Take a fresh look at your lifestyle.

ಸಿಐಟಿಯು, ರೈತ ಸಂಘದ ಬೆಂಬಲದೊಂದಿಗೆ ಮುಂದುವರೆದ ಟಿಕೆಎಂಇಯು ಹೋರಾಟ

ಆಡಳಿತ ಮಂಡಳಿ ಶೀಘ್ರದಲ್ಲಿ ಬಿಕ್ಕಟ್ಟನ್ನು ಪರಿಹರಿಸದಿದ್ದರೆ ಕಾರ್ಮಿಕರ ಕುಟುಂಬ ಸದಸ್ಯರು ಹೋರಾಟದಲ್ಲಿ ಭಾಗವಹಿಸುವ ಸುಳಿವು

0
post ad

ಬೆಂಗಳೂರು/ರಾಮನಗರ : ಇಪ್ಪತ್ತಾರು ದಿನಗಳಿಂದ ಕಾರ್ಮಿಕರು ಕಾರ್ಖಾನೆಯ ಹೊರಗೆ ಪ್ರತಿಭಟನೆಯನ್ನು ನಡೆಸುತ್ತಿದ್ದರೆ. ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಆಡಳಿತ ಮಂಡಳಿ ಮತ್ತಷ್ಟು ಕಾರ್ಮಿಕರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ. ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿಯ ವಜಾದಿಂದ ಆರಂಭವಾದ ಬಿಕ್ಕಟ್ಟು ಇಂದು ಅರವತ್ತು ಕಾರ್ಮಿಕರ ಅಮಾನತ್ತಿಗೆ ಕಾರಣವಾಗಿ ಮತ್ತಷ್ಟು ಬಿಗಡಾಯಿಸಿದೆ.
ಬಿಡದಿಯ ಬಳಿಯ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಎರಡನೇಯ ತಾತ್ಕಾಲಿಕ ಲಾಕೌಟ್ಅನ್ನು ಹಿಂಪಡೆಯುತ್ತಿಲ್ಲ. ಕಾರ್ಖಾನೆಯ ಹೊರಗೆ ಕಾರ್ಮಿಕರು ಹೋರಾಟವನ್ನು ಮುಂದುವರೆಸಿದ್ದು, ಪ್ರತಿಭಟನೆ 26 ನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಬೇಟಿ ನೀಡಿ ಕಾರ್ಮಿಕರಿಗೆ ಬೆಂಬಲ ನೀಡಿದರು.
ಕಾರ್ಖಾನೆಯು ಕಾರ್ಮಿಕರನ್ನು ಯಂತ್ರಗಳಂತೆ ಪರಿಗಣಿಸಿದೆ ಎಂದು ಆಪಾದಿಸಿದರು. ಮುಂದೆ ಕಾರ್ಮಿಕ ವರ್ಗ ಉಗ್ರ ಹೋರಾಟ ಹಾದಿಯನ್ನು ತುಳಿಯಲು ಸಜ್ಜಾಗುವಂತೆ ಮೀನಾಕ್ಷಿ ಸುಂದರಂ ಕರೆ ನೀಡಿದರು.
ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದು ಕಾರ್ಮಿಕ ಸಂಘದ ಕೆಲಸ. ಸಮಸ್ಯೆಗಳನ್ನು ಕೇಳಲು ಬಂದ ಕಾರ್ಮಿಕ ನಾಯಕರನ್ನೇ ಕೆಲಸದಿಂದ ಅಮಾನತು ಮಾಡಿರುವುದು ವಿಷಾದನೀಯವೆಂದರು. ಮುಂದೆ ಈ ಹೋರಾಟ ರಾಜ್ಯಾದ್ಯಂತ ವ್ಯಾಪಿಸಲಿದೆ, ಈ ಮೂಲಕ ಹೋರಾಟದ ರೂಪರೇಶೆಗಳನ್ನು ತೀವ್ರಗೊಳಿಸಬೇಕು ಎಂದು ಎಚ್ಚರಿಸಿದರು. ಇದೇ ವೇಳೆ ಜೆಸಿಟಿಯು ಸಂಘಟನೆಗಳಿಂದ ಸರ್ಕಾರದ ಮೇಲೂ ಒತ್ತಡ ತರಲಾಗುತ್ತದೆ ಎಂದರು.
ಕಾರ್ಮಿಕ ಸಂಘಟನೆಯ ಬೆಂಬಲದ ಜೊತೆಗೆ ಕರ್ನಾಟಕ ರಾಜ್ಯ ರೈತ ಸಂಘದ ನಾಯಕರು ಟಿಕೆಎಂ ಕಾರ್ಮಿಕರ ಹೊರಾಟಕ್ಕೆ ಬೆಂಬಲ ಘೋಷಿಸಿದರು. ರಾಮನಗರ ಜಿಲ್ಲಾ ರೈತ ಸಂಘದ ಕಾರ್ಯದರ್ಶಿಯಾದ ಪುಟ್ಟಸ್ವಾಮಿಯವರು ಮಾತನಾಡುತ್ತಾ ರಾಮನಗರ ನೂರಾರು ಯೋಗಿಗಳಿಗೆ ಜನ್ಮನೀಡುವ ಕರ್ಮಭೂಮಿ ಇಲ್ಲಿ ಶೋಷಣೆಗೆ ಅವಕಾಶವಿಲ್ಲ ಎಂದರು. ಆಡಳಿತ ಮಂಡಳಿ ಶೀಘ್ರದಲ್ಲಿ ಬಿಕ್ಕಟ್ಟು ಪರಿಹರಿಸದಿದ್ದರೆ ಕಾರ್ಮಿಕರ ಕುಟುಂಬ ಸದಸ್ಯರು ಹೋರಾಟದಲ್ಲಿ ಭಾಗವಹಿಸುತ್ತಾರೆ ಎಂದರು.
ಇನ್ನು, ಟಿಕೆಎಂಇಯು ಹೋರಾಟಕ್ಕೆ ಬಿಹೆಚ್ಇಎಲ್ ಕಾರ್ಮಿಕ ಸಂಘ ಬೆಂಬಲ ಘೋಷಿಸಿತು. ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದ ಬಿಹೆಚ್ಇಎಲ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಹೆಚ್.ಆರ್. ನಾಗರಾಜ್, ಮತ್ತು ಖಚಾಂಚಿ ಜನಾರ್ಧನ್ ಕಾರ್ಮಿಕರಿಗೆ ನೈತಿಕ ಸ್ಥೈರ್ಯ ತುಂಬಿದರು.