ಉಪವಾಸ ಸತ್ಯಾಗ್ರಹ ಆರಂಭಿಸಿದ ಟೊಯೋಟಾ ಕಾರ್ಮಿಕರು
ಟೊಯೋಟ ಆಡಳಿತ ವರ್ಗದ ವಿರುದ್ಧ ಕಾರ್ಮಿಕರು ಹೋರಾಟದ ಭಾಗವಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಟಿಕೆಎಂಇಯು ಪರವಾಗಿ ಎಐಸಿಸಿಟಿಯು ಇಂದು ಕಾರ್ಮಿಕ ಭವನದ ಎದರು ಪ್ರತಿಭಟನೆ ಕೈಗೊಂಡಿದೆ.


ರಾಮನಗರ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ನ ಕಾರ್ಮಿಕ ಸಂಘದ ಪದಾಧಿಕಾರಿಗಳು ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಟಿಕೆಎಂಇಯು ಸಂಘದ ಸ್ವಾಭಿಮಾನಿ ಹೋರಾಟ 46 ನೇ ದಿನಕ್ಕೆ ಕಾಲಿಟ್ಟಿದೆ. ಇನ್ನು ನೆನ್ನೆ ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ ಸುರೇಶ್ ರವರು ಆಡಳಿತ ಮಂಡಳಿ ಜೊತೆ ನಡೆಸಿದ ಸಂಧಾನ ಸಭೆ ವಿಫಲವಾದ ನಂತರ ಕಾರ್ಮಿಕರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಆಡಳಿತವರ್ಗದ ಹಠಮಾರಿ ಧೋರಣೆಯನ್ನು ವಿರುದ್ಧ ಕಾರ್ಮಿಕರು ದಿಟ್ಟವಾಗಿ ಎದುರಿಸುತ್ತಾ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಟೊಯೋಟಾ ಸಂಸ್ಥೆ ಅಕ್ರಮವಾಗಿ ಅಮಾನತು ಮಾಡಿರುವ ಎಲ್ಲ ಕಾರ್ಮಿಕರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು, ನ್ಯಾಯಯುತ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕಾರ್ಮಿಕರು ಪಟ್ಟು ಬಿಡದೆ ಸ್ವಾಭಿಮಾನಿ ಹೋರಾಟವನ್ನು ಮುಂದುವರೆಸಿದ್ದಾರೆ.
ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಜಟ್ಟು ಇಂದು 65 ಕಾರ್ಮಿಕರ ಅಮಾನತ್ತು, 46 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಟಿಕೆಎಂಇಯು ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ. ಈ ನಡುವೆ ಎಐಸಿಸಿಟಿಯು ಕಾರ್ಮಿಕ ಸಂಘಟನೆ ಇಂದು ಮಧ್ಯಾಹ್ನ ಕಾರ್ಮಿಕ ಭವನದ ಎದರು ಟೊಯೋಟಾ ಕಾರ್ಮಿಕರ ಪರ ಪ್ರತಿಭಟನೆಗೆ ಕರೆ ಕೊಟ್ಟಿದೆ.