Take a fresh look at your lifestyle.

ಸೋಮವಾರ ಟಿಕೆಎಂ ಕಾರ್ಮಿಕ ಚುನಾಯಿತ ಪ್ರತಿನಿಧಿಗಳ ಉಪವಾಸ ಸತ್ಯಾಗ್ರಹ

ಕಾರ್ಮಿಕ ಇಲಾಖೆಯು ವಸ್ತುಸ್ಥಿತಿ ಅರಿಯಲು ಕಾರ್ಖಾನೆಯನ್ನು ಪರಿಶೀಲನೆ ಮಾಡದೆ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವುದರಿಂದ ಕಾರ್ಮಿಕರು ವಿಭಿನ್ನ ರೀತಿಯ ಪ್ರತಿಭಟನೆಗಳ ಮೂಲಕ ದೇಶ, ವಿದೇಶಗಳ ಗಮನ ಸೆಳೆಯುತ್ತಿದ್ದಾರೆ

0
post ad

ಬಿಡದಿ: ಟಿಕೆಎಂ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ಮತ್ತಷ್ಟು ಜಠಿಲವಾಗುತ್ತಿದ್ದು, ಶಮನಗೊಳ್ಳುವ ಸೂಚನೆಗಳು ಭಾಸವಾಗುತ್ತಿಲ್ಲ. ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗಳು ಇದ್ದು-ಇಲ್ಲದಂತೆ, ಕಂಡು-ಕಾಣದಂತೆ ವರ್ತಿಸುತ್ತಿರುವ ಸನ್ನಿವೇಶದಲ್ಲಿ ಕಾರ್ಮಿಕರು ತಮ್ಮ ಹೋರಾಟವನ್ನು ತೀವ್ರತರಗೊಳಿಸಿದ್ದಾರೆ. ಆಡಳಿತ ಮಂಡಳಿಯ ನಿರಂಕುಶ ಧೋರಣೆ ಹಾಗೂ ಕಾರ್ಮಿಕರ ಸ್ವಾಭಿಮಾನದ ಕಿಚ್ಚುಗಳ ನಡುವಿನ ಮುಸಕಿನ ಗುದ್ದಾಟಕ್ಕೆ ಸದ್ಯಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಾರ್ಖಾನೆ ಮುಂಭಾಗ ಸಂಸ್ಥೆಯ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸುತ್ತಾ, ಕಾರ್ಮಿಕರು ನಡೆಸುತ್ತಿರುವ ಸ್ವಾಭಿಮಾನಿ ಹೋರಾಟ 55ನೇ ದಿನಕ್ಕೆ ಕಾಲಿಟ್ಟಿದೆ.
ಟೊಯೋಟಾ ಕಿಲೋಸ್ಕರ್‌ ಮೋಟಾರ್‌ ಕಂಪೆನಿ ಆಡಳಿತ ವರ್ಗ ನಡೆಸುತ್ತಿರುವ ಕಾರ್ಮಿಕರ ಮೇಲಿನ ಶೋಷಣೆ ಮತ್ತು ದಬ್ಬಾಳಿಕೆ ಕಾರ್ಮಿಕರಿಗೆ ಮಾಡು ಇಲ್ಲವೇ ಮಡಿ ಎಂಬ ದುಸ್ಥಿತಿ ತಂದೊಡ್ಡಿದ್ದು, ಟಿಕೆಎಂ ಕಾರ್ಮಿಕ ಚುನಾಯಿತ ಪ್ರತಿನಿಧಿಗಳು ಸೋಮವಾರದಂದು ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಟೊಯೋಟಾ  ಆಡಳಿತ ವರ್ಗ ಮತ್ತು ಕಾರ್ಮಿಕ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇನ್ನು, ಕಾರ್ಮಿಕ ಇಲಾಖೆಯು ವಸ್ತುಸ್ಥಿತಿ ಅರಿಯಲು ಕಾರ್ಖಾನೆಯನ್ನು ಪರಿಶೀಲನೆ ಮಾಡದೆ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವುದರಿಂದ ಕಾರ್ಮಿಕರು ವಿಭಿನ್ನ ರೀತಿಯ ಪ್ರತಿಭಟನೆಗಳ ಮೂಲಕ ದೇಶ, ವಿದೇಶಗಳ ಗಮನ ಸೆಳೆಯುತ್ತಿದ್ದಾರೆ.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು  65 ಕಾರ್ಮಿಕರ ಅಮಾನತ್ತು, 55 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು, ವಿರೋಧ ಪಕ್ಷಗಳು ಟಿಕೆಎಂಇಯು ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.