Take a fresh look at your lifestyle.

ಸೋಪ್ ಫ್ಯಾಕ್ಟರಿಯಲ್ಲಿನ ಅಕ್ರಮ ಹಗರಣಗಳ ತನಿಖೆಗೆ ಆದೇಶ

ಕೆಎಸ್&ಡಿಎಲ್ ಪ್ರತಿ ಕನ್ನಡಿಗನ ಹೆಮ್ಮೆ, ಇದರ ಉಳಿವು ಮತ್ತು ಅಭಿವೃದ್ಧಿಯ ಜವಾಬ್ದಾರಿ ಪ್ರತಿ ನಾಗರೀಕನ ಮೇಲೂ ಇದೆ. ಈ ಕಾರ್ಖಾನೆಯ ಕಾರ್ಮಿಕ‌ ಸಂಘ ಇದರ ಉಳಿವಿಗಾಗಿ ನಿರಂತರವಾಗಿ ಹೋರಾಟವನ್ನು ಮಾಡಿಕೊಳ್ಳುತ್ತಲೆ ಬಂದಿದೆ. ಯುನಿಯನ್ ನ ಪಯತ್ನಕ್ಕೆ ಇದೀಗ ಪ್ರತಿಫಲ ಸಿಕ್ಕಿದ್ದು ಸರ್ಕಾರ ಸಂಸ್ಥೆಯಲ್ಲಿ ನಡೆದಿರುವ ಅಕ್ರಮಗಳ ಬಗೆಗೆ ದಿಟ್ಟ ಕ್ರಮ ಕೈಗೊಂಡಿದೆ

