Take a fresh look at your lifestyle.

ಟಿಕೆಎಂ ಲಾಕ್ ಔಟ್ ತೆರವು, ಮುಂದುವರೆದ ಕಾರ್ಮಿಕರ ಪ್ರತಿಭಟನೆ

ಆಡಳಿತ ವರ್ಗಕ್ಕೆ ಬೀಗಮುದ್ರೆಯು ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಈಗೀಗ ಅರ್ಥವಾಗುತ್ತಿದೆ. ಇಷ್ಟಾದರೂ ಬೀಗಮುದ್ರೆ ತೆರವಿನ ನಂತರ ಸನ್ನಡತೆ ಪತ್ರಕ್ಕೆ ಸಹಿ ಕೇಳುತ್ತಿರುವುದು, ಕಾನೂನಿನ ಪ್ರಕಾರ ಕಾನೂನು ಬಾಹಿರ ಬೀಗಮುದ್ರೆಯನ್ನು ಮುಂದುವರೆಸಿದಂತೆ ಆಗುತ್ತದೆ ಎಂದು ಕಾರ್ಮಿಕ ಸಂಘ ತಿಳಿಸಿದೆ

0
post ad

ಬಿಡದಿ : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ‌ ತಾತ್ಕಾಲಿಕವಾಗಿ ಘೋಷಿಸಿದ್ದ ಲಾಕ್ ಔಟ್ ಅನ್ನು ಇಂದು ಸಂಪೂರ್ಣವಾಗಿ ತೆರವುಗೊಳಿಸಿದೆ.
ಕೆಲಸಕ್ಕೆ ಹಾಜರಾಗಲು ಇಚ್ಚಿಸುವ ಕಾರ್ಮಿಕರು ಸನ್ನಡತೆಯ ಪತ್ರಕ್ಕೆ ಸಹಿ ಮಾಡಿ, ಕರ್ತವ್ಯಕ್ಕೆ ಹಾಜರಾಗಬಹುದು ಎಂದು ಪತ್ರಿಕಾ ಪ್ರಕಟಣೆಯನ್ನು ಆಡಳಿತ ಮಂಡಳಿ ಹೊರಡಿಸಿದೆ.
ಅಶಿಸ್ತು ಪ್ರದರ್ಶಿಸಿದ್ದ 66 ಕಾರ್ಮಿಕರ ವಿರುದ್ಧ ತನಿಖೆ ಮುಂದುವರೆಯಲಿದ್ದು, ಸ್ಥಳೀಯ ಶಿಸ್ತು ಸಮಿತಿ ಈ ಬಗೆಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.
ಇನ್ನು, ಕಂಪನಿಯ ಲಾಕ್ ಔಟ್ ತೆರವು ಬಗೆಗೆ ಕಾರ್ಮಿಕ ಸಂಘ ಆಕ್ರೋಶವನ್ನು ಹೊರಹಾಕಿದೆ. ಆಡಳಿತ ಮಂಡಳಿಯ ಪ್ರತಿಕಾ ಹೇಳಿಕೆಯು, ಇಷ್ಟು ದಿನ ಕಾರ್ಮಿಕರು ಮುಷ್ಕರ ಮಾಡುತ್ತಿರಲಿಲ್ಲ ನಾವೇ ಬೀಗಮುದ್ರೆಯನ್ನು ಘೋಷಿಸಿದ್ದೆವು ಎಂದು ಒಪ್ಪಿಕೊಂಡಂತೆ ಆಯ್ತು.
ಆಡಳಿತ ಮಂಡಳಿಯು ತನ್ನ ಅಗತ್ಯತೆಗಳನ್ನು ಕಾರ್ಮಿಕ ಸಂಘದ ಸಹಕಾರವಿಲ್ಲದೇ ಪೂರೈಸಿಕೊಳ್ಳಬಹುದು ಎಂದು ಭಾವಿಸಿತ್ತು, ಆಡಳಿತ ವರ್ಗಕ್ಕೆ ಬೀಗಮುದ್ರೆಯು ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಈಗೀಗ ಅರ್ಥವಾಗುತ್ತಿದೆ ಎಂದು ಕಾರ್ಮಿಕ ಸಂಘ ತಿಳಿಸಿದೆ.

ಇಷ್ಟಾದರೂ ಬೀಗಮುದ್ರೆ ತೆರವಿನ ನಂತರ ಸನ್ನಡತೆ ಪತ್ರಕ್ಕೆ ಸಹಿ ಕೇಳುತ್ತಿರುವುದು, ಕಾನೂನಿನ ಪ್ರಕಾರ ಕಾನೂನು ಬಾಹಿರ ಬೀಗಮುದ್ರೆಯನ್ನು ಮುಂದುವರೆಸಿದಂತೆ ಆಗುತ್ತದೆ. ಅವರು ಎರಡನೇ ಬಾರಿಗೆ ದಿನಾಂಕ 23.11.2020 ರಿಂದ ಘೋಷಿಸಿದ್ದ ಬೀಗಮುದ್ರೆಯು ಕಾನೂನು ಬಾಹಿರವಾಗಿತ್ತು. ಈ ನಿರ್ಧಾರವು ನಿರರ್ಥಕ ಹಾಗೂ ಸಂಸ್ಥೆಯ ಬೆಳವಣಿಗೆಗೆ ಹಾನಿಕಾರಕ ಎಂದು ಆಡಳಿತ ಮಂಡಳಿ ಅರಿಯುವವರೆಗೂ ಇದು ಹಾಗೆಯೇ ಮುಂದುವರೆಯುತ್ತದೆ ಎಂದು ಸಂಘ ದೃಡಪಡಿಸಿದೆ.

