Take a fresh look at your lifestyle.

ಖಾಸಗೀಕರಣ ವಿರೋಧಿ ಸಮಿತಿಯಿಂದ ಮಾರ್ಚ್ 1 ಕ್ಕೆ ದುಂಡು ಮೇಜಿನ ಸಭೆ

ರಾಜ್ಯ ದುಂಡು ಮೇಜಿನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯರಾದ ಎಲ್. ಹನುಮಂತಯ್ಯ ಹಾಗೂ ಬಿಜೆಪಿ, ಕಾಂಗ್ರೆಸ್, ಸಿಪಿಐ(ಎಂ)ನ ಮುಖಂಡರು ಕನ್ನಡಪರ, ದಲಿತಪರ, ಕಾರ್ಮಿಕಪರ ಸಂಘಟನೆಗಳ ನಾಯಕರು ಭಾಗವಹಿಸುವ ಸಾಧ್ಯತೆ ಇದೆ

0
post ad

ಬೆಂಗಳೂರು : ದೇಶದಲ್ಲಿನ ಸಾರ್ವಜನಿಕ ಉದ್ಯಮಗಳ ಖಾಸಗೀಕರಣವನ್ನು ವಿರೋಧಿಸಿ ರಾಜ್ಯದಲ್ಲಿರುವ ಸಾರ್ವಜನಿಕ ಸಂಸ್ಥೆಗಳ ನೌಕರರು ಬೃಹತ್ ಪ್ರತಿಭಟನೆಗೆ ರೂಪರೇಷೆಗಳನ್ನು ಸಿದ್ದಪಡಿಸಿದ್ದಾರೆ. ಇದರ ಭಾಗವಾಗಿ ಖಾಸಗೀಕರಣ ವಿರೋಧಿ ಸಮಿತಿ ಅಸ್ಥಿತ್ವಕ್ಕೆ ಬಂದಿದೆ.
ಕೇಂದ್ರ ಸರ್ಕಾರದ ಖಾಸಗೀಕರಣ ಪ್ರಕ್ರಿಯೆಯನ್ನು ವಿರೋಧಿಸಿ ನಿರಂತರ ಹೋರಾಟವನ್ನು ಮುನ್ನಡೆಸುವ ಸಲುವಾಗಿ ಇಂದು ನಗರದ ಕಬ್ಬನ್ ಪೇಟೆಯಲ್ಲಿರುವ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಪ್ ಇಂಡಿಯಾದ(BEFI) ಕಛೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ರತ್ನಾಕರ್ ಶಣೈರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಪರಿಣಾಮಕಾರಿಯಾದ ಪ್ರತಿಭಟನೆಗೆ ಯೋಜನೆಗಳನ್ನು ರೂಪಿಸಲಾಯಿತು.
ಈ ಸಭೆಯಲ್ಲಿ BEML, BSNL, BANK, AIIEA(LIC), BEL, VISL (ಭದ್ರಾವತಿ) ಸಂಸ್ಥೆಗಳ ಪ್ರಮುಖ ಕಾರ್ಮಿಕ ನಾಯಕರು ಭಾಗವಹಿಸಿದ್ದರು.
ಖಾಸಗೀಕರಣ ವಿರೋಧ ಸಮಿತಿಯ ನೇತೃತ್ವದಲ್ಲಿ ಮುಂದಿನ ಹೋರಾಟಗಳು ನಡೆಯಲಿದ್ದು, ಇದರಲ್ಲಿ ಖಾಸಗೀಕರಣದ ಪ್ರಸ್ತಾವಣೆಯ ಸಾರ್ವಜನಿಕ ಉದ್ಯಮಗಳ ನೌಕರರು ಒಕ್ಕೊರಲಿನಿಂದ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.
