Take a fresh look at your lifestyle.

25 ದಿನಕ್ಕೆ ಕಾಲಿಟ್ಟ ಟಿಕೆಎಂ ಕಾರ್ಮಿಕರ ಸ್ವಾಭಿಮಾನಿ ಹೋರಾಟ

ಕ್ರಾಂತಿ ಗೀತೆಗಳನ್ನು ಹಾಡುವುದರ ಮೂಲಕ ಕಾರ್ಮಿಕರು, ಕನ್ನಡಪರ ಹೋರಾಟಗಾರರು ಪ್ರತಿಭಟನೆಯನ್ನು ಮತ್ತಷ್ಟು ತೀವ್ರತರಗೊಳಿಸಿದರು

0
post ad

ರಾಮನಗರ/ಬೆಂಗಳೂರು : ಟಿಕೆಎಂ ಕಂಪನಿಯ ಆಡಳಿತ ಮಂಡಳಿಯ ಅಸ್ವಾಭಾವಿಕ ಮತ್ತು ಮೊಂಡು ಧೋರಣೆಯನ್ನು ದಿಟ್ಟವಾಗಿ ಎದುರಿಸಿ, ಖಂಡಿಸುತ್ತಾ ಕಾರ್ಮಿಕರು 25 ನೇ ದಿನವು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಕಂಪೆನಿಯ ಎರಡನೇ ಬಾರಿಗೆ ತಾತ್ಕಾಲಿಕ ಲಾಕ್ಔಟ್ ಅನ್ನು ಘೋಷಿಸಿದ ನಂತರ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮತ್ತಷ್ಟು ಪರಿಣಾಮಕಾರಿ ಯಾಗಿ ಸ್ವಾಭಿಮಾನದ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಇಂದಿನ ಹೋರಾಟಕ್ಕೆ ಕಾರ್ಮಿಕ ಸಂಘಟನೆಗಳ ಜೊತೆಗೆ ಕನ್ನಡಪರ ಸಂಘಟನೆಗಳು ಜೊತೆಯಾಗಿರುವುದು ವಿಶೇಷ.


ಕಾರ್ಮಿಕ ಪ್ರತಿಭಟನೆಯು 25ನೇ ದಿನಕ್ಕೆ ಕಾಲಿಟ್ಟಿದ್ದು, ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ವಿಭಿನ್ನವಾಗಿ ಧರಣಿಯನ್ನು ಮುನ್ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ, ಮಾತೃ ಭೂಮಿ, ಡಾ. ರಾಜ್ ಕುಮಾರ್ ಸಂಘ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಇಂದು ಕಾರ್ಮಿಕರಿಗೆ ಬೆಂಬಲ ಘೋಷಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು. ಈ ಮೂಲಕ ಕನ್ನಡ ಸಂಘಟನೆಗಳು ಕಾರ್ಮಿಕರಲ್ಲಿ ಆತ್ಮ ಸ್ಥೈರ್ಯವನ್ನು ತುಂಬುವ ಕಾರ್ಯಕ್ಕೆ ಮುಂದಾದವು.
ಸಂಗೀತ ಪರಿಕರಗಳ ಬಾರಿಸಿ, ಕ್ರಾಂತಿ ಗೀತೆಗಳನ್ನು ಹಾಡುವುದರ ಮೂಲಕ ಕಾರ್ಮಿಕರು, ಕನ್ನಡಪರ ಹೋರಾಟಗಾರರು ಪ್ರತಿಭಟನೆಯನ್ನು ಮತ್ತಷ್ಟು ತೀವ್ರತರಗೊಳಿಸಿದರು.
ಗಾಂಧಿನಗರ ಘಟಕದ ಕರವೇ ಗೌರವಾಧ್ಯಕ್ಷ ಗಂಗಾಧರ್, ಮಾತೃ ಭೂಮಿ ಸಂಸ್ಥಾಪಕರಾದ ನಂಜಪ್ಪ , ನೆಲಸೊಗಡು ಲಕ್ಷ್ಮಣ್, ಡಾ. ರಾಜ್ ಕುಮಾರ್ ಸಂಘದ ಅಧ್ಯಕ್ಷರಾದ ರಾಜೇಂದ್ರ ಮುಂತಾದ ಕನ್ನಡಪರ ಹೋರಾಟಗಾರರು ಇಂದಿನ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಕಾರ್ಮಿಕರ ಹೋರಾಟದಲ್ಲಿ ಪಾಲ್ಗೊಂಡು ಕನ್ನಡ ಹಾಡುಗಳನ್ನು ಹಾಡುವುದರ ಮೂಲಕ ಗಮನ ಸೆಳೆದರು.
ಟೊಯೋಟಾ ಕಿರ್ಲೋಸ್ಕರ್​ ಮೋಟಾರ್​ ಕಂಪನಿಯ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ನಂತರ ಹಲವು ಕಾರ್ಮಿಕರನ್ನು ಸಂಸ್ಥೆ ಅಮಾನತು ಮಾಡಿತ್ತು.


ಕಾರ್ಮಿಕ ಇಲಾಖೆ ಲಾಕ್ ಔಟ್ ಮತ್ತು ಪ್ರತಿಭಟನೆಗಳೆರಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆ ಆದೇಶವು ಜಾರಿಗೆ ಬರಲೇ ಇಲ್ಲ. ಸುಮಾರು 3500 ಕಾರ್ಮಿಕರು ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.