ಮತ್ತಷ್ಟು ಟೊಯೋಟಾ ಕಾರ್ಮಿಕರ ಅಮಾನತ್ತು
ಆಡಳಿತ ವರ್ಗದ ಆದೇಶಗಳಿಗೆ, ಕಾರ್ಯಚಟುವಟಿಕೆಗಳಿಗೆ ಮಾತ್ರ ಅಂಗೀಕೃತ ಸ್ಥಾಯೀ ಆದೇಶಗಳು ಅನ್ವಯವಾಗುತ್ತವೆ. ಅದೇ ಕಾರ್ಮಿಕ ವರ್ಗದ ಕಡೆಯಿಂದ ಧ್ವನಿ ಎತ್ತಿದಾಗ ಅಂಗೀಕೃತ ಸ್ಥಾಯೀ ಆದೇಶಗಳು ಶೂನ್ಯವಾಗುತ್ತವೆ ಎನ್ನುತ್ತಿದ್ದಾರೆ ಕಾರ್ಮಿಕರು


ರಾಮನಗರ: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯ ಆಡಳಿತ ಮಂಡಳಿ ಮತ್ತಷ್ಟು ನೌಕರರನ್ನು ಅಮಾನತ್ತು ಮಾಡಿದೆ. ಒಬ್ಬ ಕಾರ್ಮಿಕನ ಅಮಾನತ್ತುನಿಂದ ಆರಂಭವಾದ ಈ ಪರಂಪರೆ ಇದೀಗ ಅರವತ್ತಾರಕ್ಕೆ ಬಂದು ನಿಂತಿದೆ. ಮುಂದಿನ ದಿನಗಳಲ್ಲಿ ಬಹುತೇಕ ಕಾರ್ಮಿಕರು ಈ ಅಮಾನತ್ತಿನ ಸುಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ, ಅದು ಕಾರ್ಮಿಕರೆಲ್ಲರಿಗೂ ಗೊತ್ತಿರುವ ಕಟು ಸತ್ಯ.
ಸತತ ಗೈರು ಹಾಗೂ ದುರ್ನಡತೆ ಆರೋಪದ ಮೇಲೆ ತನ್ನ ಆರು ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿರುವ ಮಾಹಿತಿ ಹೊರ ಬಂದಿದೆ.
ಈ ವಿಚಾರವಾಗಿ ಆಡಳಿತ ಮಂಡಳಿ ನೋಟಿಸ್ ಮೂಲಕ ವಿವರಣೆ ನೀಡಿದೆ. ‘ನಾಲ್ವರು ಕಾರ್ಮಿಕರು ಸೇವೆಗೆ ಸತತ ಗೈರಾಗುತ್ತಿದ್ದರು. ನೋಟಿಸ್ ನೀಡಿದ್ದರೂ ಅವರು ತಿದ್ದಿಕೊಂಡಿರಲಿಲ್ಲ. ಅಂತೆಯೇ ಇಬ್ಬರು ಕಾರ್ಮಿಕರು ಕಂಪನಿಯ ಇತರರೊಂದಿಗೆ ದುರ್ನಡತೆ ತೋರುತ್ತಿದ್ದರು. ಈ ಎಲ್ಲ ಆರೋಪಗಳ ತನಿಖೆಗೆ ಸ್ವತಂತ್ರ ಸಮಿತಿಯನ್ನು ರಚಿಸಲಾಗಿತ್ತು. ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಈ ಆರೂ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ’ ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಅಂಗೀಕೃತ ಸ್ಥಾಯೀ ಆದೇಶಗಳ ಅನ್ವಯ ಕಾರ್ಮಿಕರನ್ನು ಅಮಾನತ್ತು ಮಾಡಲಾಗಿದೆ ಎಂದು ಮ್ಯಾನೇಜ್ಮೆಂಟ್ ಹೇಳುತ್ತಿದೆ. ಆಡಳಿತ ವರ್ಗದ ಆದೇಶಗಳಿಗೆ, ಕಾರ್ಯಚಟುವಟಿಕೆಗಳಿಗೆ ಮಾತ್ರ ಅಂಗೀಕೃತ ಸ್ಥಾಯೀ ಆದೇಶಗಳು ಅನ್ವಯವಾಗುತ್ತವೆ. ಅದೇ ಕಾರ್ಮಿಕ ವರ್ಗದ ಕಡೆಯಿಂದ ಧ್ವನಿ ಎತ್ತಿದಾಗ ಅಂಗೀಕೃತ ಸ್ಥಾಯೀ ಆದೇಶಗಳು ಶೂನ್ಯವಾಗುತ್ತವೆ. ಇದು ಎಂತಹ ನ್ಯಾಯ ಎಂದು ಕಾರ್ಮಿಕ ಸಂಘ ಪ್ರಶ್ನಿಸಿದೆ.
‘ಕಾರ್ಮಿಕರ ಪ್ರತಿಭಟನೆಯ ಸಂದರ್ಭದಲ್ಲಿ ನಮ್ಮನ್ನು ಬೆದರಿಸುವ ಸಲುವಾಗಿಯೇ ಹಳೆಯ ಪ್ರಕರಣಗಳಲ್ಲಿ ಹಲವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಆಡಳಿತ ವರ್ಗ ಅಮಾನತ್ತು ಪರಂಪರೆ ಮುಂದುವರೆಸಲಿ, ನಾವು ಅದಕ್ಕೆಲ್ಲ ಹೆದರದೇ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದೆ.