Take a fresh look at your lifestyle.

ಉದಯ ಟಿವಿ ನೌಕರರ ಮೌನ ಪ್ರತಿಭಟನೆ

ಕಾನೂನು ಬಾಹಿರ ಅಂತರಾಜ್ಯ ವರ್ಗಾವಣೆ ಮತ್ತು ಆಡಳಿತ ವರ್ಗದ ಅನುಚಿತ ನೀತಿ ಖಂಡಿಸಿ ಉದಯ ಟಿವಿ ನೌಕರರು ಕಚೇರಿ ಒಳಗೆ ಮೌನ ಪ್ರತಿಭಟನೆ ನಡೆಸಿದರು.

0
post ad

ಬೆಂಗಳೂರು : ಕರ್ನಾಟಕದಲ್ಲಿ ಮೊದಲ ಖಾಸಗಿ ಉಪಗ್ರಹ ವಾಹಿನಿಯಾಗಿ ಮನೋರಂಜನೆಯ ಮಾಧ್ಯಮದಲ್ಲಿ ಇಂದಿಗೂ ಆದಾಯ ಮತ್ತು ವೀಕ್ಷಣೆಗಳಲ್ಲಿ ಅಗ್ರಸ್ಥಾನದಲ್ಲಿರುವ ಉದಯ ಟಿವಿ ಕಳೆದ ಎರಡೂವರೆ ದಶಕದ ಹಿಂದೆ ಆರಂಭವಾಗಿತ್ತು.  ಆದರೆ ಇತ್ತೀಚೆಗೆ ಆಡಳಿತ ಮಂಡಳಿಯು ಬೆಂಗಳೂರು ಕೇಂದ್ರದ ಸಿಬ್ಬಂದಿಯ ಬಗೆಗೆ ಅನುಸರಿಸುತ್ತಿರುವ ಅನುಚಿತ ನೀತಿ ಮತ್ತು ದೌರ್ಜನ್ಯವನ್ನು ಖಂಡಿಸಿ ನೌಕರರು ಕಚೇರಿಯ ಒಳಗೆ ಮೌನ ಪ್ರತಿಭಟನೆಯನ್ನು ಕೈಗೊಂಡಿದ್ದರು. ಕೋವಿಡ್ ಮಹಾಮ್ಮಾರಿಯ ಅತೀ ಭೀಕರತೆಯ ನಡುವೆ ಜೀವನ ಸಾಗಿಸುವುದೇ ದುಸ್ತರವಾಗಿರುವ ಬದಲಾಗಿರುವ ಸಂದರ್ಭದಲ್ಲಿ ಇಪ್ಪತ್ತೈದು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಸಿಬ್ಬಂದಿಯನ್ನು ಆಡಳಿತ ವರ್ಗ ಕಾನೂನು ಬಾಹಿರವಾಗಿ ಏಕಾಏಕಿ ಕೆಲಸದಿಂದ ವಜಾಗೊಳಿಸಲು ಮತ್ತು ಕಾನೂನು ಬಾಹಿರ ವರ್ಗಾವಣೆಯಲ್ಲಿ ತೊಡಗಿದೆಯಂತೆ. ಆರಂಭದಲ್ಲಿ ಬೆಂಗಳೂರು ಕೇಂದ್ರಿತ ಶಾಖೆಯಲ್ಲಿ ಮಾತ್ರ ಕೆಲಸ ನಿರ್ವಹಿಸಬೇಕೇಂದು ಸಿಬ್ಬಂದಿಗೆ ತಿಳಿಸಿದ್ದ ಆಡಳಿತ ಮಂಡಳಿ ಇದೀಗ ಕೆಲ ಮಹಿಳಾ ನೌಕರರನ್ನು ತೆಲಂಗಾಣ ಮತ್ತು ತಮಿಳುನಾಡಿಗೆ ವರ್ಗಾವಣೆ ಮಾಡಲು ಹೊರಟಿದೆ ಎಂಬುದು ಸಿಬ್ಬಂದಿಯ ಅಳಲು. ವಾರ್ಷಿಕ ನೂರಾರು ಕೋಟಿ ಲಾಭ ಗಳಿಸುವ ಉದಯ ಟಿವಿ ಆಡಳಿತ, ಹಲವು ಬಾರಿ ಮನವಿ ಮಾಡಿದರು ಇಪ್ಪತ್ತು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ಕನಿಷ್ಠ ವೇತನವನ್ನು ಜಾರಿ ಮಾಡಿಲ್ಲ, ಇನ್ನು ಮುಂಬಡ್ತಿ, ತುಟ್ಟಿಭತ್ಯೆ, ಬೋನಸ್ ನಂತಹ ಕಾನೂನಾನ್ಮಕ ಸೌಲಭ್ಯಗಳನ್ನು ಕೊಡುತ್ತಿಲ್ಲ. ಈ ಬಗೆಗೆ ಕಾರ್ಮಿಕ ಇಲಾಖೆಯಲ್ಲಿ ಹಲವು ವ್ಯಾಜ್ಯಗಳು ದಾಖಲಾಗಿವೆ. ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಕೆಲ ಸಿಬ್ಬಂದಿಯನ್ನು ಇನ್ನು ಖಾಯಂಗೊಳಿಸಿಲ್ಲ. ಮಹಿಳಾ ಭದ್ರತೆ, ಸುರಕ್ಷತೆಯ ದೃಷ್ಟಿಯಿಂದ ಈ ಹಿಂದೆ ಮಹಿಳಾ ಆಯೋಗವು ಆಡಳಿತ ಮಂಡಳಿಗೆ ಕೆಲ ಮಾರ್ಗಸೂಚಿಗಳನ್ನು ಸೂಚಿಸಿದ್ದರೂ ಅವುಗಳನ್ನು ಈ ವರೆಗೂ  ಅನುಷ್ಠಾನಕ್ಕೆ ತಂದಿಲ್ಲ.  ಆಡಳಿತ ವರ್ಗದ ವೈಖರಿಯನ್ನು ಕಾನೂನುಬದ್ಧವಾಗಿ ಮಹಿಳಾ ಆಯೋಗ ಮತ್ತು ಕಾರ್ಮಿಕ ಇಲಾಖೆಯ ಗಮನಕ್ಕೆ ತಂದ ಕಾರಣಕ್ಕೆ ಜಿದ್ದಿಗೆ ಬಿದ್ದಿರುವ ಆಡಳಿತ ಮಂಡಳಿಯು ಮಹಿಳಾ ಸಿಬ್ಬಂದಿ ಬಗೆಗೆ ದೈಹಿಕ, ಮತ್ತು ಮಾನಸಿಕ ಕಿರುಕುಳವನ್ನು ನೀಡುತ್ತಾ ಬರುತ್ತಿದೆ ಎಂದು ಉದಯ ಟಿವಿ ಎಂಪ್ಲಾಯಿಸ್ ಯೂನಿಯನ್ ಸದಸ್ಯರು ತಿಳಿಸಿದ್ದಾರೆ.  ಕೊವಿಡ್ -19 ಮಹಾಮ್ಮಾರಿಯ ರುದ್ರ ನರ್ತನದ ನಡುವೆ ಜೀವನ ನಡೆಸುವುದೇ ಕಷ್ಟವಾಗಿರುವ ಸಮಯದಲ್ಲಿ ಸಿಬ್ಬಂದಿಯನ್ನು ಏಕಾಏಕಿ ವರ್ಗಾವಣೆ ಮಾಡಿತ್ತಿರುವುದು ಮಹಿಳಾ ಸಿಬ್ಬಂದಿ ಮಾತ್ರವಲ್ಲ, ಅವರ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಐವತ್ತರ ವಯಸ್ಸಿ‌ನ ಸನಿಹದಲ್ಲಿರುವ ಮಹಿಳೆಯರಿಗೆ ಆರೋಗ್ಯ, ಭಾಷಾ ನೈಪುಣ್ಯತೆ, ಹವಾಮಾನ, ವಸತಿ, ಆದಾಯಗಳ ದೃಷ್ಟಿಯಿಂದ ಕೆಲಸ ನಿರ್ವಹಿಸಲು ಕಷ್ಟಸಾಧ್ಯವಾಗುತ್ತದೆ, ಎಲ್ಲದಕ್ಕಿಂತ ಮಿಗಿಲಾಗಿ ಕೋವಿಡ್ ಮಹಾಮ್ಮಾರಿ ಸಮಯದಲ್ಲಿ ಚೆನ್ನೈ ಮತ್ತು ಹೈದರಾಬಾದ್ ಗೆ ವರ್ಗಾವಣೆ ಕ್ರಮವು ಪ್ರಾಣಾತಂಕವೇ ಹೌದು. ಯಾವುದೇ ಸಂಸ್ಥೆಗಳು ನೌಕರರನ್ನು ಕೆಲಸದಿಂದ ತೆಗೆಯಬಾರದು ಎಂಬ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ಪಷ್ಟ ಮಾರ್ಗಸೂಚಿಯನ್ನು ದಿಕ್ಕರಿಸುತ್ತಿರುವ ಉದಯ ಟಿವಿ ಆಡಳಿತ ಮಂಡಳಿ ಕೆಲ ಸಿಬ್ಬಂದಿಯನ್ನು ವಜಾಗೊಳಿಸಲು ಮುಂದಾಗಿದೆ ಎನ್ನಲಾಗಿದ್ದು ಸಿಬ್ಬಂದಿಯ ವಿರುದ್ಧ ಆಡಳಿತ  ವರ್ಗ ನಡೆಸುತ್ತಿರುವ ನಿರಂತರ ಶೋಷಣೆ ಮತ್ತು ಅಸಂಬದ್ಧ ವರ್ಗಾವಣೆಯನ್ನು ತಡೆಯಲು ತಾವು ಮುಂದೆ ಉಗ್ರ ಹೋರಾಟದ ಹಾದಿಯನ್ನು ಹಿಡಿಯಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಯೂನಿಯನ್ ಕೆಲ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.