0
post ad

ಬೆಂಗಳೂರು : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ಕಚ್ಚಾ ಸಾಮಗ್ರಿಯಾದ ನೂಡಲ್ಸ್‌ ಖರೀದಿಯಲ್ಲಿ ರೂ.20.00 ಕೋಟಿಗೂ ಅಧಿಕ ಅವ್ಯವಹಾರದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ವಿಚಾರಣೆ  ಮತ್ತು ತನಿಖೆ ನಡೆಸುವ ಸಲುವಾಗಿ ಸರ್ಕಾರ ತನಿಖಾ/ವಿಚಾರಣಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ(ಸೇವೆಗಳು, ಸಿ&ಸಿ ಮತ್ತು ಸಮನ್ವಯ) ಸರ್ಕಾರದ ವಿಶೇಷ ಕಾರ್ಯದರ್ಶಿ ತನಿಖೆಗೆ ಆದೇಶ ಹೊರಡಿಸಿದ್ದಾರೆ. 10 ದಿನಗಳ ಒಳಗೆ ಪ್ರಾಥಮಿಕ ವರದಿಯನ್ನು ಸಲ್ಲಿಸಲು ತನಿಖಾಧಿಕಾರಿಗೆ ಸೂಚಿಸಲಾಗಿದೆ.
ಕೆ.ಎಸ್‌. & ಡಿ.ಎಲ್‌.ಎಂಪ್ಲಾಯಿಸ್‌ ಯೂನಿಯನ್‌
ಹಾಗೂ ಆಡಳಿತ ಮಂಡಳಿಯ ಸದಸ್ಯರು ಕಾರ್ಖಾನೆಯಲ್ಲಿ ನಡೆದಿರುವ ಭ್ರಷ್ಟಾಚಾರ, ಅವ್ಯವಹಾರಗಳ ಬಗೆಗೆ ನಿರಂತರವಾಗಿ ಧ್ವನಿ ಎತ್ತಿದ್ದರು.
ಈ ಹಿಂದೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯಲ್ಲಿ ನೇಮಕಾತಿ ಪಡೆಯುವಾಗ ಮಾನ್ಯತೆ ಪಡೆಯದ ವಿಶ್ವ ವಿದ್ಯಾಲಯದಿಂದ ಪಡೆದ ಪದವಿ ಪ್ರಮಾಣ ಪತ್ರಗಳನ್ನು ನೀಡಿ ಉನ್ನತ ಹುದ್ದೆಗೆ ನೇಮಕಾತಿ ಹೊಂದಿರುವ ಆಪಾದನೆ ಬಗೆಗೆ ತನಿಖೆ ನಡೆಸಲು ನೇಮಕಗೊಂಡಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಕೆ.ಎಂ. ತಮ್ಮಯ್ಯರವರು ತನಿಖೆ ನಡೆಸಿ ತಮ್ಮ ವರದಿಯಲ್ಲಿ ಹಲವು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಪಾರಸ್ಸು ಮಾಡಿದ್ದರು.
ಕೆ.ಎಸ್‌. & ಡಿ.ಎಲ್‌ ಸಂಸ್ಥೆಯಲ್ಲಿ ಭ್ರಷ್ಟ ಹಾಗು ಅಕ್ರಮಗಳ
15 ಅಂಶಗಳ ಬಗೆಗೆ ತನಿಖೆ ನಡೆಸಲು ಮುಖ್ಯಮಂತ್ರಿಗಳು
ಸರ್ಕಾರದ ಹಂತದಲ್ಲಿ ತನಿಖೆಯನ್ನು ಕೈಗೊಂಡು 15 ದಿನಗಳೊಳಗಾಗಿ ವರದಿ ಸಲ್ಲಿಸಲು ಸೂಚಿಸಿದ್ದರು. ಈ 15 ಅಂಶಗಳ ಬಗೆಗೆ ‘ವಾಯ್ಸ್ ಆಫ್ ವರ್ಕರ್ಸ್’ ಸಹ ಸುದ್ದಿಯನ್ನು ಪ್ರಕಟ ಮಾಡಿತ್ತು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ವಿಶೇಷ ಕಾರ್ಯದರ್ಶಿಗಳಾದ ಜಗನ್ಮಾತ ರವರು, ಕೆಎಸ್&ಡಿಎಲ್ ನ ಅಕ್ರಮ, ಭ್ರಷ್ಟಾಚಾರದ ಬಗ್ಗೆ ತನಿಖೆ / ವಿಚಾರಣೆ ನಡೆಸಿ ವರದಿ ನೀಡಲು ಶ್ರೀಮತಿ ಗುಂಜನ್‌ ಕೃಷ್ಣ ಐಎಎಸ್ ಕೈಗಾರಿಕಾಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಇವರನ್ನು ತನಿಖಾಧಿಕಾರಿ / ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.

ಯಾವ ವಿಷಯಗಳ ಬಗೆಗೆ ತನಿಖೆ ಎಂದರೆ…

* ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ಕಚ್ಚಾ ಸಾಮಗ್ರಿಯಾದ ಸೋಪ್‌ ನೂಡಲ್ಸ್‌ ಖರೀದಿಯಲ್ಲಿ ರೂ.20.00 ಕೋಟಿಗೂ ಅಧಿಕ ಅವ್ಯವಹಾರ ಕಂಡು ಬಂದಿರುವ ಬಗ್ಗೆ, ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ಬಂದಿರುವ ಆಪಾದನೆಗಳ ಬಗ್ಗೆ
*  ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ನೇಮಕಾತಿ ನಡೆಯುವಾಗ ಮಾನ್ಯತೆ ಪಡೆಯದ ವಿಶ್ವವಿದ್ಯಾಲಯದಿಂದ ಪಡೆದ ಪದವಿ ಪ್ರಮಾಣ ಪತ್ರಗಳನ್ನು ನೀಡಿ ಉನ್ನತ ಹುದ್ದೆಗೆ ನೇಮಕಾತಿ ಹೊಂದಿರುವ ಎಲ್.ಡಿ ಲಕ್ಷ್ಮಣ, ಸಹಾಯಕ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ),
ಶ್ರೀಮತಿ ಸುಷ್ಮಾ, ನಿರ್ವಾಹಕರು (ಮಾರುಕಟ್ಟೆ),  ನವರಾಜ, ಸಹಾಯಕ ನಿರ್ವಾಹಕರು, ಪ್ರಕಾಶ, ಕಿರಿಯ ಕಲ್ಯಾಣ ಅಧಿಕಾರಿ ಇವರುಗಳ ವಿರುದ್ಧ ನಿವೃತ್ತ ಜಿಲ್ಲಾ ನ್ಯಾಯಾಧೀಶರು ನೀಡಿರುವ ವರದಿ ಬಗ್ಗೆ ಕೈಗೊಂಡ ಕ್ರಮಗಳು.
*  ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧಿಕಾರಿಗಳಾದ  ಜಿ.ಎಸ್‌.ಭಟ್‌,  ಕೆ.ಅಂಜನಪ್ಪ ಮತ್ತು  ಪಿ.ಕೆ.ಶ್ಯಾನ್‌ಬಾಗ್‌ ಇವರುಗಳ ವಿರುದ್ಧ ಲೋಕಾಯುಕ್ತರು ನೀಡಿರುವ ವರದಿಯಂತೆ ಇವರುಗಳು ಸಂಸ್ಥೆಗೆ ಕಟ್ಟಬೇಕಿರುವ ಹಣ ವಸೂಲಾತಿ ಬಗ್ಗೆ ಕೈಗೊಂಡ ಕ್ರಮಗಳು.
*  ಸಿ.ಎಂ.ಸುವರ್ಣ ಕುಮಾರ್‌, ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಇವರು ಸಂಸ್ಥೆಗೆ ಅರ್ಹತೆ ಇಲ್ಲದ ಪದವಿ ಪ್ರಮಾಣ ಪತ್ರಗಳನ್ನು ನೀಡಿ ಮುಂಬಡ್ತಿ ಹೊಂದಿರುವುದರ ಬಗ್ಗೆ ಹಾಗೂ ಇವರ ವಿರುದ್ಧದ ಇತರ ಆರೋಪಗಳ ಬಗ್ಗೆ ತನಿಖೆ ನಡೆಸಲು.
*  ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಬೆಂಗಳೂರು ಕಾರ್ಖಾನೆಯ ಆವರಣದಲ್ಲಿ ಕೆ.ಎಂ.ಎಫ್‌. ಉತ್ಪನ್ನಗಳನ್ನು ಮಾರಾಟ ಮಾಡಲು 1450 ಚದರ ಅಡಿ ಜಾಗಕ್ಕೆ 10 ವರ್ಷಗಳ ಅವಧಿಗೆ ಲೀಸ್‌ ಒಪ್ಪಂದವಾಗಿರುತ್ತದೆ, ಆದರೆ, ಆಡಳಿತ ವರ್ಗದ ಅಧಿಕಾರಿಗಳು ಶಾಮೀಲಾಗಿ ಸದರಿ ಸ್ಥಳದಲ್ಲಿ 3000 ಚದರ ಅಡಿ ಜಾಗವನ್ನು ಖಾಸಗಿಯವರು ಹೋಟೆಲ್‌ ನಡೆಸುತ್ತಿರುವ ಬಗ್ಗೆ.

*  ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವಿರುದ್ಧ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವ ಕರ್ನಾಟಕ ಅರೋಮ ಕಂಪನಿಯಿಂದಲೇ 13 ಸಾವಿರ ಮೆಟ್ರಿಕ್‌ ಟನ್‌ ನೂಡಲ್ಸ್‌ ಖರೀದಿಸಿರುವ ಬಗ್ಗೆ ಹಾಗೂ ಒಂದೇ ಕುಟುಂಬದ ಸದಸ್ಯರು ನಡೆಸುತ್ತಿರುವ ಈ ಸಂಸ್ಥೆಯು ಸರಬರಾಜು ಮಾಡುತ್ತಿರುವ ಕಚ್ಚಾ ಸಾಮಗ್ರಿಗಳ ಗುಣಮಟ್ಟದ
ಬಗ್ಗೆ.