Take a fresh look at your lifestyle.

ಉಪ ಕಾರ್ಮಿಕ ಆಯುಕ್ತರ ಕಛೇರಿ ಸ್ಥಳಾಂತರಕ್ಕೆ ಟಿಯುಸಿಸಿ ವಿರೋಧ

ಈ ಹಿಂದೆ, ಉಪ ಕಾರ್ಮಿಕ ಆಯುಕ್ತರು, ಬೆಂಗಳೂರು ವಿಭಾಗ-01 ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಕಚೇರಿಗಳನ್ನು ಗೊರಗುಂಟೆಪಾಳ್ಯಕ್ಕೆ ಸ್ಥಳಾಂತರಿಸಿದಾಗ ಆಡಳಿತ ಮತ್ತು ಮೂಲ ಸೌಲಭ್ಯಗಳಲ್ಲಿ ಹಲವು ಗೊಂದಲಗಳು, ಸಮಸ್ಯೆಗಳು ಕಂಡುಬಂದಿದ್ದರಿಂದ ಮತ್ತೆ ಮಾತೃ ಕಟ್ಟಡಕ್ಕೆ ವರ್ಗಾಯಿಸಿ ಸರ್ಕಾರ ಮುಜುಗರಕ್ಕೀಡಾಗಿತ್ತು

0
post ad

ಬೆಂಗಳೂರು :  ಉಪ ಕಾರ್ಮಿಕ ಆಯುಕ್ತರ ಕಛೇರಿ, ಪ್ರಾದೇಶಿಕ-1, ಬೆಂಗಳೂರು ಹಾಗೂ ಅವರ ಕಾರ್ಯ ವ್ಯಾಪ್ತಿಯಲ್ಲಿನ ಅಧೀನ ಕಛೇರಿಗಳನ್ನು ಬನ್ನೇರುಘಟ್ಟ ರಸ್ತೆ ಕಾರ್ಮಿಕ ಭವನ ಕಟ್ಟಡದಿಂದ ಬಾಗಲಗುಂಟೆಯಲ್ಲಿನ ಕರ್ನಾಟಕ ಕಾರ್ಮಿಕ ಅಧ್ಯಯನ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತರಿಸುವುದಕ್ಕೆ ಕಾರ್ಮಿಕ ಒಕ್ಕೂಟಗಳು ಹಾಗೂ ಸಂಘ ಸಂಸ್ಥೆಗಳಿಂದ ಬಾರೀ ವಿರೋಧ ವ್ಯಕ್ತವಾಗುತ್ತಿದೆ.

28-10-2020 ರಂದು ಸರ್ಕಾರದ ಉಪ ಕಾರ್ಯದರ್ಶಿ
ಸಂಧ್ಯಾ ಎಲ್‌.ನಾಯಕ್‌ ರವರು ಕಚೇರಿಯ ಸ್ಥಳಾಂತರದ ಆದೇಶ ಮಾಡಿದ್ದು, ಆ ಆದೇಶಕ್ಕೆ ಕಾರ್ಮಿಕ ಇಲಾಖೆ ಸೇರಿದಂತೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.

ಉಪ ಕಾರ್ಮಿಕ ಆಯುಕ್ತರ ಕಛೇರಿ, ಪ್ರಾದೇಶಿಕ -1
ಬೆಂಗಳೂರು ಹಾಗೂ ಅದರ ಅಧೀನದಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರು, ಬೆಂಗಳೂರು ವಿಭಾಗ-1 & 2, ಕಾರ್ಮಿಕ ಅಧಿಕಾರಿ, ಉಪ ವಿಭಾಗ-1,2, 5 ಹಾಗೂ ಸದರಿ ಕಛೇರಿಗಳ ಅಧೀನದಲ್ಲಿರುವ ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರ   ಕಛೇರಿಗಳನ್ನು ಬಾಗಲುಗುಂಟೆಯಲ್ಲಿ ಕರ್ನಾಟಕ ಕಾರ್ಮಿಕ ಅಧ್ಯಯನ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತಿಸಲು ಸರ್ಕಾರವು ಅನುಮತಿ ನೀಡಿದೆ.
ಈ ಆದೇಶ ಹೊರಡಿಸುವ ಮುನ್ನ ಸರ್ಕಾರ ರಾಷ್ಟೀಯ ಕಾರ್ಮಿಕ ಸಂಘಟನೆಗಳ ಜೊತೆ, ಆಡಳಿತ
ವರ್ಗದವರ ಜೊತೆ ಹಾಗೂ ಸ್ಥಳೀಯ ಕಾರ್ಮಿಕರ ಜೊತೆ ಸಮಾಲೋಚನೆ ನಡೆಸದೇ ಏಕಾಏಕಿ ಈ ಆದೇಶ ಮಾಡಲಾಗಿದೆ ಎನ್ನಲಾಗುತ್ತಿದೆ.
ಇನ್ನು ಈ ಹಿಂದೆ, ಉಪ ಕಾರ್ಮಿಕ ಆಯುಕ್ತರು,
ಬೆಂಗಳೂರು ವಿಭಾಗ-01 ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಕಚೇರಿಗಳನ್ನು ಗೊರಗುಂಟೆಪಾಳ್ಯಕ್ಕೆ ಸ್ಥಳಾಂತರಿಸಿದಾಗ ಆಡಳಿತ ಮತ್ತು ಮೂಲ ಸೌಲಭ್ಯಗಳಲ್ಲಿ ಹಲವು ಗೊಂದಲಗಳು, ಸಮಸ್ಯೆಗಳು ಕಂಡುಬಂದಿದ್ದರಿಂದ ಮತ್ತೆ ಮಾತೃ ಕಟ್ಟಡಕ್ಕೆ ವರ್ಗಾಯಿಸಿ ಸರ್ಕಾರ ಮುಜುಗರಕ್ಕೀಡಾಗಿತ್ತು.


