Take a fresh look at your lifestyle.

ಟೊಯೋಟಾ ಕಾರ್ಮಿಕರ ಜೊತೆ ಕಾರ್ಮಿಕ ಸಚಿವರ ಚರ್ಚೆ

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ರವರ ಜೊತೆಗೆ ಶಾಸಕರು, ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಟಿಕೆಎಂ ಕಾರ್ಮಿಕರ ಜೊತೆಗಿನ ಚರ್ಚೆಯ ವೇಳೆ ಹಾಜರಿದ್ದರು.

0
post ad

ಬಿಡದಿ : ಟೊಯೋಟಾ ಆಡಳಿತ ಮಂಡಳಿಯ ಕಾನೂನು ಬಾಹಿರ ಕಾರ್ಮಿಕ ನೀತಿಗಳ ವಿರುದ್ಧ ಸಿಡಿದೆದ್ದು ಭವಿಷ್ಯವನ್ನೆ ಮುಡುಪಾಗಿಟ್ಟು ಆತ್ಮಗೌರವಕ್ಕಾಗಿ ಆಡಳಿತ ಮಂಡಳಿಯ ವಿರುದ್ಧ ಸ್ವಾಭಿಮಾನಿ ಹೋರಾಟ ನಡೆಸುತ್ತಿರುವ ಟೊಯೋಟಾ ಕಾರ್ಮಿಕರ ಜೊತೆಗೆ ಕಾರ್ಮಿಕ ಸಚಿವರು ಸಭೆ ನಡೆಸಿದರು.
ಈ ವೇಳೆ ಕಾರ್ಮಿಕರ ಅಮಾನತು ಅನ್ನು ಹಿಂತೆಗೆದುಕೊಳ್ಳಲು ಆಡಳಿತ ವರ್ಗಕ್ಕೆ ಆದೇಶಿಸಲಾಗುವುದೆಂದು ಸಚಿವರು ತಿಳಿಸಿದರು.
ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಬಳಿ ಕಾರ್ಮಿಕ ಸಂಘ ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಎಲ್ಲಾ ಕಾರ್ಮಿಕರ ಎದುರೇ ಸಚಿವರು ಮತ್ತು ಅಧಿಕಾರಿಗಳು ಸಭೆಯನ್ನು ನಡೆಸಿದರು.
ನಾಳೆಯ ಒಳಗೆ ಟೊಯೋಟಾ ಆಡಳಿತಕ್ಕೆ ಸ್ಪಷ್ಟ ಸೂಚನೆಗಳನ್ನು ನೀಡಲಾಗುವುದು, ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸರ್ಕಾರವೇ ನಿರ್ದೇಶಿಸಿ ಬಿಕ್ಕಟ್ಟನ್ನು ಅಂತ್ಯಗೊಳಿಸುವ ಪ್ರಯತ್ನ ನಡೆಯುತ್ತದೆ ಎಂದು ಸಚಿವರು ಕಾರ್ಮಿಕರಿಗೆ ಭರವಸೆಯನ್ನು ನೀಡಿದರು.
ಸಚಿವರು ಆಡಳಿತ ವರ್ಗಕ್ಕೆ ನೀಡುವ ಸೂಚನೆಗಳು ಮತ್ತು ಆಡಳಿತ ಮಂಡಳಿ ಅನುಸರಿಸುವ ಕ್ರಮಗಳನ್ನು ಆಧರಿಸಿ ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಕಾರ್ಮಿಕ ಸಂಘ ತಿಳಿಸಿದ್ದು, ಅಲ್ಲಿಯವರೆಗೂ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದೆ.
ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ್, ಮಾಗಡಿ ಶಾಸಕರಾದ ಎ.ಮಂಜು, ಕಾರ್ಮಿಕ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ ಕತ್ರಿ , ಕಾರ್ಮಿಕ ಆಯುಕ್ತರಾದ ಅಕ್ರಂ ಪಾಷ, ರಾಮನಗರ ಜಿಲ್ಲಾಧಿಕಾರಿ ಅರ್ಚನಾ, ಪೋಲೀಸ್ ವರಿಷ್ಠಾಧಿಕಾರಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಹುಲವಾಡಿ ದೇವರಾಜ್, ಐಎನ್ ಟಿಯುಸಿ ಅಧ್ಯಕ್ಷ ಪ್ರಕಾಶಮ್, ಕಾರ್ಮಿಕ ಮುಖಂಡ ಶ್ಯಾಮಣ್ಣರೆಡ್ಡಿ ಮತ್ತಿತರರು ಕಾರ್ಮಿಕರ ಜೊತೆಗಿನ ಸಭೆಯ ವೇಳೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಮಿಕ ಸಂಘದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಕಾರ್ಮಿಕರ ಬೇಡಿಕೆಗಳು ಮತ್ತು ಆಡಳಿತ ಮಂಡಳಿ ಅನುಸರಿಸುತ್ತಿರುವ ಅನುಚಿತ ಕ್ರಮಗಳನ್ನು ಸಚಿವರಿಗೆ ವಿವರಿಸಿದರು.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 66 ಕಾರ್ಮಿಕರ ಅಮಾನತ್ತು, 8 ಕಾರ್ಮಿಕ ವಜಾ, 88 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿದ್ದು, ಈ ವಿಷಯ ಸದನದಲ್ಲೂ ಪ್ರತಿಧ್ವನಿಸಿದೆ.