Take a fresh look at your lifestyle.

ಎರಡನೇ ದಿನವೂ ಮುಂದುವರೆದ ರಕ್ತದಾನ ಚಳವಳಿ

ಕಾರ್ಮಿಕ ಸಚಿವರು ಶೀಘ್ರದಲ್ಲಿ ಟೊಯೋಟಾ ಬಿಕ್ಕಟ್ಟು ಅಂತ್ಯ ಕಾಣಲಿದ್ದು, ಶೀಘ್ರದಲ್ಲಿ ಎರಡನೇ ಶಿಪ್ಟ್ ಆರಂಭವಾಗುತ್ತದೆ ಎಂದು ಭರವಸೆ ನೀಡಿರುವ ನಡುವೆಯೂ ಕಾರ್ಮಿಕರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ

0
post ad

ರಾಮನಗರ: ಸರ್ಕಾರದ ಏಕಪಕ್ಷೀಯ ಬೆಂಬಲ ಮತ್ತು ಆಡಳಿತ ಮಂಡಳಿಯ ನಿರಂಕುಶ ಧೋರಣೆಗಳ ವಿರುದ್ಧ ಸ್ವಾಭಿಮಾನಿ ಹೋರಾಟದ ಅಂಗವಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ನ ಕಾರ್ಮಿಕರು ಹಮ್ಮಿಕೊಂಡಿರುವ ರಕ್ತದಾನ ಶಿಬಿರವು ಎರಡನೇ ದಿನವೂ ಮುಂದುವರೆದಿದೆ.


ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ಒತ್ತಡ ಹಾಗೂ ಅಮಾನವೀಯ ನಡೆಯ ವಿರುದ್ಧ ಟಿಕೆಎಂ ಕಾರ್ಮಿಕರು ರಕ್ತದಾನ ಚಳವಳಿಯನ್ನು ಅಂದರೆ ರಕ್ತವನ್ನು ದಾನ ಮಾಡುವುದರ ಮೂಲಕ ಪ್ರತಿಭಟನೆಯನ್ನು ಹೊರ ಹಾಕಿದ್ದಾರೆ.


ವಿರೋಧ ಪಕ್ಷದ ನಾಯಕರ ಆಗ್ರಹಗಳು ಸೇರಿದಂತೆ ರಾಷ್ಟ್ರದ ಗಮನ ಸೆಳೆದು ತಮ್ಮ ಹೋರಾಟವನ್ನು ಮುಂದುವರೆಸಿರುವ ಟಿಕೆಎಂ ಕಾರ್ಮಿಕರ ಸ್ವಾಭಿಮಾನಿ ಹೋರಾಟವು 51ನೇ ದಿನಕ್ಕೆ ಕಾಲಿರಿಸಿದೆ.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಮುನಿರಾಜು, ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷರಾದ ಪ್ರಸನ್ನ ಕುಮಾರ ಚಕ್ಕೆರೆ, ಕಾರ್ಮಿಕ ಕುಟುಂಬದ ಸದಸ್ಯರಾದ ಮಮತ ಮುರುಳೀಧರ್ ಕುಟುಂಬ ಸೇರಿದಂತೆ ನೂರಾರು ಕಾರ್ಮಿಕರು ರಕ್ತದಾನ ಮಾಡಿದರು.

ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತ ನಿಧಿ, ರಾಮನಗರದ ಬೆಳ್ಳಿ ರಕ್ತ ನಿಧಿ ಸಂಸ್ಥೆಗಳು ರಕ್ತ ಸಂಗ್ರಹದಲ್ಲಿ ಸಹಕಾರವನ್ನು ನೀಡುತ್ತಿದೆ. ಒಟ್ಟಾರೆ ಸ್ವಯಂಪ್ರೇರಿತವಾಗಿ ಏಳು ನೂರು ಕಾರ್ಮಿಕರು ಮತ್ತವರ ಕುಟುಂಬ ಸದಸ್ಯರು ರಕ್ತದಾನದಲ್ಲಿ ಭಾಗಿಯಾಗುವ ಸಾಧ್ಯತೆಗಳು ಇವೆ.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 65 ಕಾರ್ಮಿಕರ ಅಮಾನತ್ತು, 51 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು, ವಿರೋಧ ಪಕ್ಷಗಳು ಟಿಕೆಎಂಇಯು ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.
ಇನ್ನು, ವಿರೋಧ ಪಕ್ಷಗಳ ನಾಯಕರು ಬೆಂಬಲದ ನಡುವೆಯೂ ಸರ್ಕಾರದ ಆಡಳಿತ ಮಂಡಳಿಯ ಪರ ಏಕಪಕ್ಷೀಯ ನಡೆಯು ಕಾರ್ಮಿಕರಲ್ಲಿ ಅಸಮಾಧಾನವನ್ನುಂಟು ಮಾಡಿದೆ.
ಟೊಯೋಟಾ ಸಂಸ್ಥೆ ಅಮಾನತು ಮಾಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು, ನ್ಯಾಯಯುತವಾಗಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕಾರ್ಮಿಕರು ಬಿಗಿಪಟ್ಟು ಹಿಡಿದಿದ್ದಾರೆ. ಇನ್ನು, ಕಾರ್ಮಿಕ ಸಚಿವರು ಶೀಘ್ರದಲ್ಲಿ ಟೊಯೋಟಾ ಬಿಕ್ಕಟ್ಟು ಅಂತ್ಯ ಕಾಣಲಿದೆ ಎಂಬ ಭರವಸೆಗಳನ್ನು ನೀಡಿದ್ದಾರೆ.