Take a fresh look at your lifestyle.

ಅರವಿಂದ್ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ: ಸಿದ್ದರಾಮಯ್ಯ

ಮುಖ್ಯಮಂತ್ರಿಗಳಿಗೆ, ವಿರೋಧ ಪಕ್ಷದ ನಾಯಕರು ಬರೆದಿರುವ ಪತ್ರದಲ್ಲಿ ರಾಮನಗರದಲ್ಲಿರುವ ಅರವಿಂದ್ ಲೈಫ್‌ ಸ್ಟೈಲ್ ಬ್ರಾಂಡ್ ಲಿಮಿಟೆಡ್ ಘಟಕದ ಕಾರ್ಮಿಕರ ಹೋರಾಟವನ್ನು ಉಲ್ಲೇಖಿಸಿದ್ದಾರೆ

0
post ad

ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ರೈತರು ಮತ್ತು ಕಾರ್ಮಿಕರು ಚಳವಳಿ, ಪ್ರತಿಭಟನೆ ಹಾಗೂ ಸತ್ಯಾಗ್ರಹಗಳನ್ನು ಮುಂದುವರೆಸಿದ್ದಾರೆ. ರೈತ-ದಲಿತ-ಕಾರ್ಮಿಕ ಸಂಘಟನೆಗಳ ಕೂಟ ಐಕ್ಯ ಹೋರಾಟ ಸಮಿತಿಯು ಈ ಬಗೆಗೆ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
ರೈತ- ಕಾರ್ಮಿಕರನ್ನು  ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದು, ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ ರಾಮನಗರದಲ್ಲಿರುವ ಅರವಿಂದ್ ಲೈಫ್‌ ಸ್ಟೈಲ್ ಬ್ರಾಂಡ್ ಲಿಮಿಟೆಡ್ ಘಟಕದ ಕಾರ್ಮಿಕರ ಹೋರಾಟವನ್ನು ಉಲ್ಲೇಖಿಸಿದ್ದಾರೆ.
ಸಿದ್ದರಾಮಯ್ಯ ನವರ ಪತ್ರದಲ್ಲಿನ ಅರವಿಂದ್ ಗಾರ್ಮೆಂಟ್ಸ್ ಪ್ರಸ್ತಾಪದ ಸಾರಾಂಶ ಇಂತಿದೆ…
ರಾಮನಗರ ಜಿಲ್ಲೆಯಲ್ಲಿರುವ ಅರವಿಂದ್ ಫ್ಯಾಷನ್ಸ್ ಎಂಬ ಸಿದ್ದ ಉಡುಪು ಕಾರ್ಖಾನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕುಸಿದಿದೆ ಎನ್ನುವ ನೆಪ ಹೇಳಿ ಏಕಾ ಏಕಿ ಬಂದ್ ಮಾಡಿದೆ. 12 ವರ್ಷದಿಂದ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಬೆಳಗಾಗುವುದರೊಳಗೆ ಬೀದಿಗೆ ಬಿದ್ದಿದ್ದಾರೆ. ಕಾರ್ಮಿಕರಿಗೆ ಕಾರ್ಮಿಕ ನಿಯಮಗಳ ಪ್ರಕಾರ ಕೊಡಬೇಕಾದ ಹಣವನ್ನೂ ನೀಡದೇ ಏಕಾಏಕಿ ಬಂದ್ ಮಾಡಿರುವುದು ಅಮಾನವೀಯ ಸಂಗತಿಯಾಗಿದೆ. ಇದನ್ನು ವಿರೋಧಿಸಿ ಕಾರ್ಮಿಕರು ನಡೆಸುತ್ತಿರುವ ಹೋರಾಟ 20ನೇ ದಿನಕ್ಕೆ ತಲುಪಿದೆ. ಸರ್ಕಾರ, ಮಂತ್ರಿಗಳು, ಕಾರ್ಮಿಕ ಇಲಾಖೆ ಯಾರೊಬ್ಬರೂ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.
ವಾರಗಟ್ಟಲೆ, ತಿಂಗಳುಗಟ್ಟಲೆ ಕಾರ್ಮಿಕರು ಶಾಂತ ರೀತಿಯಿಂದ ಪ್ರತಿಭಟಿಸುತ್ತಿದ್ದರೂ ಕ್ಯಾರೇ ಅನ್ನದ ಸರ್ಕಾರ ಮಂತ್ರಿಗಳು ಕಾರ್ಮಿಕರ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಿದ ತಕ್ಷಣ ರೈತರನ್ನು, ಕಾರ್ಮಿಕರನ್ನು ಕಳ್ಳರು, ದರೋಡೆಕೋರರು, ದಾಂಧಲೆಕೋರರು, ರಾಷ್ಟ್ರದ್ರೋಹಿಗಳು ಎಂದು ಬಿಂಬಿಸಿ ಪೊಲೀಸರ ಮೂಲಕ ಇಲ್ಲ ಸಲ್ಲದ ಪ್ರಕರಣಗಳನ್ನು ದಾಖಲಿಸಿ ಗೂಂಡಾಗಿರಿ ನಡೆಸುತ್ತಿವೆ ಎಂಬ ಅಸಮಾಧಾನ ವ್ಯಾಪಕವಾಗುತ್ತಿದೆ ಎಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಒಟ್ಟಾರೆ ನಾಲ್ಕನೇ ವಾರಕ್ಕೆ ಕಾಲಿಟ್ಟ ಅರವಿಂದ್ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆಗೆ ನ್ಯಾಯ ಸಿಗಬೇಕಿದ್ದು, ಆಡಳಿತ ಮಂಡಳಿ ಕೂಡಲೇ ಸೂಕ್ತ ಪರಿಹಾರವನ್ನು ಘೋಷಿಸಬೇಕಿದೆ.