Take a fresh look at your lifestyle.

ಮಧ್ಯೆ 1 ಗಂಟೆ ಬಿಡುವು ಸೇರಿದಂತೆ ಗರಿಷ್ಠ 12 ಗಂಟೆ ದುಡಿಯಲು ಅವಕಾಶ

ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಸಂಹಿತೆಗಳ ಅಧಿಸೂಚನೆಯ ಕರಡು ನೀತಿ ಪ್ರಕಾರ, ಕಾರ್ಮಿಕರು ದಿನಕ್ಕೆ ಗರಿಷ್ಠ 12 ಗಂಟೆ ದುಡಿಯಬಹುದು, ಆದರೆ ಕರ್ತವ್ಯದ ಅವಧಿಯಲ್ಲಿ ಕಾರ್ಮಿಕನಿಗೆ 1 ಗಂಟೆ ವಿಶ್ರಾಂತಿ ಕೊಡಬೇಕು, ವಾರಕ್ಕೆ 48 ಗಂಟೆಗಿಂತ ಹೆಚ್ಚಿನ ದುಡಿಮೆಗೆ ಅವಕಾಶ ಇಲ್ಲ

0
post ad

ನವ ದೆಹಲಿ : ಕಾರ್ಖಾನೆಗಳು, ಉದ್ದಿಮೆ, ಇತರ ಸಂಸ್ಥೆಗಳಲ್ಲಿ ದಿನಕ್ಕೆ ಗರಿಷ್ಠ 12 ಗಂಟೆಯ ದುಡಿಮೆಗೆ ಅನುಮತಿ ನೀಡುವ ಅಧಿಸೂಚನೆಯನ್ನು ಕಾರ್ಮಿಕ ಸಚಿವಾಲಯ ಹೊರಡಿಸಿದೆ. ಈ 12 ಗಂಟೆಗಳ ನಡುವೆ  1 ಗಂಟೆ ವಿಶ್ರಾಂತಿ ಅವಧಿ ಕಡ್ಡಾಯವಾಗಿದೆ.
ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಸಂಹಿತೆ-2020ರ ಕರಡನ್ನು ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದೆ.
ಗರಿಷ್ಠ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲಾಗಿದ್ದು, ಗರಿಷ್ಠ ನಾಲ್ಕು ಗಂಟೆಗಳ ಹೆಚ್ಚುವರಿ ಕೆಲಸಕ್ಕೆ ಅವಕಾಶವಿದೆ.
ಈ ಹಿಂದೆ ದಿನಕ್ಕೆ ಗರಿಷ್ಠ 9 ಗಂಟೆಗಳ ದುಡಿಮೆಗೆ ಅನುಮತಿ ಇತ್ತು. ಅದನ್ನು ಈಗ 12ಕ್ಕೆ ಏರಿಸಲಾಗಿದೆ. ಆದರೆ ವಾರಕ್ಕೆ 48 ಗಂಟೆಗಿಂತ ಹೆಚ್ಚು ದುಡಿಮೆಗೆ ಅವಕಾಶ ಇಲ್ಲ. ಕರಡು ಉದ್ಯೋಗ ಸಂಹಿತೆಯ ಭಾಗವಾಗಿ ಈ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ಕರಡು ಉದ್ಯೋಗ ನೀತಿಯ ಮುಖ್ಯಾಂಶಗಳು

* ಕಾರ್ಮಿಕರ ಕೆಲಸದ ಅವಧಿಯು ವಿಶ್ರಾಂತಿಯ ಅವಧಿಯನ್ನು ಒಳಗೊಂಡಿರಬಹುದು
* ದಿನಕ್ಕೆ 12 ಗಂಟೆ ಮೀರಬಾರದು. ಸತತ 5 ಗಂಟೆಗಿಂತ ಹೆಚ್ಚು ದುಡಿಮೆ ಮಾಡುವಂತಿಲ್ಲ.
* ಮಧ್ಯೆ ಕನಿಷ್ಠ ಅರ್ಧ ಗಂಟೆ ವಿಶ್ರಾಂತಿ ಅಗತ್ಯ, ದಿನದ ಕೆಲಸದ ಅವಧಿಯಲ್ಲಿ ಹೊಂದಾಣಿಕೆ ಮಾಡಬಹುದು.
* ವಾರಕ್ಕೆ 48 ಗಂಟೆಗಿಂತ ಹೆಚ್ಚು ಕೆಲಸಕ್ಕೆ ಅವಕಾಶವಿಲ್ಲ.
* ಕಾರ್ಮಿಕರ ಸುರಕ್ಷತೆ, ಆರೋಗ್ಯ, ಕೆಲಸದ ಪರಿಸ್ಥಿತಿ ಕುರಿತ ನೀತಿಗಳನ್ನು ಪಾಲಿಸಬೇಕು.
* ಪ್ರತಿದಿನ ಕೆಲಸದ ಅವಧಿ ಎಂಟು ಗಂಟೆಗಿಂತ 15 ನಿಮಿಷ ಅಧಿಕವಾದರೂ ಹೆಚ್ಚುವರಿ ಕೆಲಸಕ್ಕೆ ವೇತನ ನೀಡಬೇಕಾಗುತ್ತದೆ. ಇದನ್ನು 30 ನಿಮಿಷಗಳ ಹೆಚ್ಚುವರಿ ಕೆಲಸ ಎಂದು ಪರಿಗಣಿಸಬೇಕಾಗುತ್ತದೆ.
ಈ ಹಿಂದೆ 30 ನಿಮಿಷಕ್ಕಿಂತ ಕಡಿಮೆ ಅವಧಿಯನ್ನು ಹೆಚ್ಚುವರಿ ಕೆಲಸ ಎಂದು ಪರಿಗಣಿಸುತ್ತಿರಲಿಲ್ಲ.
ಮುಂದಿನ 45 ದಿನಗಳೊಳಗೆ ಈ ನೀತಿ ಬಗ್ಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದು ಎಂದು ಸಚಿವಾಲಯ ತಿಳಿಸಿದೆ.
ಸರಕಾರ ನಾಲ್ಕು ಕಾರ್ಮಿಕ ನೀತಿ ಸಂಹಿತೆಗಳಿಗೆ ಕರಡು ಮಾರ್ಗದರ್ಶಿ ರಚಿಸಲಾಗಿದೆ. ಜನವರಿಯಲ್ಲಿಅಂತಿಮಗೊಳಿಸುವ ಉದ್ದೇಶ ಹೊಂದಿದೆ. 2021ರ ಏಪ್ರಿಲ್‌ 1ರಿಂದ ಹೊಸ ನೀತಿ ಸಂಹಿತೆ ಜಾರಿಯಾಗುವ ನಿರೀಕ್ಷೆ ಇದೆ.
ಒಂದು ವೇಳೆ, ಸತತ ನಾಲ್ಕು ದಿನ  12 ಗಂಟೆಗಳ ಕಾಲ ಕೆಲಸ ನಿರ್ವಹಿಸಿದರೆ…ಮತ್ತೆ ಮೂರು ದಿನ ಕೆಲಸ ಮಾಡುವಂತಿಲ್ಲ.
ಈ ವ್ಯವಸ್ಥೆಯನ್ನು ಆಡಳಿತ ಮಂಡಳಿಗಳು, ಕಾರ್ಮಿಕರು ಹೇಗೆ ನಿಬಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.