Take a fresh look at your lifestyle.

ಸಾರಿಗೆ ನೌಕರರ ಮುಷ್ಕರ 4ನೇ ದಿನಕ್ಕೆ

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಬಂಧಿಸಿದಂತೆ ಇಂದು ಮತ್ತೊಂದು ಸುತ್ತಿನ ಮಾತುಕತೆಯನ್ನು ಸಾರಿಗೆ ಸಚಿವ ಯೂನಿಯನ್ ನಾಯಕರೊಂದಿಗೆ ನಡೆಸಲಿದ್ದಾರೆ

0
post ad

ಬೆಂಗಳೂರು : ಸರ್ಕಾರಿ ನೌಕರರ ಸ್ಥಾನಮಾನಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಿಬ್ಬಂದಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಮುಂದುವರೆಯಲಿದೆ.
ನೌಕರರ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಸಿಬ್ಬಂದಿಯು ಸ್ವಾತಂತ್ರ್ಯ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಲಿದ್ದಾರೆ.
ಕೆಲ ನಾಟಕೀಯ ಬೆಳವಣಿಗೆಗಳ ನಡುವೆ ಕೆಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪಿಕೊಂಡಿದ್ದರಿಂದ ಸಾರಿಗೆ ನೌಕರರ ಕಾರ್ಮಿಕ ಒಕ್ಕೂಟಗಳ ನಾಯಕರು ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳುವ ಸೂಚನೆ ನೀಡಿದ್ದರು.
ಸತ್ಯಾಗ್ರಹ ನಿರತ ಯೂನಿಯನ್ ನಾಯಕರು ಇಂದು ಸರ್ಕಾರದ ಜೊತೆ ಮತ್ತೊಂದು ಸುತ್ತಿನ ಮಾತುಕತೆಯನ್ನು ಮಾಡಲಿದ್ದಾರೆ.
ನಿಗಮದ ಸಿಬ್ಬಂದಿಗೆ ಆರೋಗ್ಯ ಸಂಜೀವಿನಿ ಯೋಜನೆ ಅನ್ವಯ,
ವೇತನ ಪರಿಷ್ಕರಣೆಗೆ ಸಮಯಾವಕಾಶ, ಅಂತರ್ ನಿಗಮ ವರ್ಗಾವಣೆಗೆ ಸಮಿತಿ ರಚನೆ, ಕೋವಿಡ್‌ನಿಂದ ಮೃತಪಟ್ಟವರಿಗೆ 30 ಲಕ್ಷ ಪರಿಹಾರ, ಸಿಬ್ಬಂದಿಯ ತರಬೇತಿ ಅವಧಿ ಎರಡು ವರ್ಷಗಳಿಂದ ಒಂದು ವರ್ಷಕ್ಕೆ ಇಳಿಕೆ ಸೇರಿದಂತೆ ಮಹತ್ವದ ಕೆಲವು ಬೇಡಿಕೆಗಳ ಈಡೇರಿಕೆಗಳಿಗೆ ಸರ್ಕಾರ ಒಪ್ಪಿಕೊಂಡಿದ್ದು, ಸರ್ಕಾರಿ ನೌಕರರ ಸ್ಥಾನಮಾನ ಮಾತ್ರದ ಬೇಡಿಕೆಗೆ ಸರ್ಕಾರ ಒಪ್ಪುತ್ತಿಲ್ಲ.
ಈ ನಡುವೆ ಕಾರ್ಮಿಕ ಒಕ್ಕೂಟಗಳ ಒಂದು ಬಣದ ನೌಕರರು ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದ್ದು, ಹಾಜರಾಗುವ ಸಿಬ್ಬಂದಿಗೆ ಪೊಲೀಸ್ ರಕ್ಷಣೆಯನ್ನು ನೀಡಲಾಗಿದೆ.
ಬಿಎಂಟಿಸಿ ಜೊತೆಗೆ ಇತರೆ ಮೂರು ಸಾರಿಗೆ ನಿಗಮಗಳಾದ ಕೆಎಸ್‍ಆರ್ ಟಿಸಿ, ವಾಯುವ್ಯ ಸಾರಿಗೆ ನಿಗಮ ಹಾಗೂ ನೈರುತ್ಯ ಸಾರಿಗೆ ನಿಗಮಗಳ ನೌಕರರು ಇಂದು ಸಹ ಕರ್ತವ್ಯಕ್ಕೆ ಗೈರಾಗುವ ಸಾಧ್ಯತೆ ಇದೆ.
ಕೆಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ನಿಗಮಗಳಲ್ಲಿ ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಸದನದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡುತ್ತಾ, ರಾಜ್ಯ ಸರ್ಕಾರ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದರಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.