ಹೋರಾಟದ ಆರಂಭದ ಯೋಜನೆಯಾಗಿ ರಾಜ್ಯ ದುಂಡು ಮೇಜಿನ ಸಭೆ ನಡೆಯಲಿದೆ. ಮಾರ್ಚ್ 1 ರಂದು ನಿಗದಿಯಾಗಿರುವ ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯರಾದ ಎಲ್. ಹನುಮಂತಯ್ಯ ಪಾಲ್ಗೊಳ್ಳಲಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ)ನ ಮುಖಂಡರು ಭಾಗವಹಿಸುವ ಸಾಧ್ಯತೆ ಇದೆ. ಅಲ್ಲದೆ, ಸಭೆಗೆ ರಾಜ್ಯ ರೈತ ಸಂಘದ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಡಾ: ರಾಜಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರಾದ ಸಾ.ರಾ. ಗೋವಿಂದ, ಹರೀಶ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷರಾದ ಮಾವಳ್ಳಿ ಶಂಕರ್, ಲಕ್ಷ್ಮೀ ನಾರಾಯಣ ನಾಗವಾರ ರವರನ್ನು ಅಹ್ವಾನಿಸುವ ತೀರ್ಮಾನಕ್ಕೆ ಬರಲಾಗಿದೆ.
ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಲು ಎಲ್ಲಾ ಸಾರ್ವಜನಿಕ ಸಂಸ್ಥೆಗಳಿಂದ ಸೀಮಿತ ನೌಕರರನ್ನು ಮಾತ್ರ ಆಹ್ವಾನಿಸಲಾಗಿದ್ದು, BEMLನಿಂದ 75 ಜನ,
BELನಿಂದ 20 ಕಾರ್ಮಿಕರು, AIIEA ನಿಂದ 25 ನೌಕರರು, ಬ್ಯಾಂಕ್ ಗಳಿಂದ 20 ಜನ ಪ್ರತಿನಿಧಿಗಳು,
BSNL ನಿಂದ 25 ಉದ್ಯೋಗಿಗಳು, VISL ನಿಂದ 25 ನೌಕರರು ಭಾಗವಹಿಸಲಿದ್ದಾರೆ.
ಇನ್ನು, ಸಾಮಾಜಿಕ ಮಾದ್ಯಮ ಕಾರ್ಯಾಗಾರ ನಡೆಸಲು ಸಮಿತಿ ತೀರ್ಮಾನಿಸಿದ್ದು ಪೆಬ್ರವರಿ 28 ರಂದು AIIEA ಕಚೇರಿಯಲ್ಲಿ ನಡೆಯುವ ಈ ಕಾರ್ಯಗಾರಕ್ಕೆ ಉತ್ಸಾಹಿ ಯುವಕ ಯುವತಿಯರನ್ನು ಆಹ್ವಾನಿಸಲಿದ್ದು AIIEA-10, BSNL-10, BEFI-15, BEML-15, BEL-5, VISL-5 ನೌಕರರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಾಗಾರದ ಮೂಲಕ ಖಾಸಗೀಕರಣದ ವಿರೋಧವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪರಿಣಾಮಕಾರಿಯಾಗಿ ಬಿತ್ತರಿಸಿ, ದೇಶದ ಗಮನ ಸೆಳೆಯುವ ಹೊಣೆಗಾರಿಕೆ ನೀಡುವ ಸಾಧ್ಯತೆ ಇದೆ.
ಖಾಸಗಿಕರಣ ವಿರೋಧಿ ಸಮಿತಿಗೆ ಸಂಚಾಲಕರಾಗಿ ವರಲಕ್ಷ್ಮಿ, ಸಹ ಸಂಚಾಲಕರಾಗಿ ಮೀನಾಕ್ಷಿ ಸುಂದರಂ, ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಸುದರ್ಶನ್, ಗೋಪಾಲ್, ರತ್ನಾಕರ್ ಶಣೈ, ನಾಗಭೂಷಣ ರಾವ್, ಅಂತೋನೊ ಆಲ್ಪಡ್ ಪಿಂಟೊ, ಜಗದೀಶ್ ರವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ.