ಟೊಯೋಟಾ ಕಾರ್ಮಿಕರಿಂದ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮುತ್ತಿಗೆ
ಗುತ್ತಿಗೆ ಕಾರ್ಮಿಕರಿಂದ ಟೊಯೋಟಾ ಕಂಪನಿ ಆಡಳಿತ ಮಂಡಳಿ ನೇರ ಉತ್ಪಾದನೆ ಮಾಡಿಸುತ್ತಿರುವುದರ ವಿರುದ್ಧ ತನಿಖೆಗೆ ಆಗ್ರಹಿಸಿ ನೂರಾರು ಟಿಕೆಎಂ ಕಾರ್ಮಿಕರು ನಿರೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು


ರಾಮನಗರ : ಟೊಯೋಟಾ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ವಿಧಾನ, ಸನ್ನಡತೆ ಪತ್ರಕ್ಕೆ ಸಹಿ ಷರತ್ತು ವಿಧಿಸಿ ಲಾಕ್ ಔಟ್ ತೆರವು ಗೊಳಿಸಿರುವುದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ಕಾರ್ಮಿಕರು ಇಂದು ಆಡಳಿತ ಮಂಡಳಿ ಅಕ್ರಮವಾಗಿ ಗುತ್ತಿಗೆ ಕಾರ್ಮಿಕರನ್ನೂ ನೇಮಿಸಿಕೊಂಡು ಉತ್ಪಾದನೆಯಲ್ಲಿ ನೇರವಾಗಿ ಕೆಲಸ ಮಾಡಿಸುತ್ತಿರುವುದನ್ನು ಖಂಡಿಸುತ್ತಾ ರಾಮನಗರ ವೃತ್ತದ ಕಾರ್ಮಿಕರ ನಿರೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿದರು.
ಕಾರ್ಮಿಕರ ಕೂಗಿನ ಕಡೆ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಟೊಯೋಟಾ ಕಾರ್ಮಿಕರು ನಡೆಸುತ್ತಿರುವ ಹೋರಾಟವು 78ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟದ ಭಾಗವಾಗಿ ಟಿಕೆಎಂ ಕಾರ್ಮಿಕರು ಇಂದು ರಾಮನಗರ ಕಾರ್ಮಿಕ ನಿರೀಕ್ಷಕರ ಕಛೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಅಕ್ರಮವಾಗಿ ಗುತ್ತಿಗೆ ಕಾರ್ಮಿಕರನ್ನೂ ನೇಮಿಸಿಕೊಂಡು ಉತ್ಪಾದನೆಯಲ್ಲಿ ನೇರವಾಗಿ ಕೆಲಸ ಮಾಡುತ್ತಿರುವುದನ್ನು ತಡೆಹಿಡಿಯುವಂತೆ ಕೋರಿ ಹಲವು ಬಾರಿ ಮನವಿ ಮಾಡಿದ್ದರೂ ಕೂಡ ಈವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ನೂರಾರು ಕಾರ್ಮಿಕರು ನಿರೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಶೀಘ್ರವಾಗಿ ನಿಷ್ಪಕ್ಷಪಾತ ತನಿಖೆ ಮಾಡಿ ಅಕ್ರಮವಾಗಿ ಉತ್ಪಾದನೆ ಮಾಡುತ್ತಿರುವ ಟೊಯೋಟಾ ಕಂಪನಿಯ ಆಡಳಿತದ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ರಾಮನಗರ ವೃತ್ತ ಕಾರ್ಮಿಕ ನಿರೀಕ್ಷಕ ಶೇಖರ್ ಅವರ ಅನುಪಸ್ಥಿತಿಯಲ್ಲಿ ಯತೀಶ್ ರವರು ಕಾರ್ಮಿಕರಿಂದ ಮನವಿ ಸ್ವೀಕರಿಸಿ ಎರಡು ಮೂರು ದಿನದಲ್ಲಿ ತನಿಖೆ ಮಾಡುವುದಾಗಿ ಭರವಸೆ ನೀಡಿದರು.
ಇನ್ನು, ನಾಳೆ 79 ನೇ ದಿನದ ಹೋರಾಟದ ಭಾಗವಾಗಿ ಮಂಡ್ಯ ,ಮೈಸೂರು ,ಕೊಡಗು ,ಚಾಮರಾಜನಗರ ಭಾಗದ ಎಲ್ಲಾ ರೈತರು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಪೆರೇಡ್ ನಲ್ಲಿ ಭಾಗವಹಿಸಲು ಈ ಮಾರ್ಗವಾಗಿ ಬರುತ್ತಿದ್ದು ನಾಳೆ ಬೆಳಗ್ಗೆ 8 ಘಂಟೆಗೆ ಟೊಯೋಟಾ ಕಂಪನಿ ಮುಂಭಾಗ ಸೇರಿ ಟೊಯೋಟಾ ಕಾರ್ಮಿಕರ ಪರವಾಗಿ ಬೃಹತ್ ಪ್ರತಿಭಟನೆ ಮಾಡಿ ನಂತರ ಇಲ್ಲಿಂದ ರೈತರು ಹಾಗೂ ಕಾರ್ಮಿಕರು ಜೊತೆಯಾಗಿ ಬೃಹತ್ ಮೆರವಣಿಗೆ ಮೂಲಕ ಬೆಂಗಳೂರು ತಲುಪಲಾಗುವುದು ಎಂದು ಕಾರ್ಮಿಕ ಸಂಘ ತಿಳಿಸಿದೆ.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 66 ಕಾರ್ಮಿಕರ ಅಮಾನತ್ತು, 78 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.