಜಿಂದಾಲ್

ಎರಡು ವರ್ಷವಾದರೂ ಸಂತ್ರಸ್ಥ ಉದ್ಯೋಗಿಗೆ ಬಿಡಿಗಾಸು ನೀಡದ ಆಡಳಿತ ಮಂಡಳಿ, ಚಿಕಿತ್ಸೆಗಾಗಿ ಇದ್ದ ಭೂಮಿಯನ್ನು ಮಾರಿಕೊಂಡು ಸಂಕಷ್ಟದಲ್ಲಿರುವ ಕಾರ್ಮಿಕ

0
post ad

ಬಳ್ಳಾರಿ : ಜಿಲ್ಲೆಯ ಹೆಸಾರಂತ ಉಕ್ಕು ಕಾರ್ಖಾನೆ ಜಿಂದಾಲ್ ಸ್ಟಿಲ್ಸ್ ಸಾವಿರಾರು ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ಮೂಲಕ ಗಣಿ ಜಿಲ್ಲೆಗೆ ಕಳಸಪ್ರಾಯವಾಗಿದೆ. ಆದ್ರೆ ಕಾರ್ಮಿಕರ ಹಿತಕಾಯಬೇಕಾದ ಆಡಳಿತ ಮಂಡಳಿ ತನ್ನ ಕಾರ್ಮಿಕರನ್ನ ಬಳಸಿಕೊಂಡು ಬಿಸಾಡುವ ಮೂಲಕ ಮತ್ತೊಮ್ಮೆ ಜಾಲತಾಣಗಳಲ್ಲಿ ಸುದ್ದಿಯಲ್ಲಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಹೌದು..ಕಳೆದ ತಿಂಗಳಷ್ಟೆ ಕರೋನಾ ನೆಪ ಹೇಳಿಕೊಂಡು ಕಾರ್ಖಾನೆ ನಷ್ಟದಲ್ಲಿದೆ ಎಂಬ ಸಬೂಬು ಹೇಳಿ ಏಕಾಏಕಿ ನಾಲ್ಕುನೂರಕ್ಕೂ ಹೆಚ್ಚು ಕಾರ್ಮಿಕರನ್ನ ಕೆಲಸದಿಂದ ಬಿಡುಗಡೆಗೊಳಿಸಿತ್ತು. ಈಗಾ ಕಳೆದು ಹತ್ತು ವರ್ಷದಿಂದ ಜಿಂದಾಲ್ ಸಂಸ್ಥೆಯ ಗುತ್ತಿಗೆ ಕಂಪನಿಯ ನೌಕರ ಶ್ರೀಧರ್ ಒಡೆಯರ್ ಎಂಬ ನೌಕರನಿಗೆ ಅನ್ಯಾಯ ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದೆ . ಕಂಪ್ಲಿ ಪಟ್ಟಣದ ದೇವಲಾಪುರ ಗ್ರಾಮದ ಯುವಕ ಜಿಂದಾಲ್ ಕಂಪನಿಯಲ್ಲಿ ಸತತ ಹತ್ತು ವರ್ಷಗಳಿಂದ ಜಿಂದಾಲ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.

