Take a fresh look at your lifestyle.

ಹಂಚಿನ ಕಾರ್ಮಿಕರಿಂದ ಮುಷ್ಕರ

ಈ ಹಿಂದೆ ಕಾರ್ಮಿಕನಿಗೆ 391.53 ರೂ. ವೇತನ ನಿಗದಿಯಾಗಿತ್ತು. ಕಾರ್ಮಿಕ ತಿದ್ದುಪಡಿಯಾದ ಕಾನೂನಿನಂತೆ 411.26 ರೂ. ನೀಡಲು 2017 ಡಿಸೆಂಬರ್‌ನಿಂದ ಒತ್ತಾಯಿಸಲಾಗುತ್ತಿದೆ

0
post ad

ಕುಂದಾಪುರ: ಕನಿಷ್ಠ ಕೂಲಿ ವೇತನ ಏರಿಕೆಗೆ ಆಗ್ರಹಿಸಿ ಮೂರು ದಿನಗಳಿಂದ ತಾಲೂಕಿನ 11 ಹಂಚಿನ ಕಾರ್ಖಾನೆಗಳ ಸುಮಾರು ಸಾವಿರ ಕಾರ್ಮಿಕರು ಮುಷ್ಕರ ಆರಂಭಿಸಿದ್ದಾರೆ.
  ಸರ್ಕಾರ ನಿಗದಿಪಡಿಸಿದ ವೇತನ ಏರಿಕೆಗೆ ಕಾರ್ಮಿಕ ಸಂಘಟನೆಗಳು ವರ್ಷದಿಂದ ಬೇಡಿಕೆಯಿಟ್ಟಿದ್ದು ಮಾಲೀಕರಿಂದ ಈಡೇರಿಕೆ ಅಸಾಧ್ಯವಾದ ಕಾರಣ ಮುಷ್ಕರವನ್ನು ಕಾರ್ಮಿಕರು ಆರಂಭಿಸಿದ್ದಾರೆ.

ಈ ಹಿಂದೆ ಕಾರ್ಮಿಕನಿಗೆ 391.53 ರೂ. ವೇತನ ನಿಗದಿಯಾಗಿತ್ತು. ಕಾರ್ಮಿಕ ತಿದ್ದುಪಡಿಯಾದ ಕಾನೂನಿನಂತೆ 411.26 ರೂ. ನೀಡಲು 2017 ಡಿಸೆಂಬರ್‌ನಿಂದ ಒತ್ತಾಯಿಸಲಾಗುತ್ತಿದೆ.

   ಈ ಲೆಕ್ಕಾಚಾರ ಅಷ್ಟು ಸರಳದಲ್ಲಿ ಇಲ್ಲ ಎನ್ನುತ್ತಾರೆ ಮಾಲೀಕರು. ಕೇವಲ 20 ರೂ.ಗಾಗಿ ನಿರಾಕರಣೆಯಲ್ಲ. ವೇತನ ಸ್ವರೂಪ ಮೊದಲಿನಂತಿರದೆ ಮೂಲವೇತನಕ್ಕೆ ಡಿಎ ಸೇರಿಸಲಾಗಿದೆ. ಈ ಮೊತ್ತದ ಮೇಲೆ ಶೇ.46ರಷ್ಟು ಇತರ ಭತ್ತೆಗಳನ್ನು (ಪಿಎಫ್, ಇಎಸ್‌ಐ, ಇಎಲ್‌, ಬೋನಸ್‌, ಗ್ರಾಚ್ಯುಟಿ ಇತ್ಯಾದಿ) ನೀಡಬೇಕಾಗುತ್ತದೆ. ಸರಕಾರ 8 ಗಂಟೆ ಅವಧಿಗೆ ಈ ವೇತನ ನಿಗದಿ ಮಾಡಿದ್ದು, ಹಂಚಿನ ಕಾರ್ಖಾನೆ ಕೆಲಸದ ನಿಯಮಾವಳಿಗೆ ಹೊಂದಿಕೆಯಾಗುತ್ತಿಲ್ಲ. ಕಾರ್ಮಿಕರೂ ಒಪ್ಪುತ್ತಿಲ್ಲ.

