Take a fresh look at your lifestyle.

ಏಪ್ರಿಲ್ 1ರ ಒಳಗೆಯೇ ಕಾರ್ಮಿಕ ಸಂಹಿತೆಗಳ ಜಾರಿ !

ಜನವರಿ ಅಂತ್ಯದೊಳಗೆ ಸಂಹಿತೆಗಳ ಅಡಿಯಲ್ಲಿ ರೂಪಿಸಲಾದ ನಿಯಮಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ನಿಯಮಗಳ ಅಧಿಸೂಚನೆ ಹೊರಡಿಸಿದ ತಕ್ಷಣ ನೂತನ ಸಂಹಿತೆಗಳು ಜಾರಿಗೆ ಬರುವ ಸಾಧ್ಯತೆಗಳು ದಟ್ಟವಾಗಿವೆ...

0
post ad

ನವ ದೆಹಲಿ : ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆಯ ಸಂಹಿತೆ, ವೇತನ ಸಂಹಿತೆ ಹಾಗೂ ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಮೇಲಿನ ಸಂಹಿತೆ ಎಂಬ ನಾಲ್ಕು ಸಂಹಿತೆಗಳಲ್ಲಿ ಈ ಹಿಂದಿನ 29 ಕಾರ್ಮಿಕ ಕಾಯ್ದೆಗಳನ್ನು ವಿಲೀನಗೊಳಿಸಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ.
ನಾಲ್ಕು ಸಂಹಿತೆಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಏಪ್ರಿಲ್ 1ರಿಂದ ಜಾರಿಗೆ ತರಬಹುದು ಎಂದು  ನಿರೀಕ್ಷಿಸಲಾಗಿತ್ತು. ಆದರೆ, ನೂತನ ಕಾರ್ಮಿಕ ಸಂಹಿತೆಗಳು ಚಾಲ್ತಿಗೆ ತರಲು ಉದ್ದೇಶಿಸಿರುವ ದಿನಾಂಕಕ್ಕೂ ಮೊದಲೇ ಜಾರಿಯಾಗುವ ಸೂಚನೆಗಳು ಲಭ್ಯವಾಗುತ್ತಿವೆ.
ಈ ಬಗೆಗೆ ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಅಪೂರ್ವಚಂದ್ರ ಮಾತನಾಡಿದ್ದು, ಜನವರಿ ಅಂತ್ಯದೊಳಗೆ ಸಂಹಿತೆಗಳ ಅಡಿಯಲ್ಲಿ ರೂಪಿಸಲಾದ ನಿಯಮಗಳನ್ನು ಅಂತಿಮಗೊಳಿಸಲಾಗುವುದು. ಒಂದೊಮ್ಮೆ ನಿಯಮಗಳ ಅಧಿಸೂಚನೆಗಳನ್ನು ಸರ್ಕಾರ ಹೊರಡಿಸಿದ ನಂತರ ನೂತನ ಸಂಹಿತೆಗಳು ಜಾರಿಗೆ ಬರುತ್ತವೆ ಎಂದು ಹೇಳಿದ್ದಾರೆ.

ವೇತನ ಸಂಹಿತೆ 2019 ರ ಅಡಿಯಲ್ಲಿ ಬರುವ ನಿಯಮಗಳನ್ನು ಅಂತಿಮಗೊಳಿಸಲಾಗಿದೆ, ಆದರೆ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಮೇಲಿನ ಸಂಹಿತೆ-2020, ವೇತನ ಸಂಹಿತೆ-2020 ಮತ್ತು ಸಾಮಾಜಿಕ ಭದ್ರತೆಯ ಸಂಹಿತೆ-2020 ರ ಅಡಿಯಲ್ಲಿ ಇನ್ನೂ ಅಧಿಸೂಚನೆಯನ್ನು ಹೊರಡಿಸಿಲ್ಲ. ಕೈಗಾರಿಕಾ ಸಂಬಂಧಗಳ ಸಂಹಿತೆಯ ನಿಯಮಗಳನ್ನು ಅಂತಿಮಗೊಳಿಸಲಾಗಿದೆ ಎಂದು ಅಪೂರ್ವ ಚಂದ್ರ ಅವರು ಹೇಳಿದ್ದು, ಔದ್ಯೋಗಿಕ ಸುರಕ್ಷತೆ ಮತ್ತು ಸಾಮಾಜಿಕ ಭದ್ರತಾ ಸಂಹಿತೆಗಳನ್ನು ಮುಂದಿನ 10-12 ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಔದ್ಯೋಗಿಕ ಸುರಕ್ಷತೆ ಮತ್ತು ಸಾಮಾಜಿಕ ಭದ್ರತಾ ಸಂಹಿತೆಗಳ ಕರಡು ನಿಯಮಗಳ ಬಗೆಗೆ ಸುಮಾರು 1,200 ಪ್ರತಿಕ್ರಿಯೆಗಳು ಬಂದಿವೆಯಂತೆ.
ಆದ್ದರಿಂದ, ಮುಂದಿನ ಎರಡು ತಿಂಗಳ ಒಳಗಾಗಿಯೇ ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೊಳಿಸುವ ಸಾಧ್ಯತೆ ಇದೆ. ಆದರೆ ಈ ಸಂಹಿತೆಗಳನ್ನು ಅನುಷ್ಠಾನಕ್ಕೆ  ತರುವುದು ಆಯಾ ರಾಜ್ಯ ಸರ್ಕಾರಗಳ ಮೇಲೆ ಅವಲಂಭಿಸಿರುತ್ತದೆ. ಕರ್ನಾಟಕದಲ್ಲಿ ಈಗಾಗಲೇ ಈ ಸಂಹಿತೆಗಳ ಜಾರಿಯ ಹಾದಿಯನ್ನು  ಸರ್ಕಾರ ಸುಗಮಗೊಳಿಸಿದೆ.