Take a fresh look at your lifestyle.

ಕೌಶಲ್ಯ, ಮರು ಕೌಶಲ್ಯ, ಉನ್ನತ ಕೌಶಲ್ಯಗಳನ್ನು ಹೊಂದುವಂತೆ  ಯುವಜನರಿಗೆ ಮೋದಿ ಕರೆ

ವಿಶ್ವ ಯುವ ಕೌಶಲ್ಯ ದಿನವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಭಾಷಣ ಮಾಡಿದರು.

0
post ad

ನವದೆಹಲಿ : ಬದಲಾಗುತ್ತಿರುವ ವ್ಯಾಪಾರ ವಾತಾವರಣ  ಮತ್ತು  ಮಾರುಕಟ್ಟೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು  ಯುವಕರು ಕೌಶಲ್ಯ, ಮರು ಕೌಶಲ್ಯ ಮತ್ತು ಉನ್ನತ ಕೌಶಲ್ಯ ಹೊಂದಬೇಕು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ.

ವಿಶ್ವ ಯುವ ಕೌಶಲ್ಯ ದಿನಾಚರಣೆ ಮತ್ತು ‘ಸ್ಕಿಲ್  ಇಂಡಿಯಾ’ ಮಿಷನ್‌ನ ಐದನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ನಡೆದ ಡಿಜಿಟಲ್ ಕೌಶಲ್ಯ ಸಮಾವೇಶಕ್ಕೆ ನೀಡಿದ ಸಂದೇಶದಲ್ಲಿ ಅವರು ಈ ಕರೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ದೇಶದ ಯುವಕರನ್ನು ಅಭಿನಂದಿಸಿದ ಅವರು, ಸಾರ್ವಕಾಲಿಕವಾಗಿ ಹೊಸ ಕೌಶಲ್ಯಗಳನ್ನು ಗಳಿಸುವ ಸಾಮರ್ಥ್ಯ ಹೊಂದಿರುವುದರಿಂದ ಈ ಜಗತ್ತು ಯುವಜನರಿಗೆ ಸೇರಿದೆ ಎಂದು ಹೇಳಿದರು.

ಐದು ವರ್ಷಗಳ ಹಿಂದೆ ಇದೇ ದಿನ ಪ್ರಾರಂಭಿಸಿದ  ಕೌಶಲ್ಯ ಭಾರತ ಅಭಿಯಾನ -ಸ್ಕಿಲ್ ಇಂಡಿಯಾ ಮಿಷನ್- ಕೌಶಲ್ಯ, ಮರು ಕೌಶಲ್ಯ ಮತ್ತು ಉನ್ನತ ಕೌಶಲ್ಯಕ್ಕೆ ವಿಶಾಲವಾದ ಮೂಲಸೌಕರ್ಯಗಳನ್ನು ಸೃಷ್ಟಿಸಲು ಕಾರಣವಾಗಿದೆ ಮತ್ತು ಸ್ಥಳೀಯವಾಗಿ  ಮತ್ತು ಜಾಗತಿಕವಾಗಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಈ ಅಭಿಯಾನವು ದೇಶಾದ್ಯಂತ ನೂರಾರು ಪಿಎಂ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಐಟಿಐ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಲು ಕಾರಣವಾಗಿದೆ. ಈ ಸಂಘಟಿತ ಪ್ರಯತ್ನಗಳಿಂದಾಗಿ, ಕಳೆದ ಐದು ವರ್ಷಗಳಲ್ಲಿ ಐದು ಕೋಟಿಗೂ ಹೆಚ್ಚು ಯುವಕರು ಕೌಶಲ್ಯ ಗಳಿಸಿದ್ದಾರೆ ಎಂದರು.

ಕುಶಲ ಕೆಲಸಗಾರರು ಮತ್ತು ಉದ್ಯೋಗದಾತರನ್ನು  ಗುರುತಿಸಲು ಇತ್ತೀಚೆಗೆ ಪ್ರಾರಂಭಿಸಲಾದ ಪೋರ್ಟಲ್ ಬಗ್ಗೆ ಪ್ರಸ್ತಾಪಿಸಿದ ಅವರು,  ತಮ್ಮ ಊರುಗಳಿಗೆ ಮರಳಿರುವ ವಲಸೆ ಕಾರ್ಮಿಕರು ಸೇರಿದಂತೆ ಇತರ ಕುಶಲ ಕಾರ್ಮಿಕರಿಗೆ ಸುಲಭವಾಗಿ ಉದ್ಯೋಗಗಳನ್ನು ಪಡೆಯಲು ಮತ್ತು ಉದ್ಯೋಗದಾತರು ಕುಶಲ ಕೆಲಸಗಾರರನ್ನು ಸಂಪರ್ಕಿಸಲು ಒಂದು ಕ್ಲಿಕ್ ನಲ್ಲಿ ಸಾಧ್ಯವಾಗಿದೆ ಎಂದು ಹೇಳಿದರು.  ವಲಸೆ ಕಾರ್ಮಿಕರ ಕೌಶಲ್ಯಗಳು ಸ್ಥಳೀಯ ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಅವರು ಒತ್ತಿ ಹೇಳಿದರು.

