ಗಳಿಕೆ ರಜೆ ನಗದೀಕರಣಕ್ಕೆ ಪುನರ್ ಅಸ್ತು
ಇತ್ತೀಚಿಗೆ ರಾಜ್ಯ ಸರ್ಕಾರ ತನ್ನ ನೌಕರರಿಗೆ ಕೋವಿಡ್-19 ಹಿನ್ನೆಲೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕಾರಣ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು.


ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಂಕ್ರಾಂತಿಯ ಸಿಹಿಸುದ್ದಿ ಎಂಬಂತೆ ರಾಜ್ಯ ಸರ್ಕಾರವು ಇತ್ತೀಚೆಗೆ ರದ್ದು ಮಾಡಿದ್ದ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಮತ್ತೆ ಜಾರಿಗೊಳಿಸಿ, ಮುಂದುವರೆಸಲು ತಿರ್ಮಾನಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಮತ್ತೆ ಜಾರಿಗೊಳಿಸಲು ಸರ್ಕಾರ ಸಮ್ಮತಿಸಿದೆ ಎಂದು ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ತಿಳಿಸಿದ್ದಾರೆ.
ಸಚಿವಾಲಯ ನೌಕರರ ಗಳಿಕೆ ರಜೆ ನಗದೀಕರಣ ತಡೆಹಿಡಿರುವುದನ್ನು ವಾಪಸ್ ಪಡೆಯುವುದಾಗಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಜೊತೆಗೆ, ಸ್ಥಗಿತಗೊಂಡಿರುವ ತುಟ್ಟಿಭತ್ಯೆಯನ್ನು ಮತ್ತೆ ನೀಡಬೇಕು, ನಿವೃತ್ತಿ ಹೊಂದಿದ ಅಧಿಕಾರಿ ಹಾಗೂ ನೌಕರರ ನೇಮಕವನ್ನು ರದ್ದು ಮಾಡಬೇಕು. ಹೊರಗುತ್ತಿಗೆಯನ್ನು ನಿಲ್ಲಿಸಬೇಕು ಹಾಗೂ ನೌಕರ ವಿರೋಧಿ ನಿಯಮಾವಳಿಗಳನ್ನು ಕೂಡಲೇ ಹಿಂಪಡೆಯಬೇಕು ಎಂಬ ಬೇಡಿಕೆಗಳ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಕಾರ್ಯದರ್ಶಿ ಪಿ.. ರವಿಕುಮಾರ್ ಭರವಸೆಯನ್ನು ನೀಡಿದ್ದಾರೆ ಎಂದು ನೌಕರರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಹಿಂದಿನ ಆದೇಶದ ಪ್ರಕಾರ 2021ನೇ ಸಾಲಿನ ಕ್ಯಾಲೆಂಡರ್ ವರ್ಷ ದಿನಾಂಕ 01-01-2021 ರಿಂದ 31-12-2021 ರವರೆಗಿನ ಅವಧಿಯಲ್ಲಿ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸಲಾಗಿತ್ತು.