ಸಾರ್ವಜನಿಕರ ಹಿತದೃಷ್ಠಿ ಕೋನ ಮತ್ತು ಪ್ರಜಾಪ್ರಭುತ್ವಾತ್ಮಕವಾಗಿ ಸೂಕ್ತ ಕ್ರಮಗಳನ್ನು  ಪರಿಶೀಲಿಸದೇ ಕಾರ್ಮಿಕ ಭವನದಿಂದ ಬಾಗಲುಕುಂಟೆ ಕರ್ನಾಟಕ ಲೇಬರ್‌ ಇನ್‌ಸ್ಟಿಟ್ಯೂಟ್‌ಗೆ ಮತ್ತೆ ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಈ ವಿಷಯದಲ್ಲಿ ಲೇಬರ್‌ ಇನ್‌ಸ್ಟಿಟ್ಯೂಟ್‌ನ ಅನುಮತಿಯ ವಿಚಾರದಲ್ಲಿ  ಸಂಶಯಕ್ಕೆ ಕಾರಣವಾಗಿದ್ದು, ಲೇಬರ್‌ ಇನ್‌ಸ್ಟಿಟ್ಯೂಟ್‌ನ ಅನುಮತಿಯ ವಿಚಾರವನ್ನು ಮರೆಮಾಚಲಾಗುತ್ತಿದೆ.
ಹಿರಿಯ ಅಧಿಕಾರಿಗಳ ಕಚೇರಿ ಸೇರಿದಂತೆ ಎಲ್ಲಾ ಕಾರ್ಮಿಕ ಸೌಲಭ್ಯಗಳು ಒಂದೇ ಕಡೆ ಲಭಿಸುತ್ತಿರುವ ಕಚೇರಿಯನ್ನು ಹೊರವಲಯಕ್ಕೆ ಬದಲಿಸುವುದರಿಂದ ಇತ್ತ ಕಾರ್ಮಿಕರಿಗೆ, ಅತ್ತ ಅಧಿಕಾರಿಗಳಿಗೆ ಅನಾನುಕೂಲತೆಗಳೇ ಎದರಾಗುವುದರಿಂದ, ಕಚೇರಿಯ ಸ್ಥಳಾಂತರದ ಆದೇಶವನ್ನು ತಕ್ಷಣವೇ ಸರ್ಕಾರ ಹಿಂಪಡೆಯಬೇಕೆಂದು ಕಾರ್ಮಿಕ ಒಕ್ಕೂಟಗಳು ಒಕ್ಕೊರಲಿನಿಂದ ಧ್ವನಿಯನ್ನು ಎತ್ತಿವೆ.
ಕಾರ್ಮಿಕ ವಿರೋಧಿ ನೀತಿಯಿಂದ ಕೂಡಿರುವ ಈ ಆದೇಶದಿಂದ ಸರ್ಕಾರಕ್ಕೆ ಕಿಂಚತ್ತು ಶೋಭೆ ತರುವುದಿಲ್ಲ, ಅಲ್ಲದೇ ಈ ಆದೇಶ ಕಾರ್ಮಿಕ ಸಂಘಟನೆಗಳಿಗೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು  ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ಸದರಿ ಆದೇಶವನ್ನು ಕೂಡಲೇ ಆದೇಶವನ್ನು ರದ್ದುಪಡಿಸಬೇಕೆಂದು ಟಿಯುಸಿಸಿ ಒಕ್ಕೂಟ ಒತ್ತಾಯಿಸಿದೆ.
ಈ ಬಗೆಗೆ ಟಿಯುಸಿಸಿ ಅಧ್ಯಕ್ಷರಾದ ಜಿ ಆರ್ ಶಿವಶಂಕರ್ ರವರು ಕಾರ್ಮಿಕ ಸಚಿವರಿಗೆ ಪತ್ರವನ್ನು ಬರೆದಿದ್ದು ವಾಯ್ಸ್ ಆಫ್ ವರ್ಕರ್ಸ್ ಗೆ ಈ ಪತ್ರ ಲಭಿಸಿದೆ.