ಒಂದು ದಿನ ಶ್ರೀಧರ ಕೆಲಸ ಮಾಡುತ್ತಿದ್ದ ಕೋಕ್ ಪ್ಲಾಂಟ್ ನಲ್ಲಿ ರಾಸಾಯನಿಕ ಹೊಗೆ ಸೇವಿಸಿದ ಪರಿಣಾಮ ಆರೋಗ್ಯದಲ್ಲಿ ಏರುಪೇರು ಕಂಡುಬಂತು ತಕ್ಷಣ ಜಿಂದಾಲ್ ಒಡೆತನದ ಕಾರ್ಮಿಕರಿಗಾಗಿಯೆ ಇರುವ ಸಂಜೀವಿನ ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ತೆರಳಿದಾಗ ಅಲ್ಲಿಯ ಟ್ರೈನಿ ನರ್ಸ್ ಗಳು ನೀಡಿದ ಚಿಕಿತ್ಸೆಯಿಂದ ಮತ್ತೊಂದು ಪ್ರಮಾದವೇ ನಡೆದು ಹೊಯ್ತು. ಈಗ ತಾನೆ ವೈದ್ಯ ವಿಧ್ಯಾರ್ಥಿಗಳಾಗಿ ಕಲಿಕೆ ಹಂತದಲ್ಲಿದ್ದ ನರ್ಸ್ ಗಳು‌ ನೀಡಿದ ಔಷಧಗಳಿಂದ ಮತ್ತೊಷ್ಟು ಗಂಭಿರ ಸ್ಥಿತಿಗೆ ಶ್ರೀಧರನ ಅರೊಗ್ಯ ಹದಗೆಟ್ಟಿತ್ತು. ಇದರಿಂದ ಹೆದರಿ ಹೌಹಾರಿ ಹೋದ ಅಲ್ಲಿಯ ವೈದ್ಯರು ಇಲ್ಲಿಯ ಚಿಕಿತ್ಸೆಗೆ ದೇಹ ಸ್ಪಂದಿಸುತ್ತಿಲ್ಲ ಎಂದು ಹೇಳಿ ಕೈ ಚೆಲ್ಲಿದರು ಕೂಡಲೇ ಶ್ರೀಧರ ಕುಟುಂಬದವರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಹೊರರೋಗಿಗಳ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಶ್ರೀಧರನ ಕೈಕಾಲು ಊದಿಕೊಂಡು ರಕ್ತಸ್ರಾವ ಆಗತೊಡಗಿತು. ಆಗಾ ಓ.ಪಿ.ಡಿ ವೈದ್ಯರು ಇಲ್ಲಿ ಚಿಕಿತ್ಸೆಗೆ ಸಂಬಂಧಿಸಿದ ಅಗತ್ಯ ಪರಿಕರಗಳು ಲಭ್ಯವಿಲ್ಲ ಎಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಹೆಸರುನ್ನ ಹೇಳಿ ನುಣಚಿಕೊಂಡರು. ಕೈಯಲ್ಲಿ ಬಿಡಿಗಾಸು ಇಲ್ಲದ ಶ್ರೀಧರ ಕುಟುಂಬ ದಾರಿ ಕಾಣದೆ ತಮ್ಮ ಬಳಿ ಇದ್ದ ಮೂರು ಎಕರೆ ಹೊಲವನ್ನ ಅಡವಿಟ್ಟು ಚಿಕಿತ್ಸೆ ಕೊಡಿಸಲು ಮುಂದಾದ್ರು ಆದ್ರೆ ವಿಧಿ‌ ಎಷ್ಟು ಘೋರ ಎಂದ್ರೆ ಮಹಾವೀರ ಆಸ್ಪತ್ರೆಯ ವೈಧ್ಯರು ಶ್ರೀಧರನ ಆರೋಗ್ಯ ತಪಾಸಣೆ ಮಾಡಿ . ಕೈ ಮತ್ತು ಕಾಲುಗಳನ್ನ ತೆಗೆಯಲೇ ಬೇಕು ಎಂದು ಹೇಳಿದ ಕೂಡಲೇ ಶ್ರೀಧರ ಕುಟುಂಬ ಆಸ್ಪತ್ರೆಯಲ್ಲಿಯೆ ಕುಸಿದು ಬಿತ್ತು. ಹೆಚ್ಚು ಸಮಯವಿಲ್ಲ‌ ವ್ಯಕ್ತಿ ಬದುಕಬೇಕು ಎಂದಾದಲ್ಲಿ ನಂಜು ದೇಹವನ್ನ ವ್ಯಾಪಿಸುವ ಮುಂಚೆ ಕೈಕಾಲುಗಳನ್ನ ತೆಗೆಯುವುದು ಅನಿವಾರ್ಯವಾಗಿತ್ತು. ಹೀಗೆ ಎರಡು ಕೈ ಮತ್ತು ಕಾಲುಗಳನ್ನ ಕಳೆದುಕೊಂಡ ಶ್ರೀಧರ ಕಳೆದೆರಡು ವರ್ಷದಿಂದ ಜಿಂದಾಲ್ ಕಂಪನಿಗೆ ಪರಿಹಾರಕ್ಕಾಗಿ ಮೊರೆ ಇಡುತ್ತಿದ್ದಾನೆ. ಆದ್ರೆ ಕಾರ್ಮಿಕರ ರಕ್ಷಣೆಯೆ ನಮ್ಮ ಮೊದಲ ಆದ್ಯತೆ ಎಂಬ ಕಾರ್ಖಾನೆಯ ಬಾಗಿಲ ಬಳಿ ಹಾಕಿರುವ ಸಾಲುಗಳು ತೋರ್ಪಡಿಕೆಗೆ ಮಾತ್ರ ಸೀಮಿತ ಎಂಬುದಂತೂ ಸುಳ್ಳಲ್ಲ..ಈ ಬಗ್ಗೆ‌ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು ನೊಂದ ಜಿಂದಾಲ್ ಉದ್ಯೋಗಿ ಕುಟುಂಬಕ್ಕೆ‌ ಕಾರ್ಖಾನೆಯಿಂದ ಆದಂತಹ ಅನ್ಯಾಯಕ್ಕೆ‌ ನ್ಯಾಯ ದೊರಕಿಸಿಕೊಡಬೇಕಾಗಿದೆ.

ಮಂಜುನಾಥ ಹಿರೇಮಠ್
ವಾಯ್ಸ್ ಆಫ್ ವರ್ಕರ್ಸ್,
ಬಳ್ಳಾರಿ ವರದಿಗಾರ