ಕೌಶಲ್ಯವು ನಮಗೆ ನಾವೇ ನೀಡಿಕೊಳ್ಳಬಹುದಾದ  ಉಡುಗೊರೆ. ಕೌಶಲ್ಯಗಳು ಕಾಲಾತೀತವಾದವು, ಅನನ್ಯವಾದವು, ಅಪರಿಮಿತ ನಿಧಿಗಳು ಮತ್ತು ಇವುಗಳು ಉದ್ಯೋಗ ಪಡೆಯುವ ಸಾಧನ ಮಾತ್ರವಲ್ಲದೆ ನೆಮ್ಮದಿಯ ಜೀವನವನ್ನು ನಡೆಸಲು ಸಹಕಾರಿಯಾಗಬಹುದು ಎಂದು ಪ್ರಧಾನಿ ಹೇಳಿದರು. ಹೊಸ ಕೌಶಲ್ಯಗಳನ್ನು ಪಡೆಯುವ ಸಹಜ ಆಕರ್ಷಣೆಯೇ ಒಬ್ಬರ ಜೀವನದಲ್ಲಿ ಹೊಸ ಶಕ್ತಿ  ಮತ್ತು ಹುರುಪನ್ನು ತುಂಬುತ್ತದೆ.

ಕೌಶಲ್ಯಗಳು ಜೀವನೋಪಾಯಕ್ಕೆ ಮಾತ್ರವಲ್ಲದೆ ನಮ್ಮ ದಿನನಿತ್ಯದ ಜೀವನದಲ್ಲಿ ಉತ್ಸಾಹಭರಿತ ಮತ್ತು ಚೇತೋಹಾರಿ ಭಾವನೆಯನ್ನು ಹೊಂದಲು ಕಾರಣವಾಗಿವೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿಯವರು ತಮ್ಮ ಭಾಷಣದಲ್ಲಿ ‘ಜ್ಞಾನ’ಮತ್ತು ‘ಕೌಶಲ್ಯ’ದ ನಡುವಿನ ವ್ಯತ್ಯಾಸವನ್ನು  ಉದಾಹರಣೆ ಸಮೇತ ವಿವರಿಸಿದರು. ಸೈಕಲ್ ಹೇಗೆ ಚಲಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ‘ಜ್ಞಾನ’. ಸೈಕಲ್ ತುಳಿಯುವುದು ಒಂದು ‘ಕೌಶಲ್ಯ’. ಇವೆರಡರ ನಡುವಿನ ವ್ಯತ್ಯಾಸ ಮತ್ತು ಅವುಗಳ ವಿಭಿನ್ನ ಸಂದರ್ಭಗಳು ಮತ್ತು ಪರಿಣಾಮಗಳ ಬಗ್ಗೆ ಯುವಕರು ಅರಿತುಕೊಳ್ಳುವುದು ಬಹಳ ಮುಖ್ಯ.  ಮರಗೆಲಸದ ಒಂದು ಉದಾಹರಣೆಯೊಂದಿಗೆ, ಅವರು ಕೌಶಲ್ಯ, ಮರುಕೌಶಲ್ಯಮತ್ತು ಉನ್ನತ ಕೌಶಲ್ಯಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ವಿವರಿಸಿದರು.

ದೇಶದಲ್ಲಿ ಲಭ್ಯವಿರುವ ಕೌಶಲ್ಯ ಅವಕಾಶಗಳನ್ನು  ಬಳಸಿಕೊಳ್ಳಲು ಇರುವ ಸಾಮರ್ಥ್ಯದ ಬಗ್ಗೆ ಪ್ರಧಾನಿ ಹೇಳಿದರು. ಆರೋಗ್ಯ ಕ್ಷೇತ್ರದ ಜಾಗತಿಕ ಬೇಡಿಕೆಯನ್ನು ಪೂರೈಸಬಲ್ಲ ಭಾರತದ ನುರಿತ ಮಾನವಶಕ್ತಿಯ ಉದಾಹರಣೆಯನ್ನು ಅವರು ನೀಡಿದರು. ಈ  ಬೇಡಿಕೆಯನ್ನು ಗುರುತಿಸುವ ಮತ್ತು ಭಾರತದ ಮಾನದಂಡಗಳನ್ನು ಇತರ ದೇಶಗಳೊಂದಿಗೆ ಹೊಂದಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.  ಅದೇ ರೀತಿ, ಸುದೀರ್ಘ ಸಮಯದ ಸಾಗರ ಸಂಬಂಧ ಹೊಂದಿರುವ ಭಾರತೀಯ ಯುವಕರು ಈ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ವಿಶ್ವದಾದ್ಯಂತ ವ್ಯಾಪಾರಿ ನೌಕಾಪಡೆಗಳಿಗೆ ಪರಿಣಿತ ನಾವಿಕರಾಗಿ ಕೊಡುಗೆ ನೀಡಬಹುದು ಎಂದು ಅವರು ಸಲಹೆ ನೀಡಿದರು.

