Take a fresh look at your lifestyle.

ಸಾರಿಗೆ ನೌಕರರಿಂದ ಕಾಲ್ನಡಿಗೆ ಜಾಥಾ ಆರಂಭ

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಾರಿಗೆ ನೌಕರರು, ಐಕ್ಯ ಹೋರಾಟ ಸಮಿತಿ ಹಾಗೂ ರೈತಪರ, ಕಾರ್ಮಿಕ ಸಂಘಟನೆಗಳ ಜೊತೆ ವಿಧಾನ ಸೌಧ ಮುತ್ತಿಗೆ ಜಾಥಾವನ್ನು ಆರಂಭಿಸಿದರು

0
post ad

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಸಾರಿಗೆ ನೌಕರರು  ಇಂದು ಬೃಹತ್ ಜಾಥಾ ಆರಂಭಿಸಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಾರಿಗೆ ನೌಕರರು, ಐಕ್ಯ ಹೋರಾಟ ಸಮಿತಿ ಹಾಗೂ ರೈತಪರ, ಕಾರ್ಮಿಕ ಸಂಘಟನೆಗಳ ಜೊತೆ ವಿಧಾನ ಸೌಧ ಮುತ್ತಿಗೆ ಜಾಥಾವನ್ನು ಆರಂಭಿಸಿದರು.
ರೈಲ್ವೆ ನಿಲ್ದಾಣದಿಂದ ಆರಂಭವಾದ ರ್ಯಾಲಿ ಸ್ವಾತಂತ್ರ್ಯ ಉದ್ಯಾನವನದ ಮೂಲಕ ವಿಧಾನಸೌಧದವರೆಗೆ ನಡೆಯಲಿದೆ.
ಸಾರಿಗೆ ನೌಕರರ ನಡಿಗೆ- ಸರ್ಕಾರಿ ನೌಕರರಾಗುವ ಕಡೆಗೆ ಎಂಬ ಘೋಷಣೆಯೊಂದಿಗೆ, ಬಿತ್ತಿ ಪತ್ರಗಳನ್ನು ಪ್ರದರ್ಶಿಸುತ್ತಾ ಆರಂಭವಾದ  ಕಾಲ್ನಡಿಗೆ ಜಾಥಾಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಂಜಾವಧೂತ ಸ್ವಾಮೀಜಿ ಹಾಗೂ ಚಂದ್ರಶೇಖರ ಸ್ವಾಮೀಜಿಗಳು ಚಾಲನೆ ನೀಡಿದರು.  ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಹಿರಂಗ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. ಸಾರಿಗೆ ನೌಕರರು, ಮತ್ತವರ ಕುಟುಂಬ ಸದಸ್ಯರು ಭಾಗಿಯಾಗಿ ರ್ಯಾಲಿಗೆ ಬೆಂಬಲ ಸೂಚಿಸಿದರು.
ನೆನ್ನೆ, ವಿಧಾನಸಭೆಯ ಸದನದಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ರಾಜ್ಯ ಸರ್ಕಾರ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದರಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದನ್ನು ಖಂಡಿಸುತ್ತಾ, ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಈ ಜಾಥಾ ಆರಂಭವಾಗಿದೆ.
ಕೆಎಸ್ ಆರ್ ಟಿಸಿ, ಬಿಎಂಟಿಸಿ ಹಾಗೂ ಈಶಾನ್ಯ, ವಾಯುವ್ಯ ಸಾರಿಗೆ ಸೇರಿ ರಾಜ್ಯದಲ್ಲಿ ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಸಾರಿಗೆ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.