ಡಿಸಿಎಂಗೆ ಬಿತ್ತಿ ಪತ್ರಗಳನ್ನು ಪ್ರದರ್ಶಿಸುತ್ತಾ ಟೊಯೋಟಾ ಕಾರ್ಮಿಕರ ಪ್ರತಿಭಟನೆ
ಕಾರ್ಮಿಕರ ಕೆಲಸದ ಸ್ಥಿತಿಗಳ ಬಗೆಗೆ ಗಮನ ಹರಿಸಿ, ಕೆಲಸದ ಮತ್ತು ಕಾರ್ಮಿಕರ ಬಿಕ್ಕಟ್ಟನ್ನು ಶಮನಗೊಳಿಸುವಂತೆ ಪ್ಲೇ ಕಾರ್ಡ್ ಮತ್ತು ಬ್ಯಾನರ್ ಪ್ರದರ್ಶಿಸಿ ನೌಕರರ ಪ್ರತಿಭಟನೆ


ರಾಮನಗರ : ಕಣ್ಣಿಗೆ ಕಪ್ಪು ಬಟ್ಟೆಯನ್ನು ಧರಿಸಿ, ಕೈಯಲ್ಲಿ ಬಿತ್ತಿ ಪತ್ರಗಳನ್ನು ಹಿಡಿದು ಡಿಸಿಎಂ ರವರಿಗೆ ಪ್ರದರ್ಶಿಸುತ್ತಾ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಟೊಯೋಟಾ ಕಾರ್ಮಿಕರು ಪ್ರತಿಭಟನೆಯನ್ನು ಸೂಚಿಸಿದರು.
ಟಿಕೆಎಂ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ವಿಧಾನಗಳಿಗೆ ಸರ್ಕಾರ ಏಕಪಕ್ಷೀಯ ಬೆಂಬಲ ನೀಡುತ್ತಾ, ಕಾರ್ಮಿಕರ ಕೂಗಿನ ಕಡೆ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ ಕಾರ್ಮಿಕರು ಡಿಸಿಎಂ ಅಶ್ವತ್ಥನಾರಾಯಣ ಪ್ರಯಾಣದ ವೇಳೆ ಬಿತ್ತಿ ಪತ್ರ ಪ್ರದರ್ಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ ಎನ್ ಅಶ್ವತ್ಥ ನಾರಾಯಣ ರಾಮನಗರದಲ್ಲಿ ಪೂರ್ವ ನಿಗಧಿತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಕೆಎಂಎಫ್ ಕಾರ್ಯಕ್ರಮ, ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಆದಿಚುಂಚನಗಿರಿ ಮಠದ ಮುಂಬಾಗದಲ್ಲಿ ಬಳಿ ನೂರಾರು ಕಾರ್ಮಿಕರು ಕಪ್ಪು ಬಟ್ಟೆ ಕಣ್ಣಿಗೆ ಕಟ್ಟಿಕೊಂಡು ರಸ್ತೆಯ ಬದಿ ನಿಂತು ತಮ್ಮ ಪ್ರತಿಭಟನೆಯ ಧೋರಣೆಯನ್ನು ಹೊರಹಾಕಿದರು.
ಇನ್ನು, ರಾಮನಗರದಲ್ಲಿ ಟಿಕೆಎಂಇಯು ಸದಸ್ಯರದೊಂದಿಗೆ ಮಾತನಾಡಿದ್ದ ಡಿಸಿಎಂ, ಟೊಯೋಟಾ ಬಿಕ್ಕಟ್ಟಗೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ನೀಡಿದರು, ಶೀಘ್ರದಲ್ಲಿ ಸರ್ಕಾರದ ಮಟ್ಟದಲ್ಲಿ ಮತ್ತೊಂದು ಸುತ್ತಿನ ಸಭೆಯನ್ನು ನಡೆಸುವುದಾಗಿ ತಿಳಿಸಿದರು.
ಆಡಳಿತ ಮಂಡಳಿಯ ಅಸಹಜ ಕಾರ್ಮಿಕ ನೀತಿ, ನಿರಂಕುಶ ಧೋರಣೆಗಳ ವಿರುದ್ಧ ಸ್ವಾಭಿಮಾನಿ ಹೋರಾಟದ ಅಂಗವಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ನ ಕಾರ್ಮಿಕರು ಹಮ್ಮಿಕೊಂಡಿರುವ ಹೋರಾಟವೂ 61ನೇ ದಿನಕ್ಕೆ ಕಾಲಿಟ್ಟಿದೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಆಡಳಿತ ಮಂಡಳಿಯ ಮಾನವಾತೀತ ಕೆಲಸದ ಒತ್ತಡ ಹಾಗೂ ಅಮಾನವೀಯ ನಡೆಯ ವಿರುದ್ಧ ಟಿಕೆಎಂ ಕಾರ್ಮಿಕರು ಬೀದಿಗೆ ಬಿದ್ದು ಹೋರಾಟ ನಡೆಸುತ್ತಿದ್ದರೂ ಸೌಜನ್ಯಕ್ಕಾದರೂ ಬೇಟಿ ನೀಡದ ಸರ್ಕಾರದ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಎಲ್ಲೆಡೆ ಆಕ್ರೋಶಗಳು ಕೇಳಿಬರುತ್ತಿವೆ.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 71 ಕಾರ್ಮಿಕರ ಅಮಾನತ್ತು, 61 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.