Take a fresh look at your lifestyle.

ವಿಸ್ಟ್ರಾನ್ ಗುತ್ತಿಗೆದಾರರಿಗೆ ಕಾರ್ಮಿಕ ಇಲಾಖೆ ನೋಟೀಸ್, ತನಿಖೆ ಶುರು

ಗುತ್ತಿಗೆದಾರರು ಉದ್ಯೋಗದಾತರ ಸಮ್ಮುಖದಲ್ಲೇ ಪ್ರತಿ ತಿಂಗಳು 7 ನೇ ತಾರೀಖಿನ ಒಳಗೆ ಕಾರ್ಮಿಕರಿಗೆ ವೇತನ ಪಾವತಿಸಬೇಕು ಎಂದು ಕಾರ್ಮಿಕ ಕಾನೂನು ಸ್ಪಷ್ಟವಾಗಿ ಹೇಳುತ್ತಿದೆ

0
post ad

ಬೆಂಗಳೂರು: ವಿಸ್ಟ್ರಾನ್ ಕಂಪನಿಯ  6 ಮಂದಿ ಕಾರ್ಮಿಕ ಗುತ್ತಿಗೆದಾರರಿಗೆ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಕಾರ್ಮಿಕ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಸೋಮವಾರ ಈ ಬಗೆಗೆ ಕಂಪೆನಿಯ ಆಡಳಿತ ಮಂಡಳಿಯು ಕಾರ್ಮಿಕ ಆಯುಕ್ತರಿಗೆ ಗುತ್ತಿಗೆದಾರರು, ವೇತನ ಸಲ್ಲಿಕೆ, ಬಾಕಿ ಸೇರಿದಂತೆ ಮಹತ್ವದ ವಿವರಗಳನ್ನು ಸಲ್ಲಿಸಿತ್ತು.
ಕೋಲಾರ ಜಿಲ್ಲೆಯ ನರಸಾಪುರದ ವಿಸ್ಟ್ರಾನ್ ಘಟಕದ ಮೇಲೆ ನಡೆದ ದಾಳಿ ಘಟನೆಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯು ತನಿಖೆಗೆ ಆದೇಶಿಸಿ ವಿಸ್ಟ್ರಾನ್ ಘಟಕದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಕಾರ್ಮಿಕ ಆಯುಕ್ತ ಅಕ್ರಮ್ ಪಾಷ ಅವರ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.
ಘಟನೆಗೆ ಸಂಬಂಧ ಇದೀಗ ಕಾರ್ಮಿಕ ಇಲಾಖೆ ಅಧಿಕಾರಿಗಳು ಅದರಲ್ಲೂ ಇನ್ಸ್ ಪೆಕ್ಟರ್ ಅಫ್ ಫ್ಯಾಕ್ಟರೀಸ್ ಅಧಿಕಾರಿಗಳು ಕಂಪೆನಿಗೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ವೇತನ ಪಾವತಿ, ಕೆಲಸದ ಅವಧಿ ಇತ್ಯಾದಿಗಳಿಗೆ ಸಂಬಂಧಿಸಿದ ಯಾವುದೇ ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡಲಾಗಿದೆಯಾ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.
ಇನ್ನು, ನೌಕರರಲ್ಲಿ ಯಾವ ವಿಚಾರಕ್ಕೆ ಸಂಘರ್ಷ ಸೃಷ್ಟಿಯಾಗಿತ್ತು ಎಂಬುದರ ಕುರಿತು ಆಳವಾದ ತನಿಖೆಯನ್ನು  ಪೊಲೀಸ್ ಇಲಾಖೆ  ಮುಂದುವರೆಸಿದೆ.
ಕಂಪನಿಯಲ್ಲಿ ಕಾರ್ಮಿಕ ಸಂಘಟನೆ ಇಲ್ಲದ ಕಾರಣ ಈ ವರೆಗೂ ಕಾರ್ಮಿಕರಿಂದ ಯಾವುದೇ ದೂರುಗಳು ಬಂದಿರಲಿಲ್ಲ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಅದರೆ ವೇತನ ಪಾವತಿಯಾಗದಿರುವ ಬಗೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂಬ ಮಾಹಿತಿ ಇದೆ.
ಕಂಪನಿಯಲ್ಲಿ 1200ಕ್ಕೂ ಹೆಚ್ಚು ಖಾಯಂ ನೌಕರರಿದ್ದು, 8,400ಕ್ಕೂ ಹೆಚ್ಚು ಮಂದಿ ಗುತ್ತಿಗೆ ಕಾರ್ಮಿಕರಾಗಿದ್ದು, ಆರು ಗುತ್ತಿಗೆದಾರರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 300 ಕ್ಕೂ ಹೆಚ್ಚು ಕಾರ್ಮಿಕರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು,  7,000 ಕಾರ್ಮಿಕರ ವಿರುದ್ಧ ಫೋನ್, ಲ್ಯಾಪ್ ಟಾಪ್ ಕಳ್ಳತನ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
ಮೇಲ್ನೋಟಕ್ಕೆ ಗುತ್ತಿಗೆ ಕಾರ್ಮಿಕರೇ ಈ ದಾಳಿ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಮಾನವ ಸಂಪನ್ಮೂಲ ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಡುವಿನ ಸಂವಹನ ಕೊರತೆಯೂ ಇಂತಹ ಘಟನೆಗಳಿಗೆ ಕಾರಣವಾಗಿರಬಹುದೆಂಬ ಮಾತುಗಳು ಕೇಳಿಬರುತ್ತಿವೆ.
ಸೆಪ್ಟೆಂಬರ್ ತಿಂಗಳಿನಿಂದಷ್ಟೇ ಐಫೋನ್ ಘಟಕ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಕಟ್ಟಡದ ನವೀಕರಣದ ನಂತರ ಸಂಸ್ಥೆ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಲಿದೆ.

ಗುತ್ತಿಗೆ ಕಾನೂನು, ಗುತ್ತಿಗೆ ನಿಯಮಗಳ ಬಗೆಗೆ ‘ವಾಯ್ಸ್ ಆಫ್ ವರ್ಕರ್ಸ್’ ಟಿಯುಸಿಸಿ ರಾಜ್ಯಾಧ್ಯಕ್ಷ ಜಿ.ಆರ್ ಶಿವಶಂಕರ್ ರವರ ಜೊತೆ ಮಾತು ಮಂಥನ ನಡೆಸಿತ್ತು… ಅದರ ಸಮಗ್ರ ಮಾಹಿತಿ ಇಲ್ಲಿದೆ…
https://youtu.be/9eaZiqpVL3w