Take a fresh look at your lifestyle.

ರಕ್ತದಿಂದ ಪತ್ರ ಬರೆದ ಟೊಯೋಟಾ ಕಾರ್ಮಿಕರು

ರಕ್ತದ ಲೇಖನದಲ್ಲಿ ಹಲವು ಸ್ಲೋಗನ್ ಗಳನ್ನು ಬರೆದು ಪ್ರಧಾನಿ, ಮುಖ್ಯಮಂತ್ರಿಗಳಿಗೆ ರವಾನಿಸಲಾಗಿದೆ

0
post ad

ರಾಮನಗರ: ಸರ್ಕಾರದ ದಿವ್ಯ ನಿರ್ಲಕ್ಷ್ಯದ ವಿರುದ್ಧ ಟಿಕೆಎಂ ಕಾರ್ಮಿಕರು ತಮ್ಮ ರಕ್ತದಲ್ಲಿ ಸ್ವಾಭಿಮಾನದ ಪತ್ರವನ್ನು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಈ ಮೂಲಕ ಸರ್ಕಾರದ ವಿರುದ್ಧವೇ ಅಸಮಾಧಾನವನ್ನು ಹೊರಹಾಕಿರುವ ಟಿಕೆಎಂ ಕಾರ್ಮಿಕರು ಸ್ವಾಭಿಮಾನವನ್ನು ಉಲ್ಲೇಖಿಸಿ, ತಮ್ಮ ಅಸಂತೃಪ್ತಿಯನ್ನು ಹೊರಹಾಕಿದ್ದಾರೆ.
ರಕ್ತದಿಂದ ಬರೆದಿರುವ ಪತ್ರದಲ್ಲಿ ಗೌರವಯುತ ಬದುಕಿಗಾಗಿ ಹೋರಾಟ, ರಕ್ತ ಕೊಟ್ಟೇವು ಸ್ವಾಭಿಮಾನ ಬಿಡೆವು, ನಾವು ಜೀತದಾಳುಗಳು ಅಲ್ಲ ಕಾರ್ಮಿಕರು, ನಾವು ಗೌರವವನ್ನು ಬಯಸುತ್ತೇವೆ, ಕಾರ್ಮಿಕರನ್ನು ಉಳಿಸಿ ಕಾನೂನನ್ನು ರಕ್ಷಿಸಿ, ಟಿಕೆಎಮ ಆಡಳಿತ ಮಂಡಳಿಯ ದೌರ್ಜನ್ಯಗಳು ನಿಲ್ಲಲಿ ಎಂಬ ಸ್ಲೋಗನ್ ಗಳನ್ನು ಬರೆಯಲಾಗಿದೆ.

ರಕ್ತದ ಲೇಖನಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಯವರಿಗೆ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರಿಗೆ ರವಾನಿಸಲಾಗಿದ್ದು, ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಡಲಾಗಿದೆ.
ಇಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ಒತ್ತಡ ಹಾಗೂ ಅಮಾನವೀಯ ನಡೆಯ ವಿರುದ್ಧ ಟಿಕೆಎಂ ಕಾರ್ಮಿಕರು ರಕ್ತದಾನ ಚಳವಳಿಯನ್ನು ರಕ್ತದಾನ ಶಿಬಿರದ ಮೂಲಕ ಹಮ್ಮಿಕೊಂಡಿದ್ದರು.
ವಿಭಿನ್ನ ರೀತಿಗಳಲ್ಲಿ ಪ್ರತಿಭಟನೆಯನ್ನು ಯೋಜಿಸಿ ರಾಷ್ಟ್ರದ ಗಮನ ಸೆಳೆದು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದ ಟಿಕೆಎಂ ಕಾರ್ಮಿಕರ ಸ್ವಾಭಿಮಾನಿ ಹೋರಾಟ ಇಂದು 50ನೇ ದಿನಕ್ಕೆ ಕಾಲಿರಿಸಿದೆ.
ಅಂದರೆ ಸ್ವಾಭಿಮಾನಿ ಹೋರಾಟದ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು ಇಂದು 65 ಕಾರ್ಮಿಕರ ಅಮಾನತ್ತು, 50 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಟಿಕೆಎಂಇಯು ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.
ಇನ್ನು, ವಿರೋಧ ಪಕ್ಷಗಳ ನಾಯಕರು ಬೆಂಬಲದ ನಡುವೆಯೂ ಸರ್ಕಾರದ ಆಡಳಿತ ಮಂಡಳಿಯ ಪರ ಏಕಪಕ್ಷೀಯ ನಡೆಯು ಕಾರ್ಮಿಕರಲ್ಲಿ ಅಸಮಾಧಾನವನ್ನುಂಟು ಮಾಡಿದೆ.
ಟೊಯೋಟಾ ಸಂಸ್ಥೆ ಅಮಾನತು ಮಾಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು, ನ್ಯಾಯಯುತವಾಗಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಬಿಗಿಪಟ್ಟು ಹಿಡಿದಿರುವ ಕಾರ್ಮಿಕರು ಸರ್ಕಾರ, ಕಾರ್ಮಿಕ ಇಲಾಖೆ ಏಕಪಕ್ಷೀಯ ನಡೆಯ ನಡುವೆಯೂ ತಮ್ಮ ಸ್ವಾಭಿಮಾನಿ ಹೋರಾಟವನ್ನು ಯಶಸ್ವಿಯಾಗಿ ಮುನ್ನಡೆಸುವತ್ತ ಭಿನ್ನ ವಿಭಿನ್ನ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ.