Take a fresh look at your lifestyle.

ಟೊಯೋಟಾ ಬಿಕ್ಕಟ್ಟಿಗೆ ಗಡುವು ನೀಡಿದ ಸಂಸದರು

ಟೊಯೋಟ ಆಡಳಿತ ವರ್ಗಕ್ಕೆ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಸಂಸದ ಡಿ.ಕೆ ಸುರೇಶ್ ಅಂತಿಮ ಗಡುವು ನೀಡಿದ್ದಾರೆ. ಬಿಕ್ಕಟ್ಟು ಶೀಘ್ರದಲ್ಲಿ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ತಾವೇ ಸ್ವತಃ ಪ್ರತಿಭಟನೆಯಲ್ಲಿ ಕೂರುವುದಾಗಿ ಘೋಷಿಸಿದ್ದಾರೆ.

0
post ad

ರಾಮನಗರ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ನ ಕಾರ್ಮಿಕ ಸಂಘದ ಸ್ವಾಭಿಮಾನಿ ಹೋರಾಟಕ್ಕೆ ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ ಸುರೇಶ್ ರವರು ಬೆಂಬಲ ನೀಡಿ, ಆಡಳಿತ ಮಂಡಳಿ ಮತ್ತು ಸರ್ಕಾರಕ್ಕೆ ಗಡುವು ನೀಡಿದರು.
ಕಾರ್ಮಿಕರ ಪ್ರತಿಭಟನೆ 45ನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಿದ ಸ್ಥಳೀಯ ಸಂಸದರು ಆಡಳಿತ ವರ್ಗದ ಅಧಿಕಾರಿಗಳ ಜೊತೆಗೆ ಇಂದು ಈಗಲ್ ಟನ್‌ ರೆಸ್ಟೋರೆಂಟ್ ನಲ್ಲಿ ಸಭೆ ನಡೆಸಿದರು.

ಈ ವೇಳೆ ಕಾರ್ಮಿಕರ ಸಮಸ್ಯೆಗಳನ್ನು ಶೀಘ್ರವಾಗಿ ಮುಖಂಡರುಗಳ ಜೊತೆ ಮಾತುಕತೆ ಮಾಡಿ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚಿಸಿದರು. ಆಡಳಿತವರ್ಗದ ಹಠಮಾರಿ ಧೋರಣೆಯ ವಿರುದ್ಧ ಸಂಸದರು ಮಾತನಾಡಿ ದೇಶದಲ್ಲಿ ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ಮಾಡುತ್ತಿದ್ದು ಅದಕ್ಕೆ ಬುನಾದಿಯಾಗಿ ಟೊಯೋಟ ಸಂಸ್ಥೆ ನಡೆದುಕೊಳ್ಳುತ್ತಿದೆ ಎಂದರು. ಇಲ್ಲಿನ ಕಾರ್ಮಿಕರು ಅನುಭವಿಸುತ್ತಿರುವ ಕಿರುಕುಳ ಮತ್ತು ಸಮಸ್ಯೆಗಳು ನಮ್ಮ ಅರಿವಿಗೂ ಇದೆ ಹಾಗಾಗಿ ಸಂಸ್ಥೆಯ ಮುಖ್ಯಸ್ಥರಿಗೆ ಮಾತನಾಡಿ ಅಂತಿಮ ಗಡುವು ನೀಡಿದ್ದೇನೆ ಎಂದರು.

ಸ್ವತಃ ತಾನೇ ಪ್ರತಿಭಟನೆಯಲ್ಲಿ ಕೂರುತ್ತೇನೆ …

ಟೊಯೋಟಾ ಸಂಸ್ಥೆ ಇಂದು ವಿಶ್ವಮಟ್ಟಕ್ಕೆ ಬೆಳೆಯಲು ಕಾರ್ಮಿಕರ ಬೆವರಿನ ಹನಿಯೇ ಕಾರಣ, ಆಡಳಿತವರ್ಗ ಇದನ್ನು ಅರಿತು ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ನಮ್ಮ ನೆಲದ ಕಾನೂನುಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ಬೆಲೆ ನೀಡಬೇಕು. ಅಕ್ರಮವಾಗಿ ಅಮಾನತು ಮಾಡಿರುವ ಎಲ್ಲ ಕಾರ್ಮಿಕರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಂಡು ನಂತರ ಕಾರ್ಮಿಕ ಸಂಘದ ಜೊತೆ ಮಾತುಕತೆ ಮುಂದುವರಿಸಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಾವೇ ಸ್ವತಃ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಎಚ್ಚರಿಸಿದರು.
ಇನ್ನು, ಕೊರಟಗೆರೆ ಮಾಜಿ ಶಾಸಕರಾದ ಸುಧಾಕರ್ ಲಾಲ್ ಅವರು ಕಾರ್ಮಿಕ ಸಂಘದ ಹೋರಾಟದ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು.
ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು ಇಂದು 66 ಕಾರ್ಮಿಕರ ಅಮಾನತ್ತು, 45 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.