ಈ ಬಗೆಗೆ ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ..

 ಕೆಲಸದ ಒತ್ತಡದ ನಿಗದಿಯ ವಿಚಾರವಾಗಿ ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರಗಳೇ ಕಾರ್ಮಿಕರ ಪ್ರತಿಭಟನೆಗೆ ಕಾರಣವಾಗಿತ್ತು. ಈ ವಿಚಾರವಾಗಿ ಕಾರ್ಮಿಕ ಸಂಘದ ಹಲವಾರು ಪ್ರಯತ್ನಗಳಿಗೆ ಆಡಳಿತ ವರ್ಗವು ಸ್ಪಂದಿಸಲಿಲ್ಲ, ಅದಕ್ಕೆ ಪೂರಕ ದಾಖಲೆಗಳು ನಮ್ಮಲ್ಲಿವೆ. ಆಡಳಿತ ಮಂಡಳಿಯ ನೋಟಿಸಿನ ವಿಷಯಗಳು ನಮಗೆ ಅರ್ಥವಾಗಿದೆ, ಆಡಳಿತ ಮಂಡಳಿಯ ಷರತ್ತುಗಳು ಕಾರ್ಮಿಕ ವಿರೋಧಿಯ ಜೊತೆಗೆ ಸಂಸ್ಥೆಯ ವಿರುದ್ಧವಾಗಿದೆ. ಆಡಳಿತ ಮಂಡಳಿಯು ಕಾರ್ಮಿಕ ಸಂಘವನ್ನು ನಿರ್ಲಕ್ಷಿಸಿದರೂ ನಾವು ಸ್ಪಷ್ಟಪಡಿಸುವುದೇನೆಂದರೆ.

* ಆಡಳಿತ ಮಂಡಳಿಯು ತನ್ನ ಕಾನೂನು ಬಾಹಿರ ಬೀಗಮುದ್ರೆಯನ್ನು ಮುಂದುವರೆಸಿದೆ.
*ಬೀಗಮುದ್ರೆ ತೆರವಿನ ನಂತರ ಸನ್ನಡತೆಯ (ಮುಚ್ಚಳಿಕೆ) ಕೇಳುವುದು, ಬೀಗಮುದ್ರೆಯನ್ನು ಮುಂದುವರೆಸಿದಂತೆ ಆಗುತ್ತದೆ.
*ಕಾರ್ಮಿಕರು ಈ ಕಾನೂನು ಬಾಹಿರ ಬೀಗಮುದ್ರೆಯ ಸಮಯದ ಸಂಪೂರ್ಣ ಸಂಬಳಕ್ಕೆ ಅರ್ಹರಾಗಿರುತ್ತಾರೆ.
*ಕಾರ್ಮಿಕರು ಕಾನೂನು ಬಾಹಿರ ಬೀಗಮುದ್ರೆ ಹಾಗೂ ಮುಚ್ಚಳಿಕೆ ಸಮಯದಲ್ಲಿ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಕಾರ್ಮಿಕ ಸಂಘದ ಅಧ್ಯಕ್ಷ್ಯ ಪ್ರಸನ್ನ ಕುಮಾರ್ ಹೇಳಿಕೆ ನೀಡಿದ್ದಾರೆ.
ಅಲ್ಲದೆ, ಇಂದು ನಡೆದ ಕಾರ್ಮಿಕ ಸಂಘದ “ಸರ್ವ ಸದಸ್ಯರ ಸಭೆ” ಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ತಿಳಿಸಿದ್ದಾರೆ..

ಅವು..

* ಆಡಳಿತ ಮಂಡಳಿಯು ಸನ್ನಡತೆ ಪತ್ರಕ್ಕೆ ಸಹಿ ಕೇಳುವ (ಮುಚ್ಚಳಿಕೆ ಕೇಳುವ) ಮೂಲಕ ಮುಂದುವರೆದ ಕಾನೂನು ಬಾಹಿರ ಬೀಗಮುದ್ರೆಯನ್ನು ಖಂಡಿಸುವುದು.
* ಕಾನೂನು ಬಾಹಿರ ಬೀಗಮುದ್ರೆಯ ಅವಧಿಯ ಸಂಪೂರ್ಣ ವೇತನ ನೀಡಬೇಕು
* ಆಡಳಿತ ಮಂಡಳಿಯ ಈ ಸಮಯದ ಎಲ್ಲಾ ಅಮಾನತು ಹಾಗೂ ಶಿಕ್ಷೆಯ ಆದೇಶಗಳನ್ನು ಹಿಂಪಡೆಯಬೇಕು.
* ಜೊತೆಗೆ ಕಾನೂನು ಬಾಹಿರ ಬೀಗಮುದ್ರೆಯ ವಿರುದ್ಧ ನಮ್ಮ ನ್ಯಾಯಸಮ್ಮತ ಪ್ರತಿಭಟನೆಯನ್ನು ಮುಂದುವರೆಸುವುದು.