Take a fresh look at your lifestyle.

ರಾಜ್ಯಾದ್ಯಂತ ಕಾರ್ಮಿಕರಿಂದ ಸಾರ್ವತ್ರಿಕ ಮುಷ್ಕರ ಆರಂಭ

ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿರುವ ಮುಷ್ಕರವು ಸಂಜೆ 6 ಗಂಟೆವರೆಗೂ ಮುಂದುವರೆಯಲಿದೆ

0
post ad

ಬೆಂಗಳೂರು: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಹಾಗೂ ಜನವಿರೋಧಿ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಸಾರ್ವತ್ರಿಕ ರಾಷ್ಟ್ರೀಯ ಮುಷ್ಕರದ ಅಂಗವಾಗಿ ರಾಜ್ಯಾದ್ಯಂತ  ಕಾರ್ಮಿಕರು  ಮುಷ್ಕರ ನಡೆಸುತ್ತಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿರುವ ಮುಷ್ಕರವು ಸಂಜೆ  6 ಗಂಟೆವರೆಗೂ ಮುಂದುವರೆಯಲಿದೆ.

ಬೆಂಗಳೂರಿನಲ್ಲಿ ಕೆಲವೆಡೆ ಆಟೋರಿಕ್ಷಾ, ಟ್ಯಾಕ್ಸಿ ಸಂಚಾರ ಸ್ಥಗಿತಗೊಂಡಿದ್ದು, ವಿರಳ ಪ್ರಮಾಣದಲ್ಲಿ ಸಂಚಾರ ಗೋಚರಿಸುತ್ತಿದೆ. ಹಲವು ಆಟೋರಿಕ್ಷಾ, ಟ್ಯಾಕ್ಸಿ  ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸುತ್ತಿವೆ.

‘ಪೀಣ್ಯ, ದಾಬಸ್‌ಪೇಟೆ, ವೈಟ್‌ಫೀಲ್ಡ್, ಜಿಗಣಿ, ಬೊಮ್ಮಸಂದ್ರ, ರಾಜಾಜಿನಗರ ಸೇರಿ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿನ ಕಾರ್ಖಾನೆಗಳು ಬಂದ್ ಆಗಿದ್ದು, ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಇಂದು ರಾಜಧಾನಿಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳಲ್ಲಿ ಕಾರ್ಮಿಕರು ಉತ್ಸುಕತೆ ತೋರುತ್ತಿದ್ದಾರೆ.
ಬೆಳಿಗ್ಗೆ 10.30ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನಾ ಸಭೆ ನಡೆಸಲಾಗುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರ್ಮಿಕರು ಸಿದ್ದತೆಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಜೊತೆಗೆ ರೈತ ಮತ್ತು ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ.
ಕಾರ್ಮಿಕ ಸಂಘಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು ದೇಶಾದ್ಯಂತ ಲಕ್ಷಾಂತರ ಬ್ಯಾಂಕ್ ಉದ್ಯೋಗಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
ಸಾರ್ವತ್ರಿಕ ಮುಷ್ಕ್ರರದಲ್ಲಿ ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಹಿಂದ್ ಮಜ್ದೂರ್ ಸಭಾ (ಎಚ್‌ಎಂಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಟಿಯುಸಿ), ಟ್ರೇಡ್ ಯೂನಿಯನ್ ಸಮನ್ವಯ ಕೇಂದ್ರ (ಟಿಯುಸಿಸಿ), ಸ್ವ-ಉದ್ಯೋಗ ಮಹಿಳಾ ಸಂಘ (ಸೆವಾ), ಅಖಿಲ ಭಾರತ ಕೇಂದ್ರ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು), ಕಾರ್ಮಿಕ ಪ್ರಗತಿಪರ ಒಕ್ಕೂಟ (ಎಲ್‌ಪಿಎಫ್) ಮತ್ತು ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಯುಟಿಯುಸಿ) ಮುಂತಾದ ಸಂಘಟನೆಗಳು ಮತ್ತು ಅವುಗಳ ಸಮ್ಮಿಳಿತ ಸಂಘಟನೆಗಳು ಸೇರಿ ದೇಶಾದ್ಯಂತ 25 ಕೋಟಿ ಜನರು ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ.