ಚೆನ್ನೈನಲ್ಲಿ ಟಿಕೆಎಂ ಕಾರ್ಮಿಕರ ಪರ ಪ್ರತಿಭಟನೆ
ಪೆರಂಬೂರು ವೃತ್ತದಲ್ಲಿ ಬಿಎಂಡಬ್ಲ್ಯೂ, ಫೋರ್ಡ್, ನಿಸ್ಸಾನ್, ಹುಂಡಾಯ್ ಕಂಪೆನಿ ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಧರಣಿಯನ್ನು ಕೈಗೊಂಡಿದ್ದರೆ, ಇತ್ತ ಬಿಡದಿಯಲ್ಲಿ ಕಾರ್ಮಿಕ ಚುನಾಯಿತ ಪ್ರತಿನಿಧಿಗಳು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ


ಚೆನ್ನೈ: ಟಿಕೆಎಂ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ದಿನ ಕಳೆದಂತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಹೋರಾಟಗಾರರು ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕ ಸಂಘದ 57 ನೇ ದಿನದ ಹೋರಾಟದ ಭಾಗವಾಗಿ ಇಂದು ತಮಿಳುನಾಡಿನ ಶ್ರೀ ಪೆರಂಬದೂರ್ ಕೈಗಾರಿಕಾ ಪ್ರದೇಶದಲ್ಲಿ Hyundai, Ford, Nissan, BMW, Apollo, J K Tyres, Valeo, Yamaha, Bray Controls, Asahi India Glass Works ಕಂಪನಿಗಳ ಕಾರ್ಮಿಕರು TKMEU ಕಾರ್ಮಿಕರ ಪರವಾಗಿ ಪ್ರತಿಭಟನೆ ನಡೆಸಿದರು. ದಕ್ಷಿಣ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಒಕ್ಕೂಟ ರಚಿಸಿ ಮುಂದಿನ ದಿನದಲ್ಲಿ ಟೊಯೋಟಾ ಕಾರ್ಮಿಕರ ಪರವಾಗಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಮಾಜಿ ಶಾಸಕರಾದ ಸೌಂದರ್ ರಾಜನ್ ಭಾಗವಹಿಸಿ ಬೆಂಬಲ ನೀಡಿದರು.
ಬಿಡದಿ ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕ ಸಂಘದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಮಿಕ ಇಲಾಖೆಯು ವಸ್ತುಸ್ಥಿತಿ ಅರಿಯಲು ಕಾರ್ಖಾನೆಯನ್ನು ಪರಿಶೀಲನೆ ಮಾಡದೆ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವುದರಿಂದ, ದಕ್ಷಿಣ ಭಾರತದ ಆಟೋಮೊಬೈಲ್ಸ್ ಒಕ್ಕೂಟವು ಸಿಐಟಿಯು ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಚೆನ್ನೈನ ಶ್ರೀ ಪೆರಂಬೂರು ಕೈಗಾರಿಕಾ ಪ್ರದೇಶದಲ್ಲಿ ಪ್ರತಿಭಟನೆ ಕೈಗೊಂಡಿದೆ.
ದಕ್ಷಿಣ ಭಾರತದ ಕಾರು, ಟೈರ್ ತಯಾರಿಕಾ ಕಂಪೆನಿಗಳ ಕಾರ್ಮಿಕ ಸಂಘಗಳ ಒಕ್ಕೂಟವು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆಯ ದಿನದಂದು ಟಿಕೆಎಂ ಕಾರ್ಮಿಕ ಪರ ಮುಂದಿನ ಹೋರಾಟದ ರೂಪರೇಶೆಗಳ ಬಗೆಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದು, ದಕ್ಷಿಣ ಭಾರತದ ಎಲ್ಲಾ ರಾಜಧಾನಿಗಳಿಗೂ ಹೋರಾಟವನ್ನು ಹರಡಿಸುವ ಯೋಜನೆಗೆ ಚಾಲನೆ ನೀಡುವ ಸಾಧ್ಯತೆಗಳು ಇದೆ.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಖಾನೆ ಮುಂಭಾಗ ಸಂಸ್ಥೆಯ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸುತ್ತಾ, ಕಾರ್ಮಿಕರು ನಡೆಸುತ್ತಿರುವ ಸ್ವಾಭಿಮಾನಿ ಹೋರಾಟ 57ನೇ ದಿನಕ್ಕೆ ಕಾಲಿಟ್ಟಿದೆ.
ಟೊಯೋಟಾ ಕಿಲೋಸ್ಕರ್ ಮೋಟಾರ್ ಕಂಪೆನಿ ಆಡಳಿತ ವರ್ಗ ನಡೆಸುತ್ತಿರುವ ಕಾರ್ಮಿಕರ ಮೇಲಿನ ಶೋಷಣೆ ಮತ್ತು ದಬ್ಬಾಳಿಕೆ ಕಾರ್ಮಿಕರಿಗೆ ಮಾಡು ಇಲ್ಲವೇ ಮಡಿ ಎಂಬ ದುಸ್ಥಿತಿ ತಂದೊಡ್ಡಿದ್ದು, ಟಿಕೆಎಂ ಕಾರ್ಮಿಕ ಚುನಾಯಿತ ಪ್ರತಿನಿಧಿಗಳು ಬಿಡದಿಯ ಟೊಯೋಟಾ ಕಂಪನಿಯ ಎದುರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.