Take a fresh look at your lifestyle.

ಮೌರ್ಯ ವೃತ್ತದಲ್ಲಿ ಉದಯಟಿವಿ ನೌಕರರ ಪ್ರತಿಭಟನೆ

ಉದಯ ಟಿವಿ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಿದ್ದ ನೌಕರರು ಮೌರ್ಯ ವೃತ್ತದಲ್ಲಿ ತಮ್ಮ ಹೋರಾಟವನ್ನು ಮುಂದುವರೆಸಿದರು

0
post ad

ಬೆಂಗಳೂರು : ರಾಜ್ಯದ ಜನಪ್ರಿಯ ಮನೋರಂಜನಾ ವಾಹಿನಿಯಾದ ಉದಯ ಟಿವಿ ನೌಕರರು ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.
ಸನ್ ಟಿವಿ ನೆಟ್‌ವರ್ಕ್ ನ ಅಂಗ ಸಂಸ್ಥೆಯಾದ ಉದಯ ಟಿವಿ ಆಡಳಿತ ಮಂಡಳಿ‌ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸುತ್ತ, ಸಂಸ್ಥೆ ತಕ್ಷಣವೇ ಶಾಸನಾತ್ಮಕ ಮೂಲಭೂತ ಸವಲತ್ತುಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಧರಣಿ ನಡೆಸಿದರು.
ಉದಯ ಟಿವಿ ಮ್ಯಾನೇಜ್ಮೆಂಟ್ ತನ್ನ ನೌಕರರನ್ನು ದೂರದ ಪ್ರದೇಶಗಳಿಗೆ ವರ್ಗಾವಣೆ ಮಾಡಿತ್ತು. ಈ ವರ್ಗಾವಣೆ ಕಾನೂನುಬಾಹಿರವೆಂದು ಆರೋಪಿಸುತ್ತ, ಕನ್ನಡಿಗರಿಗೆ ಬೆಂಗಳೂರು ಕೇಂದ್ರದಲ್ಲಿಯೇ ಕೆಲಸವನ್ನು ನೀಡಬೇಕೆಂದು ಆಗ್ರಹಿಸಿ ನೌಕರರು ಪ್ರತಿಭಟನೆಯನ್ನು ಆರಂಭಿಸಿದ್ದಾರೆ.


ಭಾಷೆಯೇ ಗೊತ್ತಿಲ್ಲದ ಕಡೆ ಕೆಲಸ ನಿರ್ವಹಿಸುವುದು ಕಷ್ಟಕರ, ಹತ್ತು ಸಾವಿರ ವೇತನ ಪಡೆದು ಕೋಲ್ಕತ್ತಾ, ನೋಯ್ಡಾಗಳಿಗೆ ಹೋಗಿ ಕೆಲಸ ನಿರ್ವಹಿಸುವುದು ಕಷ್ಟಸಾಧ್ಯ. ಕೆಲಸಕ್ಕೆ ಸೇರಿಕೊಳ್ಳುವ ಸಮಯದಲ್ಲಿ ಉದ್ಯೋಗ ಪತ್ರದಲ್ಲಿ ವರ್ಗಾವಣೆಯನ್ನು ಪ್ರಸ್ತಾಪಿಸಿರಲಿಲ್ಲ. ಮೂಲಭೂತ ಸವಲತ್ತುಗಳನ್ನು ಕೇಳಿದ ಕಾರಣಕ್ಕೆ ಸಿಬ್ಬಂದಿಯನ್ನ ಉದ್ದೇಶಪೂರ್ವಕವಾಗಿ ದೂರದ ಪ್ರದೇಶಗಳಿಗೆ ವರ್ಗಾವಣೆ ಮಾಡಲಾಗಿದೆ. ಇದು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ತಕ್ಷಣವೇ ಅಡಳಿತ ಮಂಡಳಿ ನೌಕರರಿಗೆ ನ್ಯಾಯ ಒದಗಿಸಬೇಕೆಂದು ಉದಯಟಿವಿ ಎಂಪ್ಲಾಯಿಸ್ ಯುನಿಯನ್ ನ ಕಾರ್ಯದರ್ಶಿ ವೇಣುಗೋಪಾಲ್ ಒತ್ತಾಯಿಸಿದರು.


ಉದಯಟಿವಿ ನೌಕರರ ಪ್ರತಿಭಟನೆಗೆ ಹಲವು ಕಾರ್ಮಿಕ, ಕನ್ನಡ ಪರ ಸಂಘಟನೆಗಳು ಸಾಥ್ ನೀಡಿದ್ದು, ಬಹುಜನ ಸಮಾಜ ಪಕ್ಷವು ತನ್ನ ಬೆಂಬಲ ಸೂಚಿಸುತ್ತಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿತ್ತು.
ಟಿಯುಸಿಸಿ ರಾಜ್ಯಾಧ್ಯಕ್ಷ ಜಿ.ಆರ್. ಶಿವಶಂಕರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಟಿಯುಸಿಸಿ ಸಮ್ಮಿಳಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಶಿವಶಂಕರ್ ಉದಯ ಟಿವಿ ಆಡಳಿತ ವರ್ಗ, ತನ್ನ ಕಾರ್ಮಿಕರನ್ನು ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದು, ಯಾವುದೇ ಕಾನೂನುಗಳನ್ನು ಗೌರವಿಸದೇ ದರ್ಪವನ್ನು ತೋರುತ್ತಿದೆ ಎಂದರು. ಮೂಲಭೂತ ಸವಲತ್ತುಗಳನ್ನು ಕೇಳಿದ ಪಾಪಕ್ಕೆ  ಕಾರ್ಮಿಕರ ಮೇಲೆ ಸವಾರಿ ಮಾಡಲು ಹೊರಟಿದೆ ಇದನ್ನು ಇಡೀ ಕಾರ್ಮಿಕ ಸಮುದಾಯ ಖಂಡಿಸುತ್ತದೆ ಎಂದರು.