ಇಲ್ಲಿ ಒಂದು ಟಾಸ್ಕ್ ಗೆ 1 ಹಾಜರಿ ಎಂದು ಲೆಕ್ಕ. 1 ಟಾಸ್ಕ್ನಲ್ಲಿ 5,300 ಹಂಚುಗಳನ್ನು ಮಾಡಬಹುದು. ಮಾಲೀಕರು 8 ಗಂಟೆ ಅವಧಿಯಲ್ಲಿ ಇದನ್ನು ಮಾಡಿಕೊಟ್ಟರೆ ಸಾಕು ಎಂದು ಹೇಳಿದರೂ ಸೇವಾ ಕುಶಲ ಕಾರ್ಮಿಕರಿಂದ ಕೇವಲ 3 ತಾಸಿನಲ್ಲಿ ಈ ಟಾಸ್ಕ್ ಮುಗಿಯುತ್ತದೆ. 1.25 ಟಾಸ್ಕ್ ಎಂದು ಒಪ್ಪಂದ ಇದ್ದರೂ ಕಾರ್ಮಿಕರಿಗೆ 5 ತಾಸಿನಲ್ಲಿ ಮುಗಿಯುತ್ತದೆ. ಬಹುತೇಕ ಕಾರ್ಮಿಕರಿಗೆ 1.25 ಟಾಸ್ಕ್ (6,625 ಹಂಚು) ನಿಯಮದಂತೆಯೇ ವೇತನ ಕೊಡುವ ಒಪ್ಪಂದ ಆಗಿರುತ್ತದೆ. 3 ವರ್ಷಗಳಿಗೊಮ್ಮೆ ಒಪ್ಪಂದ ನವೀಕರಿಸಲಾಗುತ್ತದೆ. ಆಗ ಲೆಕ್ಕಾಚಾರದಂತೆ ದಿನದ ವೇತನ 900 ರೂ.ಗಳ ವರೆಗೆ ಆಗುತ್ತದೆ. ಆದ್ದರಿಂದ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ವಾರ್ಷಿಕ ವಹಿವಾಟಿನ ಶೇ.60ರಷ್ಟು ವೇತನಕ್ಕೆ ಬಳಕೆಯಾಗುತ್ತಿದ್ದು ಏರಿಸಿದಲ್ಲಿ ಶೇ.85ರಷ್ಟಾಗಲಿದೆ ಎನ್ನುವುದು ಮಾಲೀಕರ ಆತಂಕ. ಕಚ್ಛಾ ಸಾಮಗ್ರಿಗಳಿಗೆ ಸರಕಾರದಿಂದ ಪ್ರೋತ್ಸಾಹ ದೊರೆಯದ ಕಾರಣ ಮಾಲಕರಿಗೆ ಸಂಕಷ್ಟವಾಗಿದೆ. ಹಾಗಾಗಿ ಕಾರ್ಮಿಕರ ಜತೆ ಪುನರಾರಂಭಕ್ಕೆ ದೊಡ್ಡಮಟ್ಟದ ಮಾತುಕತೆ ನಡೆದಿಲ್ಲ.

ದಿನವೊಂದಕ್ಕೆ ಇಲ್ಲಿನ 11 ಕಾರ್ಖಾನೆಗಳಲ್ಲಿ 2 ಲಕ್ಷದಷ್ಟು ಹಂಚು ತಯಾರಾಗುತ್ತವೆ. ಬೇಡಿಕೆ ಕಡಿಮೆಯಾದ ಕಾರಣ ಕೆಲವೊಂದು ಕಾರ್ಖಾನೆಗಳಲ್ಲೇ 12 ಲಕ್ಷಕ್ಕಿಂತ ಹೆಚ್ಚಿನ ಹಂಚು ಸಂಗ್ರಹವಿದೆ. ಸದ್ಯ ಕೇರಳ ದೊಡ್ಡ ಮಾರುಕಟ್ಟೆಯಾಗಿದ್ದು ಬೆಳಗಾವಿ, ಪುಣೆ, ಮುಂಬಯಿ ಹಾಗೂ ಕರ್ನಾಟಕದ ವಿವಿಧೆಡೆಗೆ ಇಲ್ಲಿನ ಹಂಚು ರವಾನೆಯಾಗುತ್ತದೆ.

11 ಕಾರ್ಖಾನೆಗಳಲ್ಲಿ 1,500 ಕಾರ್ಮಿಕರು ಹಾಗೂ 500ರಷ್ಟು ಇತರ ಉದ್ಯೋಗಿಗಳಿದ್ದಾರೆ. ಶುಕ್ರವಾರದಿಂದ ಕೆಲಸ ನಿಧಾನಗೊಳಿಸಿ ಸೋಮವಾರದಿಂದ ಇವರಾರೂ ಕೆಲಸಕ್ಕೆ ಹಾಜರಾಗಿಲ್ಲ. ಮಾಲಕರು ಕೂಡ ವೇತನ ಏರಿಕೆ ಹೊರೆಯಾಗುತ್ತದೆ ಎಂದು ಏರಿಸುವ ಗೋಜಿಗೆ ಹೋಗುತ್ತಿಲ್ಲ.