ಪ್ರತೀ ವರ್ಷ ಜುಲೈ 15 ರಂದು ಆಚರಿಸಲಾಗುವ ವಿಶ್ವ ಯುವ ಕೌಶಲ್ಯ ದಿನವನ್ನು ಈ ವರ್ಷ ವರ್ಚುವಲ್  ಮಾದರಿಯಲ್ಲಿ ಆಚರಿಸಲಾಯಿತು. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಮಹೇಂದ್ರ ನಾಥ್ ಪಾಂಡೆ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಶ್ರೀ ಆರ್.ಕೆ.ಸಿಂಗ್ ಮತ್ತು ಲಾರ್ಸೆನ್ ಮತ್ತು ಟೂಬ್ರೊ ಲಿಮಿಟೆಡ್‌ನ ಸಮೂಹ ಅಧ್ಯಕ್ಷರಾದ ಶ್ರೀ ಎ.ಎಂ.ನಾಯಕ್ ಅವರು ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ತರಬೇತಿ ಪಡೆಯುತ್ತಿರುವ ಲಕ್ಷಾಂತರ ಮಂದಿ ಸೇರಿದಂತೆ ಈ ವ್ಯವಸ್ಥೆಯ ಎಲ್ಲಾ ಪಾಲುದಾರರು ಸಮಾವೇಶದಲ್ಲಿ ಭಾಗವಹಿಸಿದರು.

.ಹಿನ್ನಲೆ

ಭಾರತ ಸರ್ಕಾರ ದೇಶದಲ್ಲಿನ ಯುವಜನರನ್ನು ಕೌಶಲ್ಯ ಮತ್ತು ಉದ್ಯೋಗಕ್ಕೆ ಅರ್ಹವಾದ ಕೌಶಲ್ಯ ಹೊಂದಿದವರನ್ನಾಗಿ ಸಬಲೀಕರಣ ಮಾಡಲು ಮತ್ತು ಅವರನ್ನು ಹೆಚ್ಚು ಉಪಯುಕ್ತವನ್ನಾಗಿ ಮಾಡಲು ಮತ್ತು ದುಡಿಯಲು ಸೂಕ್ತ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸ್ಕಿಲ್ ಇಂಡಿಯಾ (ಕೌಶಲ್ಯ ಭಾರತ) ಕಾರ್ಯಕ್ರಮವನ್ನು ಆರಂಭಿಸಿದೆ. ಸ್ಕಿಲ್ ಇಂಡಿಯಾ ಅಡಿಯಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ನೀತಿಗೆ ಅನುಗುಣವಾಗಿ ಉದ್ಯಮ ಮತ್ತು ಸರ್ಕಾರದ ಎರಡೂ ಮಾನದಂಡಗಳನ್ನು ಅನುಸರಿಸಿ ಹಲವು ವಲಯಗಳಲ್ಲಿ ನಾನಾ ಬಗೆಯ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಈ ಕೋರ್ಸ್ ಗಳು ವಾಸ್ತವಿಕವಾಗಿ ಕೆಲಸವನ್ನು ಪೂರ್ಣಗೊಳಿಸಲು ವ್ಯಕ್ತಿಗೆ ಹೆಚ್ಚಿನ ಗಮನಹರಿಸಲು ನೆರವಾಗುವುದಲ್ಲದೆ, ಆತನ ತಾಂತ್ರಿಕ ಪರಿಣಿತಿಯನ್ನು ಹೆಚ್ಚಿಸಿಕೊಳ್ಳಲು ಆ ಮೂಲಕ ಆತ ತನ್ನ ಉದ್ಯೋಗಕ್ಕೆ ಅರ್ಹವಾದ ಕೌಶಲ್ಯದೊಂದಿಗೆ ಸಿದ್ಧವಾಗಲು ಸಹಾಯಕವಾಗುತ್ತದೆ ಮತ್ತು ಇದರಿಂದ ಕಂಪನಿಗಳು ಉದ್ಯೋಗಿಗಳ ವೃತ್ತಿ ತರಬೇತಿ ನೀಡಲು ಹೆಚ್ಚಿನ ಹಣ ಹೂಡಿಕೆ ಮಾಡಬೇಕಾಗಿಲ್ಲ.